
Smart Meter Scam: Part-1 | ಹಗರಣದ ಸುಳಿಯಲ್ಲಿ ಸ್ಮಾರ್ಟ್ ಮೀಟರ್ ಯೋಜನೆ; ಏನಿದು ವಿವಾದ?
ರಾಜ್ಯದ ಪ್ರತಿ ಮನೆ ಮನೆಯಲ್ಲೂ ಸ್ಮಾರ್ಟ್ ಮೀಟರ್ ಅಳವಡಿಸುವ ಯೋಜನೆ ಚಾಲನೆ ದೊರೆತಿದೆ. ಯೋಜನೆ ವೇಗ ಪಡೆಯುವ ಜೊತೆಗೆ ಹಗರಣದ ವಾಸನೆಯನ್ನೂ ಅಂಟಿಸಿಕೊಂಡಿದೆ. ಯೋಜನೆಯಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ವಿದ್ಯುತ್ ಮಿತವ್ಯಯ ಹಾಗೂ ಅನಗತ್ಯ ವಿದ್ಯುತ್ ಸೋರಿಕೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಪರಿಷ್ಕೃತ ವಿತರಣಾ ವಲಯ ಯೋಜನೆ (ರಿವ್ಯಾಂಪ್ಡ್ ಡಿಸ್ಟ್ರಿಬ್ಯೂಷನ್ ಸೆಕ್ಷರ್ ಸರ್ವೀಸ್- RDSS) ಜಾರಿಗೊಳಿಸಿದೆ. ಈ ಯೋಜನೆಯಡಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಒತ್ತು ನೀಡಲಾಗಿದೆ. ಅದರಂತೆ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯು ವೇಗ ಪಡೆಯುವ ಜೊತೆಗೆ ಹಗರಣದ ವಾಸನೆಯನ್ನೂ ಅಂಟಿಸಿಕೊಂಡಿದೆ.
ಹೀಗಿರುವಾಗ, ಸ್ಮಾರ್ಟ್ ಮೀಟರ್ ಅಂದರೇನು, ಹೇಗೆ ಕಾರ್ಯ ನಿರ್ವಹಿಸುತ್ತದೆ. ಸಾಂಪ್ರದಾಯಿಕ ಅಥವಾ ಹಳೆಯ ಸ್ಟಾಟಿಕ್ ಮೀಟರ್ ಹಾಗೂ ಸ್ಮಾರ್ಟ್ ಮೀಟರ್ ಕಾರ್ಯನಿರ್ವಹಣೆ ಹೇಗೆ ಭಿನ್ನ, ದರ ತಾರತಮ್ಯವೇನು ಎಂಬುದರ ಕುರಿತ ವರದಿ ಇಲ್ಲಿದೆ.
ಸ್ಟಾಟಿಕ್ ಮೀಟರ್ ಏನು, ಎತ್ತ?
ವಿದ್ಯುತ್ ಬಳಕೆಯನ್ನು ಅಳೆಯಲು ಹಾಗೂ ದಾಖಲು ಮಾಡಲು ಈವರೆಗೆ ಸಾಂಪ್ರದಾಯಿಕ ಅಥವಾ ಸ್ಟಾಟಿಕ್ ಮೀಟರ್ ಬಳಸಲಾಗುತ್ತಿತ್ತು. ವಿದ್ಯುತ್ ಪೂರೈಕೆದಾರ ಕಂಪನಿಗಳ ಪ್ರತಿನಿಧಿಗಳು ಸ್ಟಾಟಿಂಗ್ ಮೀಟರ್‌ನಲ್ಲಿ ದಾಖಲಾಗುವ ಅಂಶಗಳನ್ನು ದಾಖಲಿಸಿಕೊಂಡು , ಅದರ ಆಧಾರದ ಮೇಲೆ ಬಿಲ್ ನೀಡಲಾಗುತ್ತಿತ್ತು. ಸ್ಟಾಟಿಕ್ ಮೀಟರ್‌ಗಳಲ್ಲಿ ಯಾಂತ್ರಿಕ ಲೋಪಗಳು ಸಾಮಾನ್ಯವಾಗಿದ್ದವು. ಇದರಿಂದ ಗ್ರಾಹಕರು ಹಾಗೂ ಪೂರೈಕೆದಾರರ ನಡುವೆ ಸಂವಹನ ಹಾಗೂ ಸಮನ್ವಯತೆ ಕಷ್ಟಕರವಾಗಿತ್ತು. ಸ್ಟಾಟಿಕ್ ಬಿಲ್ ರೀಡಿಂಗ್ ನಿಲ್ಲಿಸಿದರೆ ಅಂದಾಜು ಮೂಲಕ ಯೂನಿಟ್ ಲೆಕ್ಕ ಹಾಕುವ ಪರಿಸ್ಥಿತಿಯನ್ನೂ ಎದುರಿಸಬೇಕಾಗಿತ್ತು. ಕೆಲ ಕಡೆಗಳಲ್ಲಿ ಮೀಟರ್ ರೀಡಿಂಗ್ ಸ್ಥಗಿತಗೊಂಡಾಗ ಇಲ್ಲವೇ ಬಿಲ್ ಪಾವತಿಸದ ಕಾರಣ ಸಂಪರ್ಕ ಕಡಿತಗೊಳಿಸಿದಾಗ ಅನಧಿಕೃತವಾಗಿ ವಿದ್ಯುತ್ ಬಳಸಿಕೊಂಡ ನಿದರ್ಶನಗಳೂ ಕಂಡು ಬಂದಿದ್ದವು.
ಸ್ಮಾರ್ಟ್ ಮೀಟರ್ ಏನು, ನಿರ್ವಹಣೆ ಹೇಗೆ?
ಸ್ಮಾರ್ಟ್ ಮೀಟರ್ ಜಿಪಿಆರ್‌ಎಸ್ ಆಧಾರಿತ ಸಂವಹನ ದತ್ತಾಂಶ ಸಂಗ್ರಹಣೆಗೆ ಸರ್ವರ್ ಹಾಗೂ ಕ್ಲೌಡ್ ಸಂಪರ್ಕ ಹೊಂದಿರಲಿವೆ. ಅಡ್ವಾನ್ಸ್‌ಡ್ ಮೀಟರಿಂಗ್ ಇನ್ಫ್ರಾಸ್ಟ್ರಕ್ಚರ್ (ಎಎಂಐ) ತಂತ್ರಜ್ಞಾನದ ಸ್ಮಾರ್ಟ್ ಮೀಟರ್‌ಗಳು ವಿದ್ಯುತ್ ಬಳಕೆ ಮಾಹಿತಿ ಸಂಗ್ರಹಿಸುವ ಮೂಲಕ ಗ್ರಾಹಕರು ಹಾಗೂ ಎಸ್ಕಾಂಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ನೈಜ ಸಮಯದ ವಿದ್ಯುತ್ ಬಳಕೆ, ವೊಲ್ಟೇಜ್, ಪವರ್ ಫ್ಯಾಕ್ಟರ್ ಮಾಹಿತಿ ಹಾಗೂ ರೀಚಾರ್ಜ್ ಸೌಲಭ್ಯ ಪಡೆಯಬಹುದಾಗಿದೆ.
ನೈಜ-ಸಮಯದ ದತ್ತಾಂಶ ನೀಡುವುದರಿಂದ ಇಂಧನ ಕ್ಷೇತ್ರದ ದಕ್ಷತೆ ಹೆಚ್ಚಿಸಲಿವೆ. ಅಲ್ಲದೇ ವಿದ್ಯುತ್ ಸೋರಿಕೆಯನ್ನೂ ತಡೆಯಲಿವೆ. ಪೂರೈಕೆದಾರರಿಗೆ ನೈಜ ಸಮಯದ ಮೇಲ್ವಿಚಾರಣೆ, ಸ್ವಯಂಚಾಲಿತ ರೀಡಿಂಗ್ ನೀಡಲಿದೆ. ಈ ವ್ಯವಸ್ಥೆಯು ಪರಿಣಾಮಕಾರಿ ಗ್ರಿಡ್ ನಿರ್ವಹಣೆಗೆ ಅವಕಾಶ ಕಲ್ಪಿಸಿಕೊಡಲಿದೆ.
ಅನಲಾಗ್ ಮೀಟರ್‌ಗಿಂತ ಸ್ಮಾರ್ಟ್ ಮೀಟರ್ ಹೇಗೆ ಭಿನ್ನ?
ಅನಲಾಗ್ ಅಥವಾ ಸಾಂಪ್ರದಾಯಿಕ ಮೀಟರ್‌ಗಳಿಗಿಂತ ಸ್ಮಾರ್ಟ್ ಮೀಟರ್‌ಗಳು ಹೆಚ್ಚು ನಿಖರ ಹಾಗೂ ನವೀಕೃತ ಬಳಕೆಯ ದತ್ತಾಂಶ ಒದಗಿಸಲಿವೆ. ಬಳಸಿದ ವಿದ್ಯುತ್ ಅನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಣೆ ಮಾಡಲು ಅನುವು ಮಾಡಿಕೊಡಲಿದೆ. ಸ್ಮಾರ್ಟ್ ಗ್ರಿಡ್ ಮೂಲಸೌಕರ್ಯ ಕ್ಷೇತ್ರದ ಅಭಿವೃದ್ಧಿಗೆ ಸ್ಮಾರ್ಟ್ ಮೀಟರ್‌ಗಳು ಅತ್ಯಗತ್ಯವಾಗಿವೆ. ವಿದ್ಯುತ್ ಬಳಕೆ ಹಾಗೂ ವಿತರಣೆಯಲ್ಲಿ ವಿಶ್ವಾಸಾರ್ಹತೆ, ದಕ್ಷತೆ ಮತ್ತು ಸುಸ್ಥಿರತೆ ಹೆಚ್ಚಿಸಲು ಡಿಜಿಟಲ್ ತಂತ್ರಜ್ಞಾನದ ವಿದ್ಯುತ್ ಜಾಲ ವ್ಯವಸ್ಥೆ ಇದಾಗಿದೆ.
ಮೊದಲು ಪಾವತಿ, ನಂತರ ಬಳಕೆ
ವಿದ್ಯುತ್ ಬಳಕೆ, ವೋಲ್ಟೇಜ್ ಮಟ್ಟ, ಇನ್ನಿತರೆ ವಿದ್ಯುತ್ ಅಂಶಗಳನ್ನು ದಾಖಲಿಸುವ ಈ ಸ್ಮಾರ್ಟ್ ಮೀಟರ್‌ನಲ್ಲಿ ʼಮೊದಲು ಪಾವತಿಸಿ ನಂತರ ವಿದ್ಯುತ್ ಬಳಕೆ ಮಾಡುವ ಅವಕಾಶʼವೂ ಇದೆ. ತಮ್ಮ ಆಯ್ಕೆ ದಿನಗಳ ಅವಧಿಗೆ ಹಣ ಪಾವತಿಸಿ ರಿಚಾರ್ಜ್ ಮಾಡಿಕೊಳ್ಳಬಹುದು. ಒಂದು ವೇಳೆ ವಿದ್ಯುತ್ ಕಡಿತಗೊಂಡರೆ ಗ್ರಾಹಕರು ಬಿಲ್ ಪಾವತಿಸಿದ ತಕ್ಷಣ ವಿದ್ಯುತ್ ಸಂಪರ್ಕ ಪಡೆಯಬಹುದು.
ಇವು ಪ್ರೀಪೇಯ್ಡ್ ಸಿಮ್ ಕಾರ್ಡ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿವೆ. ಮಾಸಿಕ ಶುಲ್ಕದಿಂದ ತಪ್ಪಿಸಿಕೊಳ್ಳಲು ಇಚ್ಛಿಸುವವರಿಗೆ ಮುಂಚಿತವಾಗಿ ವಿದ್ಯುತ್ ಖರೀದಿಸುವ ಅವಕಾಶವೂ ಇದರಲ್ಲಿದೆ. ವಿದ್ಯುತ್ ಬಳಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಸ್ಮಾರ್ಟ್ ಮೀಟರ್‌ಗಳು ಸಹಾಯ ಮಾಡಲಿವೆ. ವಿದ್ಯುತ್ ಸೋರಿಕೆಯನ್ನೂ ತಡೆಯಬಹುದಾಗಿದೆ.
ದರ ವ್ಯತ್ಯಾಸ ಹೇಗಿದೆ?
ವಿವಿಧ ಕಂಪೆನಿಗಳ ಸಿಂಗಲ್ ಫೇಸ್-2 ಸ್ಟಾಟಿಕ್ ಮೀಟರ್‌ಗಳು ಕೇವಲ 980 ರೂ.ಗಳಿಗೆ ಲಭ್ಯವಾಗುತ್ತಿತ್ತು. ಎಲ್ ಟಿ ತ್ರೀಫೇಸ್-4 ಸ್ಟಾಟಿಕ್ ಮೀಟರ್ 2,430 ರೂ, ಎಲ್‌ಟಿ ತ್ರೀಫೇಸ್ ಸಿಟಿ ಆಪರೇಟೆಡ್ ಮೀಟರ್ ಬೆಲೆ 3,450 ರೂ. ಇತ್ತು. ಆದರೆ, ಸ್ಮಾರ್ಟ್ ಮೀಟರ್ ಗಳ ಬೆಲೆ ಹೆಚ್ಚು ತುಟ್ಟಿಯಾಗಿವೆ. ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್ ಗೆ 2,461 ರೂ., ಸಿಂಗಲ್ ಫೇಸ್ -2 ಸ್ಮಾರ್ಟ್ ಮೀಟರ್ ಬೆಲೆ 4,800 ರೂ., ಎಲ್‌ಟಿ ತ್ರೀ ಫೇಸ್ ಸ್ಮಾರ್ಟ್ ಮೀಟರ್ 3,292 ರೂ., ಎಲ್‌ಟಿ ತ್ರೀಫೇಸ್- 4 ಸ್ಟಾಟಿಕ್ ಮೀಟರ್ ಬೆಲೆ 8,500 ರೂ., ಎಲ್‌ಟಿ ತ್ರೀಫೇಸ್ ಸಿಟಿ ಆಪರೇಟೆಡ್ ಸ್ಮಾರ್ಟ್ ಮೀಟರ್ ಬೆಲೆ 10,900 ರೂ. ಗಳಂತೆ ಮಾರಾಟವಾಗುತ್ತಿವೆ.
ಸಹಾಯಧನ ಸಿಗುವುದಿಲ್ಲ
ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆಗೆ ಕೇಂದ್ರದ ಅನುಮೋದನೆ ದೊರೆತಿಲ್ಲ. ಪರಿಣಾಮ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ನೀಡುವ ಸಹಾಯಧನ ಕೈ ತಪ್ಪಿದೆ. ಹಾಗಾಗಿ ಸ್ಮಾರ್ಟ್ ಮೀಟರ್ ಮೂಲ ಬೆಲೆಯನ್ನು ಸಂಪೂರ್ಣವಾಗಿ ಗ್ರಾಹಕರೇ ಭರಿಸುವಂತಾಗಿದೆ.
ವಿದ್ಯುತ್ ಸೋರಿಕೆ ತಡೆಯುವ ಹಾಗೂ ಬಾಕಿ ಶುಲ್ಕ ಪಾವತಿಯಲ್ಲಾಗುವ ವಿಳಂಬದಿಂದ ನಷ್ಟ ಅನುಭವಿಸುವುದನ್ನು ತಡೆಯಲು ಕೇಂದ್ರ ಇಂಧನ ಸಚಿವಾಲಯ, 2021-22ರಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಯೋಜನೆ ಜಾರಿಗೆ ತಂದಿತ್ತು. ಯೋಜನೆಯಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಎಲ್ಲ ಸ್ವರೂಪದ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿತ್ತು. ಆದರೆ, ಯೋಜನೆ ಜಾರಿಗೂ ಮುನ್ನ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿತ್ತು. ಕರ್ನಾಟಕ ಸರ್ಕಾರ 2022ರಲ್ಲಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ, ತಾಂತ್ರಿಕ ಕಾರಣ ನೀಡಿ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ.
2025ರಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರೂ ಅನುಮೋದನೆ ದೊರೆತಿರಲಿಲ್ಲ. ಯೋಜನೆಯ ಷರತ್ತುಗಳನ್ನು ಪೂರೈಸದ ಕಾರಣ ಕರ್ನಾಟಕಕ್ಕೆ ಅನುಮೋದನೆ ನೀಡಿಲ್ಲ ಎಂದು ಕೇಂದ್ರ ಇಂಧನ ಸಚಿವರು ಈಚೆಗೆ ಲೋಕಸಭೆಗೆ ತಿಳಿಸಿದ್ದರು. ಇದರಿಂದ ಪ್ರತಿ ಸ್ಮಾರ್ಟ್ ಮೀಟರ್‌ಗೆ ಕೇಂದ್ರ ಸರ್ಕಾರ ನೀಡುವ 900ರೂ. ಸಹಾಯಧನ ರಾಜ್ಯದ ಗ್ರಾಹಕರಿಗೆ ಸಿಗದಂತಾಗಿದೆ.
ಒಪ್ಪಿಗೆ ಇಲ್ಲದೆಯೂ ಯೋಜನೆ ಜಾರಿ
ಹಲವು ಪ್ರಯತ್ನಗಳ ನಂತರವೂ ಅನುಮೋದನೆ ಸಿಗದ ಕಾರಣ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಎಸ್ಕಾಂಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಸಲ್ಲಿಸಿದ್ದವು. ಆದರೆ, ರಾಜ್ಯದ ಪ್ರಸ್ತಾವಕ್ಕೆ ಕೆಇಆರ್‌ಸಿ ಆಕ್ಷೇಪ ವ್ಯಕ್ತಪಡಿಸಿತ್ತು. ಆರ್‌ಡಿಎಸ್‌ಎಸ್ ಯೋಜನೆಯಡಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಇದು ತಿಳಿದಿದ್ದರೂ ಎಸ್ಕಾಂಗಳು ಮೇಲಿಂದ ಮೇಲೆ ಪ್ರಸ್ತಾವ ಸಲ್ಲಿಸುತ್ತಿವೆ ಎಂದು ಹೇಳಿತ್ತು. ಇದಾದ ಕೆಲ ದಿನಗಳಲ್ಲೇ ಕೆಇಆರ್‌ಸಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಒಪ್ಪಿಗೆ ನೀಡಿತ್ತು. ರಾಜ್ಯ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿ, ಸ್ಮಾರ್ಟ್ ಮೀಟರ್ ಅಳವಡಿಕೆಗೆ ಮುಂದಾಗಿತ್ತು.
(Smart Meter Scam: Part-2: ಸ್ಮಾರ್ಟ್ ಮೀಟರ್ ಅಳವಡಿಕೆ ಮತ್ತು ನಿರ್ವಹಣೆ ಟೆಂಡರ್‌ನಲ್ಲಿ ಸುಮಾರು 15,000 ಕೋಟಿ ರೂ. ಹಗರಣ ಪುಷ್ಟೀಕರಿಸುವ ಅಂಶಗಳೇನು ಎಂಬ ಬಗ್ಗೆ ವರದಿ ಶುಕ್ರವಾರ ಪ್ರಕಟವಾಗಲಿದೆ)