ಕೋಟ್ಯಂತರ ರೂಪಾಯಿಗಳ ಕನಸು, ವರ್ಷದಲ್ಲೇ ಭಗ್ನ: ಪಾಳು ಬಿದ್ದ ಬೆಂಗಳೂರಿನ ಸ್ಮಾರ್ಟ್ ಬಸ್ ನಿಲ್ದಾಣ
x

ನೃಪತುಂಗ ರಸ್ತೆಯ ಸ್ಮಾರ್ಟ್ ಬಸ್ ನಿಲ್ದಾಣ

ಕೋಟ್ಯಂತರ ರೂಪಾಯಿಗಳ ಕನಸು, ವರ್ಷದಲ್ಲೇ ಭಗ್ನ: ಪಾಳು ಬಿದ್ದ ಬೆಂಗಳೂರಿನ 'ಸ್ಮಾರ್ಟ್' ಬಸ್ ನಿಲ್ದಾಣ

ಕೇವಲ ಒಂದು ವರ್ಷದೊಳಗೆ ಈ ಸ್ಮಾರ್ಟ್‌ ಬಸ್‌ ನಿಲ್ದಾಣದ ಕನಸು ಸಂಪೂರ್ಣವಾಗಿ ಪಾಳುಬಿದ್ದಿದೆ. ನಿಲ್ದಾಣದ ಮುಖ್ಯ ಉದ್ದೇಶವೇ ಮಹಿಳಾ ಸುರಕ್ಷತೆ. ಆದರೆ ಇಂದು ಅದೇ ಸೌಲಭ್ಯಗಳು ನಿಷ್ಕ್ರಿಯವಾಗಿವೆ.


Click the Play button to hear this message in audio format

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ನೃಪತುಂಗ ರಸ್ತೆಯ 'ಸ್ಮಾರ್ಟ್ ಬಸ್ ನಿಲ್ದಾಣ'ವು ಒಂದು ಕಾಲದಲ್ಲಿ ಮಹಿಳಾ ಸುರಕ್ಷತೆಯ ಭರವಸೆಯ ಸಂಕೇತವಾಗಿತ್ತು. ಶಿಲ್ಪಾ ಫೌಂಡೇಶನ್ ಮತ್ತು ಸೇಪಿಯನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ 1.1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಅತ್ಯಾಧುನಿಕ ನಿಲ್ದಾಣವನ್ನು, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು 2024ರ ಅಕ್ಟೋಬರ್ 2 ರಂದು ಬಹಳ ವಿಜೃಂಭಣೆಯಿಂದ ಉದ್ಘಾಟಿಸಿದ್ದರು. ಆದರೆ, ಕೇವಲ ಒಂದು ವರ್ಷದೊಳಗೆ ಆ ಭರವಸೆಯ ದೀಪ ಆರಿಹೋಗಿದೆ, ಮತ್ತು ಈ 'ಸ್ಮಾರ್ಟ್' ನಿಲ್ದಾಣವು ಸರ್ಕಾರದ ನಿರ್ಲಕ್ಷ್ಯಕ್ಕೆ ಸ್ಮಾರಕದಂತೆ ನಿಂತಿದೆ.

ಈ ನಿಲ್ದಾಣದ ಮುಖ್ಯ ಆಕರ್ಷಣೆಯೇ ಮಹಿಳಾ ಸುರಕ್ಷತೆಗೆ ನೀಡಿದ್ದ ಆದ್ಯತೆ. ತುರ್ತು ಸಂದರ್ಭದಲ್ಲಿ ಮಹಿಳೆಯರಿಗೆ ಆಸರೆಯಾಗಬೇಕಿದ್ದ ‘ಪ್ಯಾನಿಕ್ ಬಟನ್’ ಈಗ ಕೇವಲ ಗೋಡೆಗಂಟಿದ ಅಲಂಕಾರಿಕ ವಸ್ತುವಾಗಿದೆ. ಒತ್ತಿದ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಎಚ್ಚರಿಕೆ ರವಾನಿಸಬೇಕಿದ್ದ ಆ ತಂತ್ರಜ್ಞಾನ ಇಂದು ಮೂಕವಾಗಿದೆ. ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅಳವಡಿಸಲಾಗಿದ್ದ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಮಷಿನ್ ಕೂಡಾ ಧೂಳು ಹಿಡಿದು ನಿಂತಿದೆ. ರಾತ್ರಿಯಿಡೀ ಕಣ್ಗಾವಲಿಡಬೇಕಿದ್ದ ಸಿಸಿಟಿವಿ ಕ್ಯಾಮೆರಾಗಳು ಕಣ್ಣು ಮುಚ್ಚಿವೆ, ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ನಿಷ್ಕ್ರಿಯಗೊಂಡಿವೆ. ಈ ಹಿಂದೆ ಡಿಜಿಟಲ್ ಡಿಸ್ಪ್ಲೇಯಲ್ಲಿ ಬಸ್‌ಗಳ ಆಗಮನದ ಸಮಯವನ್ನು ನೋಡಿ ಖುಷಿಪಡುತ್ತಿದ್ದ ಪ್ರಯಾಣಿಕರು, ಈಗ ಕತ್ತಲೆಯಲ್ಲಿ ಬಸ್ಸಿಗಾಗಿ ಕಾದು ನಿಲ್ಲುವಂತಾಗಿದೆ.

ಕಂಪನಿಯೂ ನಿರ್ಲಕ್ಷ್ಯ

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಿಸಲಾದ ಈ ನಿಲ್ದಾಣದ ನಿರ್ವಹಣಾ ಜವಾಬ್ದಾರಿಯನ್ನು ಐದು ವರ್ಷಗಳ ಕಾಲ ಸಂಬಂಧಪಟ್ಟ ಕಂಪನಿಯೇ ವಹಿಸಿಕೊಳ್ಳಬೇಕಿತ್ತು. ಆದರೆ, ಈ ಜವಾಬ್ದಾರಿಯನ್ನು ಬಿಬಿಎಂಪಿ ವಹಿಸಿಕೊಂಡ ಬಳಿಕ, ನಿರ್ವಹಣೆಯ ಕೊರತೆ ಮತ್ತು ತಾಂತ್ರಿಕ ನಿರ್ಲಕ್ಷ್ಯದಿಂದಾಗಿ ಯೋಜನೆಯು ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಆರಂಭದ ಕೆಲವು ತಿಂಗಳುಗಳು ಸರಿಯಾಗಿಯೇ ಕಾರ್ಯನಿರ್ವಹಿಸುತ್ತಿದ್ದ ಈ ಸೌಲಭ್ಯಗಳು, ಇಂದು ಸರ್ಕಾರದ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿವೆ.

ಈ ಕುರಿತು ಖಾಸಗಿ ಉದ್ಯೋಗಿ ಸಂಗೀತ ಅವರು 'ದ ಫೆಡರಲ್ ಕರ್ನಾಟಕ' ಜತೆ ತಮ್ಮ ಆಕ್ರೋಶವನ್ನು ಹಂಚಿಕೊಳ್ಳುತ್ತಾ, "ಇಷ್ಟೆಲ್ಲಾ ಸೌಲಭ್ಯಗಳನ್ನು ಘೋಷಿಸಿ ನಿರ್ಮಾಣ ಮಾಡಿದರೂ, ಅವುಗಳನ್ನು ನಿರ್ವಹಿಸುವವರು ಯಾರು? ಇವು ಕೇವಲ ಚುನಾವಣಾ ಸಮಯದಲ್ಲಿ ಮತಗಳನ್ನು ಸೆಳೆಯಲು ಮಾಡಿದ ತಮಾಷೆಯೇ?" ಎಂದು ಪ್ರಶ್ನಿಸುತ್ತಾರೆ. ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ, ಅದನ್ನು ನೆಲಮಟ್ಟದಲ್ಲಿ ಕಾರ್ಯರೂಪಕ್ಕೆ ತರಲು ವಿಫಲವಾಗಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನ ಮತ್ತು ಹತಾಶೆಯನ್ನು ಮೂಡಿಸಿದೆ. ಒಂದು ಕಾಲದಲ್ಲಿ ಭರವಸೆ ಮೂಡಿಸಿದ್ದ ಈ ಯೋಜನೆ, ಇಂದು ತನ್ನ ಮೂಲ ಉದ್ದೇಶವನ್ನೇ ಮರೆತು ಪಾಳು ಬಿದ್ದಿರುವುದು ದುರಂತವೇ ಸರಿ.

Read More
Next Story