Small scale industries are the way forward for young farmers: Minister N. Chaluvarayaswamy
x

ಕೃಷಿ ಉತ್ಪನ್ನಗಳನ್ನು ಸಚಿವ ಎನ್‌. ಚಲುವರಾಯಸ್ವಾಮಿ ವೀಕ್ಷಿಸಿದರು.

ಯುವ ರೈತರಿಗೆ ಕಿರು ಉದ್ಯಮವೇ ದಾರಿ: ಸಚಿವ ಎನ್. ಚಲುವರಾಯಸ್ವಾಮಿ

ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡುವ ಬದಲು, ಅದನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ, ಆಕರ್ಷಕವಾಗಿ ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.


Click the Play button to hear this message in audio format

ಕೃಷಿ ಕುಟುಂಬದ ಯುವಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಂಇ) ಯೋಜನೆ ಒಂದು ಅತ್ಯುತ್ತಮ ಮಾದರಿಯಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟೆಂಬರ್ 10ರಂದು ಚಿಕ್ಕಮಗಳೂರು ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಪಿಎಂಎಫ್‌ಎಂಇ ಯೋಜನೆ ಕುರಿತ ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ವಿದ್ಯೆಗೂ ವೃತ್ತಿಗೂ ಯಾವಾಗಲೂ ಸಂಬಂಧವಿರುವುದಿಲ್ಲ. ಶಿಕ್ಷಣವು ಕೇವಲ ಜ್ಞಾನಕ್ಕೆ ದಾರಿಯಾಗಿದೆ. ವಿದ್ಯಾವಂತ ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡರೆ, ಸಾಮಾನ್ಯ ರೈತರಿಗಿಂತ ವಿಭಿನ್ನವಾಗಿ ಯೋಚಿಸಿ, ಆಧುನಿಕ ತಂತ್ರಜ್ಞಾನ ಬಳಸಿ ಹೆಚ್ಚು ಲಾಭ ಗಳಿಸಬಹುದು," ಎಂದು ಅವರು ಹೇಳಿದರು.

ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡುವ ಬದಲು, ಅದನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ, ಆಕರ್ಷಕವಾಗಿ ಪ್ಯಾಕಿಂಗ್ ಮತ್ತು ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿದರೆ ಅಧಿಕ ಲಾಭ ಗಳಿಸಬಹುದು. ಇದಕ್ಕಾಗಿ ಪಿಎಂಎಫ್‌ಎಂಇ ಯೋಜನೆಯಡಿ ಸರ್ಕಾರವು ಕಿರು ಉದ್ದಿಮೆಗಳನ್ನು ಸ್ಥಾಪಿಸಲು ದೊಡ್ಡ ಪ್ರಮಾಣದಲ್ಲಿ ಸಹಾಯಧನ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

"ಕರ್ನಾಟಕದಲ್ಲಿ ಈ ಯೋಜನೆಗೆ ವಿಶೇಷ ಒತ್ತು ನೀಡಲಾಗಿದ್ದು, ದೇಶದಲ್ಲೇ ಅತಿ ಹೆಚ್ಚು ಅಂದರೆ ಶೇ. 60ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಒಟ್ಟು 15 ಲಕ್ಷ ರೂವರೆಗಿನ ಸಹಾಯಧನದಲ್ಲಿ, ರಾಜ್ಯ ಸರ್ಕಾರವು ₹9 ಲಕ್ಷವನ್ನು ಭರಿಸಿದರೆ, ಕೇಂದ್ರ ಸರ್ಕಾರವು ಕೇವಲ 6 ಲಕ್ಷ ರೂಪಾಯಿ ನೀಡುತ್ತಿದೆ. ಯುವ ರೈತರು ಮತ್ತು ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು," ಎಂದು ಚಲುವರಾಯಸ್ವಾಮಿ ಕರೆ ನೀಡಿದರು.

ಬ್ಯಾಂಕುಗಳು ಉದ್ದಿಮೆ ಸ್ಥಾಪನೆಗೆ ಅರ್ಜಿ ಸಲ್ಲಿಸುವವರಿಗೆ ಸಿಬಿಲ್ ಸ್ಕೋರ್ ಅಥವಾ ಗ್ಯಾರಂಟಿಯಂತಹ ವಿಷಯಗಳಿಗೆ ಅನಗತ್ಯ ಒತ್ತಡ ಹೇರದೆ, ಸುಲಭವಾಗಿ ಸಾಲ ಸೌಲಭ್ಯ ಒದಗಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಇದೇ ವೇಳೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಶಾಸಕರಾದ ತಮ್ಮಯ್ಯ, ರಾಜೇಗೌಡ, ಆನಂದ್, ವಿಧಾನಪರಿಷತ್ ಸದಸ್ಯ ಬೋಜೆಗೌಡ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಒ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Read More
Next Story