
ಮೈಸೂರಿನಲ್ಲೇ ಎಸ್.ಎಲ್.ಭೈರಪ್ಪ ಸ್ಮಾರಕ; ಸಿಎಂ ಘೋಷಣೆ
ಭೈರಪ್ಪ ಅವರನ್ನು 'ಸರಸ್ವತಿ ಸಮ್ಮಾನ್' ಸಹಿತ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಅವರ ಸಾಹಿತ್ಯ ಕೃಷಿ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನೂ ನೀಡಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಪಡೆಯುವ ಅರ್ಹತೆ ಇತ್ತು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಖ್ಯಾತ ಕಾದಂಬತಿಗಾರ ಎಸ್.ಎಲ್. ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗುರುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಎಸ್.ಎಲ್.ಭೈರಪ್ಪ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ಬಳಿಕ ಅವರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.
ಸಾಹಿತಿ ಭೈರಪ್ಪ ಅವರು ಹೆಚ್ಚು ಕಾಲ ಮೈಸೂರಿನಲ್ಲೇ ವಾಸವಿದ್ದರು. ಅವರ ಹಲವು ಕಾದಂಬರಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡ ಯಾವ ಸಾಹಿತಿಯ ಕೃತಿಗಳೂ ಕೂಡ ಇಷ್ಟು ಭಾಷೆಗೆ ಅನುವಾದಗೊಂಡಿಲ್ಲ. ಹಾಗಾಗಿ, ಮೈಸೂರಿನಲ್ಲೇ ಸ್ಮಾರಕ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಜ್ಞಾನಪೀಠ ಪ್ರಶಸ್ತಿ ಸಿಗಬೇಕಿತ್ತು
ಭೈರಪ್ಪ ಅವರಿಗೆ 'ಸರಸ್ವತಿ ಸಮ್ಮಾನ್' ಸಹಿತ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಅವರ ಸಾಹಿತ್ಯ ಕೃಷಿ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನೂ ನೀಡಬೇಕಿತ್ತು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಪಡೆಯುವ ಅರ್ಹತೆ ಇತ್ತು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸೈದ್ಧಾಂತಿಕ ವಿಚಾರದಲ್ಲಿ ಭಿನಾಭಿಪ್ರಾಯವಿದ್ದರೂ ನಂಬಿದ್ದ ವಿಚಾರಕ್ಕೆ ಬದ್ದರಾಗಿ ಬರೆದವರು ಭೈರಪ್ಪನವರು. ಆತ್ಮತೃಪ್ತಿಗಾಗಿ ಕಾದಂಬರಿ ಬರೆಯುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದರು. ಎಲ್ಲರೂ ಅವರ ಅಭಿಮಾನಿ ಆಗಬೇಕು ಎಂದೇನಿಲ್ಲ. ಓದುಗರೂ ಆಗಬಹುದು ಎಂದರು.
ಭೈರಪ್ಪ ಸಾಧನೆಗೆ ಮೆಚ್ಚುಗೆ
ಕನ್ನಡ ಸಾಹಿತ್ಯದ ದಿಗ್ಗಜ ಸಾಹಿತಿ ಎಸ್.ಎಲ್. ಭೈರಪ್ಪ ಅವರ ಸಾಹಿತ್ಯವನ್ನು ಶ್ಲಾಘಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಭೈರಪ್ಪರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಸಾಹಿತಿ. ಅವರ ಕಾದಂಬರಿಗಳು ಹಲವು ದೇಶಗಳ ಭಾಷೆಗಳಿಗೆ ಅನುವಾದಗೊಂಡಿವೆ. ಕೆಲವು ಕೃತಿಗಳು ಚಲನಚಿತ್ರಗಳಾಗಿವೆ ಎಂದು ಹೇಳಿದರು.
ಇದಕ್ಕೂ ಮುನ್ನ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಭೈರಪ್ಪನವರ ಜೀವನ ಮತ್ತು ಕೃತಿಗಳು ಮುಂದಿನ ಪೀಳಿಗೆಯವರಿಗೆ ಮಾರ್ಗದರ್ಶನ ನೀಡುವಂತಹವು. ಅವರ ಸಾಹಿತ್ಯ ಸೇವೆಗೆ ಯೋಗ್ಯ ಗೌರವ ಸಲ್ಲಿಸಲು ಸರ್ಕಾರ ಸ್ಮಾರಕ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಭೈರಪ್ಪ ಅದ್ವಿತೀಯ ಸಾಹಿತಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಕೂಡ ಭೈರಪ್ಪ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
'ಭೈರಪ್ಪ ಅವರು ಕನ್ನಡದ ಅದ್ವಿತೀಯ ಸಾಹಿತಿ. ಸಾಹಿತ್ಯ, ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ ಮಾತ್ರವಲ್ಲದೇ ಹೊರ ದೇಶದಲ್ಲೂ ಅವರು ಜನಪ್ರಿಯರು' ಎಂದು ಯಡಿಯೂರಪ್ಪ ಹೇಳಿದರು.