ಚಿಕ್ಕಮಗಳೂರಿನಲ್ಲಿ ನಾಳೆ 6 ನಕ್ಸಲರ ಶರಣಾಗತಿ; ಇನ್ನು ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ?
ಜ. 4 ರಂದು ರಹಸ್ಯ ಸ್ಥಳದಲ್ಲಿ ನಕ್ಸಲ್ ಶರಣಾಗತಿ/ಪುನರ್ವಸತಿ ಸಮಿತಿಯ 8 ಸದಸ್ಯರು ಮತ್ತು ನಕ್ಸಲರ ಸಭೆ ನಡೆದಿದೆ. ಜ. 8 (ಬುಧವಾರ) ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಿನಲ್ಲಿ ಶರಣಾಗತಿ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕದ ಪಶ್ಚಿಮಘಟ್ಟದ ಹಸಿರು ಹಾಸಿನ ಮೇಲೆ ಚೆಲ್ಲಿದ್ದ ನೆತ್ತರಿನ ಕರಾಳ ಇತಿಹಾಸಕ್ಕೆ ಕೊನೆ ಹಾಡುವ ಕ್ಷಣ ಸನ್ನಿಹಿತವಾಗಿದೆ. ರಾಜ್ಯವನ್ನು ನಕ್ಸಲ್ ಚಳವಳಿ ಮುಕ್ತ ಮಾಡಬೇಕೆಂಬ ಕಾರಣಕ್ಕೆ ಜೀವಪರವಾಗಿ ಚಿಂತಿಸುವ ಅನೇಕರು ಈ ನೆಲೆಯಲ್ಲಿ ಕೆಲಸ ಮಾಡಿದ್ದರಿಂದ ಸರ್ಕಾರದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಫಲವಾಗಿ ಬುಧವಾರ ಪಶ್ಚಿಮಘಟ್ಟದ ಕಾಫಿನಾಡು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ರಾಜ್ಯದಲ್ಲಿ ಸಕ್ರಿಯವಾಗಿರುವ ನಕ್ಸಲ್ ಸಂಘಟನೆಯ ಪ್ರಮುಖ ಆರು ಕಾಮ್ರೇಡ್‌ಗಳು ಶರಣಾಗಲು ಸಮ್ಮತಿ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಕ್ಸಲರಿಗೆ ಶರಣಾಗುವಂತೆ ಕರೆ ನೀಡಿದ್ದರು. ಈ ಕರೆಯೂ ಶರಣಾಗತಿ ಪ್ರಕ್ರಿಯೆಯ ಒಂದು ಭಾಗವೇ ಆಗಿತ್ತು. ಕಳೆದ ಒಂದು ವಾರದಿಂದ ಕಾಡು ಮತ್ತು ನಾಡಿನ ನಡುವೆ ಸತತ ಸಂಪರ್ಕಗಳಾಗಿದ್ದು, ರಾಜ್ಯವನ್ನು ನಕ್ಸಲ್ ಮುಕ್ತ ಮಾಡುವ ಮಹತ್ತರ ಬೆಳವಣಿಗೆ ನಡೆಯಲಿದೆ.
ನಕ್ಸಲ್ ಸಂಘಟನೆಯ ಪ್ರಮುಖರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ಬಾಳೆಹೊಳೆ ವನಜಾಕ್ಷಿ, ಮಾರೆಪ್ಪ ಅರೋಲಿ, ಕೆ.ವಸಂತ, ಟಿ.ಎನ್.ಜೀಶ್ ಅವರು ಮುಖ್ಯವಾಹಿನಿಗೆ ಬರಲು ಒಪ್ಪಿ ಸರ್ಕಾರಕ್ಕೆ ಸಮ್ಮತಿ ಪತ್ರವನ್ನೂ ನೀಡಿದ್ದಾರೆ. ಸರ್ಕಾರದಿಂದ ನೇಮಕ ಗೊಂಡಿರುವ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಹಾಗೂ ಶಾಂತಿಗಾಗಿ ನಾಗರೀಕ ವೇದಿಕೆ ಸದಸ್ಯರು ಸರ್ಕಾರದೊಂದಿಗೆ ಸತತ ಮಧ್ಯಸ್ತಿಕೆ ವಹಿಸಿದ್ದು, ಬುಧವಾರ ಚಿಕ್ಕಮಗಳೂರಿನಲ್ಲಿ ಶರಣಾಗತಿ ಪ್ರಕ್ರಿಯೆ ನಡೆಯಲಿದೆ. ಚಿಕ್ಕಮಗಳೂರು ಜಿಲ್ಲೆ ಬುಕಡಿಬೈಲಿನ ಮುಂಡಗಾರು ಲತಾ ಬಗ್ಗೆ ಮಾಹಿತಿ ನೀಡಿದವರಿಗೆ ೫ ಲಕ್ಷ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರಿನ ಸುಂದರಿಯ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನವನ್ನು ಸರ್ಕಾರ ಈ ಹಿಂದೆಯೇ ಘೋಷಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ವಿಕ್ರಂಗೌಡ ಎನ್‌ಕೌಂಟರ್ ಬಳಿಕ...
ನಕ್ಸಲ್ ಸಂಘಟನೆಯ ರಾಜ್ಯ ನಾಯಕತ್ವ ವಹಿಸಿಕೊಂಡಿದ್ದ ವಿಕ್ರಂಗೌಡನ ಎನ್‌ಕೌಂಟರ್ ಬಳಿಕ ಬೆರಳೆಣಿಕೆಯಲ್ಲಿದ್ದ ನಕ್ಸಲರು ಕಾಡು ಮೇಡುಗಳಲ್ಲಿ ಆಹಾರ ಮತ್ತು ಔಷಧಕ್ಕಾಗಿ ಪರದಾಡುತ್ತಿದ್ದರು. ಸಂಘಟನೆ ಬಲಹೀನವಾಗಿದ್ದರೂ ವಿಕ್ರಂಗೌಡನನ್ನು ಸೆರೆಹಿಡಿಯಲು ಅವಕಾಶ ಇದ್ದಾಗ್ಯೂ ಪೋಲೀಸರು ಎನ್‌ಕೌಂಟರ್ ಮಾಡಿದ್ದರು. ಈ ಬೆಳವಣಿಗೆ ಬಳಿಕ ನಕ್ಸಲರು ಮತ್ತು ನಾಗರೀಕ ವಲಯದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅನ್ಯಾಯವಾಗಿ ಗುಂಡೇಟಿಗೆ ಬಲಿಯಾಗುವ ಬದಲು ಮುಖ್ಯವಾಹಿನಿಗೆ ಬರುವಂತೆ ಸಂದೇಶವನ್ನೂ ಕೊಡಲಾಗಿತ್ತು. ತಾವು ಒಪ್ಪಿದ ಸಿದ್ಧಾಂತದಿಂದ ವಿಮುಖರಾಗಲು ಬಯಸದ ನಕ್ಸಲರಿಗೆ ಈಗಾಗಲೇ ಶರಣಾಗಿ ಮುಖ್ಯವಾಹಿನಿಯಲ್ಲಿರುವವರು ಮತ್ತು ಶರಣಾಗತಿ ಪ್ಯಾಕೇಜ್ ಸಮಿತಿ ಸದಸ್ಯರು ಮನವರಿಕೆ ಮಾಡಿದ ಬಳಿಕ ರಾಜ್ಯದಲ್ಲಿ ಇರುವ ಎಲ್ಲಾ ಕಾಮ್ರೇಡ್‌ಗಳು ಮನಸು ಬದಲಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸಭಾ ನಡಾವಳಿಗಳೇನು?:
ಜನವರಿ 4 ರಂದು ರಹಸ್ಯ ಸ್ಥಳದಲ್ಲಿ ನಕ್ಸಲ್ ಶರಣಾಗತಿ/ಪುನರ್ವಸತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ ವೇದಿಕೆ ಪ್ರಮುಖ 8 ಸದಸ್ಯರು ಮತ್ತು ನಕ್ಸಲರ ನಡುವೆ ಸಭೆ ನಡೆದಿದೆ. ಈ ಸಭೆಯಲ್ಲಿ ಶರಣಾಗುವ ಬಗೆ ಮತ್ತು ಆ ಬಳಿಕ ಸರ್ಕಾರ ನಕ್ಸಲರನ್ನು ನಡೆಸಿಕೊಳ್ಳುವ ರೀತಿ ಕುರಿತು ಸಮಗ್ರ ಚರ್ಚೆಯಾಗಿದೆ. ಶರಣಾಗುವ ನಕ್ಸಲರ ಮೇಲಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥ ಮಾಡಲು ವಿಶೇಷ ನ್ಯಾಯಾಲಯದಲ್ಲಿಯೇ ವಿಚಾರಣೆ ಮಾಡಬೇಕು. ಯು.ಎ.ಪಿ.ಎ ಕಾಯಿದೆ ಅಡಿ ಬಂಧಿತರಾದವರ ವಿಚಾರಣೆಗೆ ವಿಶೇಷ ನ್ಯಾಯಾಲಯ ಇದೆ. ಆದರೆ ಅಲ್ಲಿಗೆ ಎಲ್ಲ ಪ್ರಕರಣಗಳು ತಕ್ಷಣಕ್ಕೆ ವರ್ಗಾವಣೆಯಾಗುವುದಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಶರಣಾದವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಜೈಲುಗಳಲ್ಲಿ ಧೀರ್ಘಕಾಲ ಕೊಳೆಯುವಂತಾಗಬಾರದು. ವಿಕ್ರಂಗೌಡ ಎನ್‌ಕೌಂಟರ್ ಪ್ರಕರಣದ ನ್ಯಾಯಾಂಗ ತನಿಖೆ, ಈಗಾಗಲೇ ಶರಣಾದವರ ಜೀವನ ದುರ್ಬರವಾಗಿದೆ ಈ ರೀತಿಯ ಹಲವು ಬೇಡಿಕೆಗಳ ಬಗ್ಗೆ ಚರ್ಚೆ ನಡೆದಿದೆ. ಈ ಎಲ್ಲ ಬೇಡಿಕೆಗಳನ್ನು ಸರ್ಕಾರದ ಕಡೆಯಿಂದ ಸಕಾರಾತ್ಮಕವಾಗಿ ಸ್ವೀಕರಿಸಲಾಗಿದೆ.
ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಪ್ರವರ್ಗ್- ಎ ಅಡಿಯಲ್ಲಿ 7.5 ಲಕ್ಷ, ಪ್ರವರ್ಗ-ಬಿ ಅಡಿಯಲ್ಲಿ 4 ಲಕ್ಷ ನೆರವನ್ನು ಮೂರು ಹಂತಗಳಲ್ಲಿ ನೀಡಲಾಗುವುದು. ಕೌಶಲ ತಬೇತಿ ನೀಡಿ ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುವುದು. ಶಸ್ತ್ರಾಸ್ತ್ರಗಳನ್ನು ಬಚ್ಚಿಡುವ ಡಂಪ್‌ಗಳನ್ನು ತೋರಿಸಿದರೆ ಹೆಚ್ಚುವರಿ ಆರ್ಥಿಕ ನೆರವು ನೀಡುವ ಅವಕಾಶಗಳಿರುವ ಬಗ್ಗೆಯೂ ಭರವಸೆ ನೀಡಲಾಗಿದೆ. ವಿಕ್ರಂ ಗೌಡ ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದೆ. ಶರಣಾಗತಿ ವಿಚಾರದಲ್ಲಿ ನೆರೆಯ ಕೇರಳ, ತಮಿಳುನಾಡು ಹಾಗೂ ಆಂಧ್ರಗಳಲ್ಲಿಯೂ ನಮ್ಮ ಮೇಲೆ ಪ್ರಕರಣಗಳಿದ್ದು, ಎಲ್ಲಾ ಸರ್ಕಾರದ್ದೂ ಒಂದೇ ನಿಲುವಿದೆಯೇ ಎಂಬ ಅನುಮಾನಕ್ಕೂ ಸರ್ಕಾರದ ಕಡೆಯಿಂದ ಸಮಜಾಯಿಷಿ ನೀಡಲಾಗಿದೆ.
ಸರ್ಕಾರದ ಸ್ಪಂದನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಶರಣಾಗುವಂತೆ ನಕ್ಸಲರಿಗೆ ಕರೆನೀಡಿದ್ದರಿಂದ ಗೃಹ ಇಲಾಖೆಯ ಕಡೆಯಿಂದಲೂ ಸಕಾರಾತ್ಮಕವಾದ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯವಾಹಿನಿಗೆ ಬಂದು ಜೀವನ ನಡೆಸಲು ಕಾನೂನು ಅಡಿಯಲ್ಲಿ ಸಹಕಾರ ನೀಡಲು ಸರ್ಕಾರ ಸಿದ್ದವಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂಬ ಭರವಸೆ ಸಿಕ್ಕಿದೆ. ಈ ಭರವಸೆ ಮತ್ತು ಮಧ್ಯಸ್ಕಿಕೆ ವಹಿಸಿದವರ ವಿಶ್ವಾಸದ ಮೇಲೆ ಎಲ್ಲಾ ಆರು ಮಂದಿ ನಕ್ಸಲರು ಶರಣಾಗಲು ಸಮ್ಮತಿ ಪತ್ರವನ್ನು ನೀಡಿದ್ದಾರೆ.
ಐತಿಹಾಸಿಕ ಘಟನೆ:
ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ಚಿಕ್ಕಮಗಳೂರಿನಲ್ಲಿ ನಡೆಯುವ ನಕ್ಸಲರ ಶರಣಾಗತಿ ಕಾರ್ಯಕ್ರಮ ಒಂದು ಐತಿಹಾಸಿಕ ಘಟನೆಯಾಗಲಿದೆ. ರಾಜ್ಯದಲ್ಲಿ ನಕ್ಸಲರ ನೆತ್ತರ ಇತಿಹಾಸ ಕೊನೆಗೊಳ್ಳಲಿದೆ. ಹಸಿರು ಹಾಸಿನ ಮೇಲೆ ಚೆಲ್ಲಿದ ನೆತ್ತರ ಕಲೆಗೆ ಅಂತ್ಯ ಹಾಡಲು ಮತ್ತು ಪ್ರಜಾತಾಂತ್ರಿಕ ವ್ಯವಸ್ಥೆ ಅಡಿಯಲ್ಲಿ ಮುಖ್ಯವಾಹಿನಿಗೆ ಬರುವ ನಕ್ಸಲರ ಎರಡೂವರೆ ದಶಕಗಳ ವನವಾಸವೂ ಅಂತ್ಯವಾಗಲಿದೆ.
ಫ್ಲಾಶ್ ಬ್ಯಾಕ್
ಚಳವಳಿಗಳ ತವರೂರು ಶಿವಮೊಗ್ಗ ಹಾಗೂ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರಜಾತಾಂತ್ರಿಕ ನೆಲೆಯಲ್ಲಿ ಹೋರಾಟ ಮಾಡುತಿದ್ದ ಬಿಸಿರಕ್ತದ ಹುಡುಗ- ಹುಡುಗಿಯರು ಊಳಿಗಮಾನ್ಯ ಸರ್ಕಾರಗಳ ವಿರುದ್ಧ ಹೋರಾಟ ಮಾಡಲು ಕೈಗೆ ಬಂದೂಕು ಹಿಡಿದುಕೊಂಡ ಒಂದು ಸಶಸ್ತ್ರ ಹೋರಾಟಕ್ಕೆ ಮೂರು ದಶಕಗಳ ಆಯುಷ್ಯ. ಸಮಸಮಾಜದ ಕನಸು ಹೊತ್ತ ಈ ಹೋರಾಟಕ್ಕೆ 20 ಕ್ಕೂ ಹೆಚ್ಚು ಅಮೂಲ್ಯ ಜೀವಗಳು ಬಲಿಯಾಗಿವೆ. ನಕ್ಸಲರು ಮತ್ತು ಪೊಲೀಸರ ಕಡೆಯಿಂದಲೂ ಜೀವ ಹಾನಿಯಾಗಿವೆ. ನಕ್ಸಲರ ಶಸ್ತ್ರಾಸ್ತ್ರ ತರಬೇತಿ ವೇಳೆ ಚೀರಮ್ಮ ಎಂಬ ಮಹಿಳೆಗೆ ಗುಂಡು ತಾಗಿದ್ದರಿಂದ ಚೆಲ್ಲಿದ್ದ ನೆತ್ತರೂ, ಪಾರ್ವತಿ, ಹಾಜೀಮಾ ಅವರನ್ನು ಈದು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದರು. ಅದಾದ ಬಳಿಕ ಅನೇಕ ಜೀವ ಹಾನಿಯಾಗಿದ್ದು, ರಾಜ್ಯದಲ್ಲಿ ನಕ್ಸಲ್ ಸಂಘಟನೆಯ ನೇತೃತ್ವ ವಹಿಸಿದ್ದ ಸಾಕೇತ್ ರಾಜನ್ ಎನ್‌ಕೌಂಟರ್ ೨೦೦೫ ರಲ್ಲಿ ಆಗಿತ್ತು. ಈಗ ನಕ್ಸಲರ ನೆತ್ತರ ಹೋರಾಟಕ್ಕೆ ವಿರಾಮ ಬಿದ್ದಿದೆ. ನಾಗರೀಕ ಸಮಾಜದಲ್ಲಿ ಬೇಡಿಕೆಗಳಿಗಾಗಿ ಹೋರಾಟ ಮಾಡಲು ಸಂವಿಧಾನದತ್ತವಾದ ಎಲ್ಲಾ ಹಕ್ಕುಗಳಿರುವಾಗ ಹೋರಾಟವೂ ಅದೇ ನೆಲೆಯಲ್ಲಿ ಸಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ಚಳವಳಿ ಕ್ಷೀಣ
ಅಸಲಿಯಾಗಿ ಕರ್ನಾಟಕದಲ್ಲಿ ನಕ್ಸಲ್ ಸಂಘಟನೆ ಶಕ್ತಿ ಕಳೆದುಕೊಂಡು ಹದಿನೈದು ವರ್ಷಗಳೇ ಆಗಿವೆ. ಯಾವುದೇ ಒಂದು ಹೋರಾಟ ಜನಸಮುದಾಯದಿಂದ ಹುಟ್ಟಿದಾಗ ಮಾತ್ರ ಅದು ಗಟ್ಟಿಯಾಗುತ್ತದೆ. ಆದರೆ ಕರ್ನಾಟಕದ ಪಶ್ಚಿಮಘಟ್ಟ ಪ್ರದೇಶದಲ್ಲಿ ಜನರ ಬೆಂಬಲ ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಕಾರಣ ನಕ್ಸಲರು ಕೇರಳ ಮತ್ತು ತಮಿಳುನಾಡಿನ ಗಡಿಗೆ ಹೋಗಿದ್ದರು. ಕರ್ನಾಟಕದಲ್ಲಿ ನಡೆದ ಹಲವು ಎನ್‌ಕೌಂಟರ್ ಮತ್ತು ನಕ್ಸಲ್ ನಾಯಕರ ಹತ್ಯೆಯ ಕಾರಣದಿಂದ ಆ ಚಳವಳಿ ರಾಜ್ಯದಿಂದ ದೂರವಾಗಿತ್ತು. ಕೇರಳದಲ್ಲಿ ನಕ್ಸಲರ ವಿರುದ್ಧದ ಥಂಡರ್ ಬೋಲ್ಟ್ ಕಾರ್ಯಾಚರಣೆ ಜೋರಾಗುತ್ತಿದ್ದಂತೆ ಅಲ್ಲಿನ ನಕ್ಸಲರ ಸಂಖ್ಯೆಯೂ ಕಡಿಮೆಯಾಗಿದೆ.
ಅಲ್ಲಿನ ಪೊಲೀಸರು ಮಾವೋವಾದಿ ಸಂಘಟನೆಯ ಕೇಂದ್ರ ಘಟಕದೊಂದಿಗೆ ಸ್ಥಳೀಯ ನಕ್ಸಲರಿಗಿದ್ದ ಸಂಪರ್ಕವನ್ನು ಕಡಿತಗೊಳಿಸುವಲ್ಲಿಯೂ ಯಶಸ್ವಿಯಾಗಿದ್ದರು. ಈ ಕಾರಣದಿಂದ ಕರ್ನಾಟಕದಿಂದ ಅಲ್ಲಿಗೆ ಹೋಗಿದ್ದ ಬೆರಳೆಣಿಕೆಯಷ್ಟು ನಕ್ಸಲ್ ಕಾರ್ಯಕರ್ತರು ಮತ್ತೆ ಕರ್ನಾಟಕಕ್ಕೆ ಬಂದಿದ್ದರು. ಕೆಲ ತಿಂಗಳುಗಳ ಹಿಂದೆಯೇ ಇಲ್ಲಿಗೆ ಬಂದಿದ್ದ ಅವರು, ಮತ್ತೆ ಸಂಘಟನೆಯನ್ನು ಬಲಗೊಳಿಸಬಹುದೇ ಎಂಬ ಚಿಂತನೆಯಲ್ಲಿದ್ದರು. ಆದರೆ ಸ್ಥಳೀಯ ಜನರ ಬೆಂಬಲ ಸಿಗದ ಕಾರಣ ಕೈ ಸೋತಿದ್ದರು. ಇತ್ತೀಚೆಗೆ ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿದ್ದ ನಕ್ಸಲರ ಎರಡು ತಂಡಗಳು ಕಾಡಂಚಿನ ಗ್ರಾಮಗಳಿಗೆ ಬಂದು ಊಟ ಕೇಳುತ್ತಿದ್ದರೇ ವಿನಾ ಮತ್ತೇನು ಕೇಳುತಿರಲಿಲ್ಲ ಎಂದು ಕಾಡಂಚಿನ ಗ್ರಾಮಗಳ ಜನರೇ ದ ಫೆಡರಲ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಹೆಸರು ಹೇಳದ ಸದಸ್ಯರೊಬ್ಬರು ದ ಪೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, ನಾಲ್ಕು ಸಭೆಗಳು ನಡೆದಿವೆ. ಸರ್ಕಾರದ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದರಿಂದ ನಾವು ಶಾಂತಿಗಾಗಿ ನಾಗರೀಕ ವೇದಿಕೆ ಪ್ರಮುಖರ ಮೂಲಕ ನಕ್ಸಲರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೇವೆ. ವ್ಯವಸ್ಥೆಯಲ್ಲಿ ಇದ್ದುಕೊಂಡೇ ಹೋರಾಟ ಮಾಡಬೇಕು. ಸಶಸ್ತ್ರ ಹೋರಾಟ ಬೇಡ ಎಂದು ಮನವರಿಕೆ ಮಾಡಿದ್ದೇವೆ. ಎಲ್ಲವೂ ಸುಸೂತ್ರವಾಗಿದೆ ಎಂದರು.
ನಕ್ಸಲರು ಮತ್ತು ಸರ್ಕಾರದ ನಡುವೆ ಮಾತುಕತೆಯ ಒಂದು ಭಾಗವಾಗಿದ್ದ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಕೆ.ಎಲ್.ಅಶೋಕ್ ಪೆಡರಲ್ ಕರ್ನಾಟಕದೊಂದಿಗೆ ಮಾತನಾಡಿ, ನಕ್ಸಲರ ಬೇಡಿಕೆಗಳು ನ್ಯಾಯಬದ್ಧವಾಗಿಯೇ ಇವೆ. ಮಲೆನಾಡಿನಲ್ಲಿರುವ ಜನರ ಈ ಬೇಡಿಕೆಗಳಿಗೆ ನ್ಯಾಯ ಸಿಗಲೇ ಬೇಕು. ಆದರೆ ಹೋರಾಟಕ್ಕೆ ಪ್ರಜಾಸತ್ತಾತ್ಮಕ ಮಾದರಿಯೇ ಸರಿ. ರಾಜ್ಯದಲ್ಲಿರುವ ನಕ್ಸಲರು ಶರಣಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಖ್ಯವಾಹಿನಿಗೆ ಬರುವ ಅವರನ್ನು ಸರ್ಕಾರ ಮತ್ತು ನಾಗರೀಕ ಸಮಾಜ ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದರು.