Naxals Surrender | ಮುಖ್ಯವಾಹಿನಿಗೆ ಮರಳಿದ ನಕ್ಸಲರು; ಶರಣಾಗುತ್ತಿರುವ ನಕ್ಸಲರ ಹಿನ್ನೆಲೆ ಏನು?
x
ಶರಣಾದ ನಕ್ಸಲರು

Naxals Surrender | ಮುಖ್ಯವಾಹಿನಿಗೆ ಮರಳಿದ ನಕ್ಸಲರು; ಶರಣಾಗುತ್ತಿರುವ ನಕ್ಸಲರ ಹಿನ್ನೆಲೆ ಏನು?

ಆರು ಮಂದಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಮಧ್ಯಸ್ಥಿಕೆ ವಹಿಸಿ, ಯಶಸ್ವಿಗೊಂಡಿದೆ. ಯಾರು ಈ ಆರು ಮಂದಿ ನಕ್ಸಲರು? ಅವರ ಹಿನ್ನೆಲೆ ಏನು? ಹೋರಾಟಕ್ಕೆ ಇಳಿದದ್ದು ಯಾಕೆ? ವಿವರ ಇಲ್ಲಿದೆ...


Click the Play button to hear this message in audio format

ನಕ್ಸಲ್ ಮುಕ್ತ ಕರ್ನಾಟಕದ ಘೋಷಣೆಯ ಭಾಗವಾಗಿ ನಕ್ಸಲಿಯರ ನಾಯಕರಾದ ಮಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಕೆ.ವಸಂತ, ಮಾರೆಪ್ಪ ಆರೋಲಿ (ಜಯಣ್ಣ ) ಹಾಗೂ ಟಿ.ಎನ್.ಜೀಶ ಅವರು ಬುಧವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾಗುತ್ತಿದ್ದಾರೆ.

ಆರು ಮಂದಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಮಧ್ಯಸ್ತಿಕೆ ವಹಿಸಿ, ಯಶಸ್ವಿಗೊಂಡಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್‌ ಬಳಿಕ ಬೆರಳೆಣಿಕೆಯ ನಕ್ಸಲರ ಶರಣಾಗತಿಗೆ ಚಿಂತಕ ಡಾ ಬಂಜಗೆರೆ ಜಯಪ್ರಕಾಶ್, ವಕೀಲ ಕೆ ಪಿ ಶ್ರೀಪಾಲ್, ಪತ್ರಕರ್ತ ಪಾರ್ವತೀಶ್ ಬಿಳಿದಾಳೆ ನೇತೃತ್ವದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಶರಣಾಗತಿ ಪ್ರಕ್ರಿಯೆ ಆರಂಭಿಸಿತ್ತು.

ನಕ್ಸಲರು ಕೂಡ ಸರ್ಕಾರಕ್ಕೆ ಹಲವು ಷರತ್ತುಗಳನ್ನು ಹಾಕಿ, ಸಮಿತಿಯ ಮೂಲಕ ಪತ್ರ ಬರೆದಿದ್ದರು. ರಾಜ್ಯ ಸರ್ಕಾರ ಹಾಗೂ ನಕ್ಸಲರ ನಡುವೆ ಸಹಮತ ಮೂಡಿದ ಹಿನ್ನೆಲೆಯಲ್ಲಿ ಶರಣಾಗತಿ ಸಮಿತಿ ಆರು ಮಂದಿ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತಂದಿದೆ.

ತಮ್ಮ ವಿರುದ್ಧದ ಪ್ರಕರಣಗಳ ಶೀಘ್ರ ವೀಲೇವಾರಿ, ಪುನವರ್ಸತಿ ಪ್ಯಾಕೇಜ್, ನಾಗರಿಕ ಹೋರಾಟಕ್ಕೆ ಅವಕಾಶ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರು ಕೂಡ ನಕ್ಸಲರ ಶರಣಾಗತಿಗೆ ಸೂಚಿಸಿದ್ದರು. ಆದರ್ಶದ ಹೆಸರಿನಲ್ಲಿ ಜೀವಹಾನಿಗೆ ವಿರೋಧ ವ್ಯಕ್ತಪಡಿಸಿದ್ದರು.

ಶರಣಾಗುತ್ತಿರುವ ನಕ್ಸಲರ ಹಿನ್ನಲೆ ಏನು?

ಮುಂಡಗಾರು ಲತಾ

ಮುಂಡಗಾರು ಲತಾ ಮೂಲತಃ ಕೊಪ್ಪ ತಾಲೂಕಿನ ಬುಕಡಿಬೈಲಿನ ಮುಂಡಗಾರು ಗ್ರಾಮದವರು. ಲೋಕಮ್ಮ ಅಲಿಯಾಸ್ ಶ್ಯಾಮಲ ಹೆಸರಿನ ಈಕೆ ಮಲೆನಾಡಿನ ಭಾಗಗಳಲ್ಲಿ ಲತಾ ಎಂದು ಗುರುತಿಸಿಕೊಂಡಿದ್ದರು. ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಪಟ್ಟಿಯಲ್ಲಿ ಲತಾ ಕೂಡ ಒಬ್ಬರು. ಮಲೆನಾಡಿನಲ್ಲಿ ಶೋಷಿತ, ದಮನಿತರ ಪರ ಹೋರಾಟ ಮಾಡುವ ಸಲುವಾಗಿ ಬಂದೂಕನ್ನು ಹೆಗಲಿಗೇರಿಸಿಕೊಂಡರು. ಬಡ ಆದಿವಾಸಿ ಕುಟುಂದಿಂದ ಬಂದ ಲತಾ ಬಡತನ ಹಾಗೂ ಶಾಲೆಯ ಶಿಕ್ಷಕರ ಕಿರುಕುಳಗಳಿಂದಾಗಿ 6ನೇ ತರಗತಿಗೆ ಓದು ನಿಲ್ಲಿಸಿದ್ದರು.

ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಡಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಅದರ ವಿರುದ್ಧದ ಹೋರಾಟ ನಡೆಸುತ್ತಿದ್ದ ಚಳವಳಿಯ ಭಾಗವಾದರು. ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಸರ್ಕಾರದ ಬೆಲೆ ನೀಡುತ್ತಿಲ್ಲ ಎಂದು 2000ನೇ ಇಸವಿಯಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಲತಾ ಬಂದೂಕು ಹಿಡಿದರು. ಅಂದಿನಿಂದ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ಮಾವೋವಾದಿ ದಳದಲ್ಲಿ ಗುರುತಿಸಿಕೊಂಡಿದ್ದರು. ನಕ್ಸಲ್ ತಂಡದ ನಾಯಕಿಯಾಗಿ ಗುರುತಿಸಿಕೊಂಡ ಬಳಿಕ ಲತಾ ಅವರು ಇಲ್ಲಿವರೆಗೂ ಭೂಗತರಾಗಿಯೇ ಇದ್ದರು.

ಕೇರಳ ಗಡಿಭಾಗದಲ್ಲಿ ನಕ್ಸಲರು ಅಡಗುಗುದಾಣದ ಮೇಲೆ ಪೊಲೀಸರು ಒಮ್ಮೆ ಫೈರಿಂಗ್‌ ನಡೆಸಿದ್ದರು. ಈ ಕ್ಯಾಂಪ್ ನಲ್ಲಿ ಮುಂಡಗಾರು ಲತಾ ಕೂಡ ಇದ್ದಳು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಮುಂಡಗಾರು ಲತಾ ಸಾವನ್ನಪ್ಪಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಇತ್ತೀಚೆಗೆ ಮಲೆನಾಡಿನಲ್ಲಿ ಲತಾ ಕಾಣಿಸಿಕೊಂಡ ಬಳಿಕ ಸಾವಿನ ಸುದ್ದಿ ಸುಳ್ಳಾಗಿತ್ತು.

ಸುಂದರಿ ಕುತ್ಲೂರು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುತ್ಲೂರಿನ ನಿವಾಸಿ ಸುಂದರಿ ಆದಿವಾಸಿ ಮಹಿಳೆ. ಬಡತನದ ಕಾರಣ ಮೂರನೇ ತರಗತಿಗೆ ಶಾಲೆ ತೊರೆದಿದ್ದರು. ಇವರ ಕುಟುಂಬ ಕೂಡ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದ ಸಂತ್ರಸ್ತವಾಗಿತ್ತು. ಎಲ್ಲವನ್ನು ಕಳೆದುಕೊಳ್ಳುವ ಭೀತಿ ಎದುರಿಸಿತ್ತು. ಸರ್ಕಾರದ ಈ ಧೋರಣೆ ಖಂಡಿಸಿ ಸುಂದರಿ ಕುತ್ಲೂರು ತಮ್ಮ 19ನೇ ವಯಸ್ಸಿನಲ್ಲಿ 2004ರಲ್ಲಿ ಮಾವೋವಾದಿ ಸಂಘಟನೆ ಸೇರಿದರು. ಬಳಿಕ ಕೇರಳ ಹಾಗೂ ಕರ್ನಾಟಕ ದಳದ ಭಾಗವಾಗಿದ್ದರು. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು, ದೌರ್ಜನ್ಯದ ವಿರುದ್ಧ ಬೇಸತ್ತು ಬಂದೂಕು ಹಿಡಿದಿದ್ದರು.

ವನಜಾಕ್ಷಿ ಬಾಳೆಹೊಳೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ಆದಿವಾಸಿ ಮಹಿಳೆ ವನಜಾಕ್ಷಿ. ಎಸ್ ಎಸ್ ಎಲ್ ಸಿ ವರೆಗೂ ಓದಿರುವ ಇವರು 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಂಟು ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಟೈಪ್‌ ರೈಟಿಂಗ್ ಕಲಿತು, ಹೊಲಿಗೆಯನ್ನು ಜೀವನಾಧಾರವಾಗಿಸಿಕೊಂಡಿದ್ದರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ ಬಲಾಢ್ಯರಿಂದ ತಮ್ಮ ತುಂಡುಭೂಮಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದೆಡೆ ಇವರ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೆ, ಒಬ್ಬ ತಮ್ಮ ಆತ್ಮಹತ್ಯೆಗೆ ಶರಣಾಗಿದ್ದ. ತನ್ನ ಹಾಗೂ ಸುತ್ತಮುತ್ತಲಿನ ಹಲವು ಕುಟುಂಬಗಳು ಬಡತನ ಶೋಷಣೆಗಳಿಗೆ ಬಲಿಯಾಗಿದ್ದನ್ನು ಕಣ್ಣಾರೆ ಕಂಡಿದ್ದರು. ಇದರಿಂದ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡು ಸಶಸ್ತ್ರ ಹೋರಾಟದ ಹಾದಿ ಹಿಡಿದಿದ್ದರು. 2000 ನೇ ಇಸವಿಯಿಂದ ಮಾವೋವಾದಿ ಸಂಘಟನೆಯ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು.

ಜಯಣ್ಣ ಅರೋಲಿ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರೋಳಿ ಗ್ರಾಮದ ನಿವಾಸಿ ಜಯಣ್ಣ ಬಡವರ ಮೇಲೆ ಶ್ರೀಮಂತರ ದಬ್ಬಾಳಿಕೆ ವಿರೋಧಿಸಿ ನಕ್ಸಲ್‌ ಹೋರಾಟಕ್ಕೆ ಧುಮುಕಿದ್ದರು. ದ್ವಿತೀಯ ಬಿಎ ವ್ಯಾಸಂಗ ಮಾಡಿರುವ ದಲಿತ ಸಮುದಾಯದ ಈ ಯುವಕ ಕಾಲೇಜಿನಲ್ಲಿ ಇರುವಾಗಲೇ ಮಾವೋವಾದಿ ಚಳವಳಿಯತ್ತ ಆಕರ್ಷಿತರಾಗಿದ್ದರು. ಆಸಕ್ತಿಯಿಂದ ಚಳವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಎನ್‌ಕೌಂಟರ್‌ ಹತ್ಯೆ ಆಘಾತ ಉಂಟು ಮಾಡಿತ್ತು. 2000ನೇ ಇಸವಿಯಲ್ಲಿ ತನ್ನ 24ನೇ ವಯಸ್ಸಿನಲ್ಲಿ ಮಾವೋವಾದಿ ಪಕ್ಷದ ಭಾಗವಾದರು. ಅಂದಿನಿಂದ ಕೇರಳ-ಕರ್ನಾಟಕದ ಭಾಗದ ನಕ್ಸಲ್‌ ಹೋರಾಟಗಳಲ್ಲಿ ಭಾಗಿಯಾಗಿದ್ದರು. 2018 ರಲ್ಲಿ ಬಂದೂಕು ಹಿಡಿದರು. ಸರ್ಕಾರ ಪ್ರಕಟಿಸಿರುವ ಪುನರ್ವಸತಿ ಪ್ಯಾಕೇಜ್‌ನಲ್ಲಿ ಸಂದಾಯವಾಗುವ ಹಣದ ಅರ್ಧ ಭಾಗವನ್ನು ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಲು ಜಯಣ್ಣ ತೀರ್ಮಾನಿಸಿದ್ದಾರೆ.

ವಸಂತ್ ಆರ್ಕಾಟ್

ತಮಿಳುನಾಡಿನ ವೆಲ್ಲೂರಿನ ಆರ್ಕಾಟ್‌ ನಿವಾಸಿಯಾದ ವಸಂತ್, ಬಿ.ಟೆಕ್ ಪದವೀಧರ. ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾಗಿ ಹೋರಾಟಗಳನ್ನು ಗುರುತಿಸಿಕೊಂಡು ಬೆಳೆದರು. 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಸಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ-ಕರ್ನಾಟಕದ ದಳದ ಸದಸ್ಯರಾಗಿದ್ದರು.

ಟಿ.ಎನ್‌. ಜಿಶಾ

ಕೇರಳದ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ ಟಿ.ಎನ್‌. ಜಿಶಾ. ನಕ್ಸಲ್‌ ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿರುವ ಜಿಶಾ, 2018ರಲ್ಲಿ ಕೇರಳದಲ್ಲಿ ನಕ್ಸಲ್‌ ಸಶಸ್ತ್ರ ಹೋರಾಟದ ಭಾಗವಾಗಿ ಹೋರಾಟ ಆರಂಭಿಸಿದ್ದರು. 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದರು. ಕರ್ನಾಟಕದ ಕರಾವಳಿ ಭಾಗದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

Read More
Next Story