ಗುಜರಾತ್‌ನ ಪಾವಗಢ ದೇವಸ್ಥಾನದಲ್ಲಿ ರೋಪ್‌ವೇ ಅಪಘಾತ: ಆರು ಮಂದಿ ದುರ್ಮರಣ
x

ಗುಜರಾತ್‌ನ ಪಾವಗಢ ದೇವಸ್ಥಾನದಲ್ಲಿ ರೋಪ್‌ವೇ ಅಪಘಾತ: ಆರು ಮಂದಿ ದುರ್ಮರಣ

ಪಂಚಮಹಲ್ ಜಿಲ್ಲಾಧಿಕಾರಿಗಳ ಪ್ರಕಾರ, ಈ ದುರಂತವು ಮಧ್ಯಾಹ್ನ ಸುಮಾರು 3.30ಕ್ಕೆ ಸಂಭವಿಸಿದೆ. ಮೃತರನ್ನು ಇಬ್ಬರು ಲಿಫ್ಟ್‌ಮನ್‌ಗಳು, ಇಬ್ಬರು ಕಾರ್ಮಿಕರು ಮತ್ತು ಇಬ್ಬರು ಇತರರು ಎಂದು ಗುರುತಿಸಲಾಗಿದೆ.


ಗುಜರಾತ್‌ನ ಪಂಚಮಹಲ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪಾವಗಢ ಬೆಟ್ಟದ ದೇವಸ್ಥಾನದಲ್ಲಿ ಶನಿವಾರ ಸಂಭವಿಸಿದ ಭೀಕರ ರೋಪ್‌ವೇ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಸರಕು ಸಾಗಣೆ (ಕಾರ್ಗೋ) ರೋಪ್‌ವೇಯ ಕೇಬಲ್ ತುಂಡಾದ ಪರಿಣಾಮ, ಟ್ರಾಲಿ ನೆಲಕ್ಕೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಚಮಹಲ್ ಪೊಲೀಸ್ ವರಿಷ್ಠಾಧಿಕಾರಿ ಹರೇಶ್ ದುಧಾಟ್ ಅವರು ಸಾವಿನ ಸಂಖ್ಯೆಯನ್ನು ಖಚಿತಪಡಿಸಿದ್ದು, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ರೋಪ್‌ವೇಯ ಕೇಬಲ್ ತುಂಡಾಗಿದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ.

ಪಂಚಮಹಲ್ ಜಿಲ್ಲಾಧಿಕಾರಿಗಳ ಪ್ರಕಾರ, ಈ ದುರಂತವು ಮಧ್ಯಾಹ್ನ ಸುಮಾರು 3.30ಕ್ಕೆ ಸಂಭವಿಸಿದೆ. ಮೃತರನ್ನು ಇಬ್ಬರು ಲಿಫ್ಟ್‌ಮನ್‌ಗಳು, ಇಬ್ಬರು ಕಾರ್ಮಿಕರು ಮತ್ತು ಇಬ್ಬರು ಇತರರು ಎಂದು ಗುರುತಿಸಲಾಗಿದೆ.

"ಪಾವಗಢಕ್ಕೆ ಹೋಗಲು ಎರಡು ರೋಪ್‌ವೇಗಳಿವೆ; ಒಂದು ಸರಕು ಮತ್ತು ಸಾಮಗ್ರಿಗಳಿಗೆ, ಇನ್ನೊಂದು ಯಾತ್ರಿಕರಿಗೆ. ಒಂದನೇ ಗೋಪುರದ ಬಳಿ ಸರಕು ಸಾಗಿಸುವ ರೋಪ್‌ವೇಯ ಕೇಬಲ್ ತುಂಡಾಗಿ, ಅದರಲ್ಲಿ ಪ್ರಯಾಣಿಸುತ್ತಿದ್ದ ಆರು ಕಾರ್ಮಿಕರು ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಎಲ್ಲಾ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ," ಎಂದು ರಾಜ್ಯ ಸಚಿವ ಹೃಷಿಕೇಶ್ ಪಟೇಲ್ ಅವರು ತಿಳಿಸಿದ್ದಾರೆ.

ರೋಪ್‌ವೇ ಸಾರ್ವಜನಿಕರಿಗೆ ಬಂದ್ ಆಗಿತ್ತು

ಹವಾಮಾನ ವೈಪರೀತ್ಯದ ಕಾರಣ, ಯಾತ್ರಿಕರು ಬಳಸುವ ರೋಪ್‌ವೇಯನ್ನು ಸಾರ್ವಜನಿಕರ ಬಳಕೆಗೆ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತಕ್ಕೀಡಾಗಿದ್ದು ಸರಕು ಸಾಗಿಸುವ ರೋಪ್‌ವೇ ಮಾತ್ರ. ಪಾವಗಢ ಬೆಟ್ಟವು ಚಂಪಾನೇರ್‌ನಿಂದ ಮೂರು ಹಂತಗಳಲ್ಲಿ ಏರುತ್ತದೆ ಮತ್ತು ಅದರ ಪ್ರಸ್ಥಭೂಮಿಯು ಸಮುದ್ರ ಮಟ್ಟದಿಂದ 1,471 ಅಡಿ ಎತ್ತರದಲ್ಲಿದೆ. ಬೆಟ್ಟದ ತುದಿಯಲ್ಲಿರುವ ಕಾಳಿ ದೇವಿಯ ದೇವಸ್ಥಾನವು ಅತ್ಯಂತ ಪ್ರಸಿದ್ಧವಾಗಿದ್ದು, ಪ್ರತಿ ವರ್ಷ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡುತ್ತಾರೆ.

ಮೃತರ ಗುರುತು ಮತ್ತು ತನಿಖೆ

ಮೃತರನ್ನು ರಾಜಸ್ಥಾನದ ಅನ್ನಾಜಿ ಅಲಿಯಾಸ್ ಭೈರವ್‌ಲಾಲ್ ರತಿಲಾಲ್ ಜಾಟ್, ಜಮ್ಮು ಮತ್ತು ಕಾಶ್ಮೀರದ ರಾಜೌರಿ ನಿವಾಸಿಗಳಾದ ಮೊಹಮ್ಮದ್ ಅನ್ವರ್ ಮಹ್ಮದ್ ಶರೀಫ್‌ಖಾನ್ ಮತ್ತು ಬಲವಂತ್‌ಸಿಂಗ್ ಧನಿರಾಮ್, ದೇವಾಲಯದ ಭದ್ರತಾ ಸಿಬ್ಬಂದಿ ದಿಲೀಪ್‌ಸಿಂಹ ನರ್ವತ್‌ಸಿಂಹ ಕೋಲಿ, ದೇವಾಲಯದ ಅನ್ನಸೇವೆಯಲ್ಲಿ ಕೆಲಸ ಮಾಡುತ್ತಿದ್ದ ಹಿತೇಶ್‌ಭಾಯಿ ಹಸ್ಮುಖ್‌ಭಾಯಿ ಬಾರಿಯಾ, ಮತ್ತು ಹೂವಿನ ವ್ಯಾಪಾರಿ ಸುರೇಶ್‌ಭಾಯಿ ರಾಯ್‌ಜಿಭಾಯಿ ಕೋಲಿ ಎಂದು ಗುರುತಿಸಲಾಗಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More
Next Story