Governor VS Government |ರಾಜ್ಯಪಾಲರ ಅನುಮೋದನೆಗೆ ಮತ್ತೆ ಆರು ಮಸೂದೆ ರವಾನೆ
x

ಥಾವರ್ ಚಂದ್ ಗೆಹ್ಲೋಟ್

Governor VS Government |ರಾಜ್ಯಪಾಲರ ಅನುಮೋದನೆಗೆ ಮತ್ತೆ ಆರು ಮಸೂದೆ ರವಾನೆ

2024 ಡಿಸೆಂಬರ್ ತಿಂಗಳಲ್ಲಿ ಅಂಗೀಕರಿಸಲ್ಪಟ್ಟ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ ಸೇರಿ ರಾಜ್ಯಪಾಲರು ವಾಪಸ್‌ ಕಳುಹಿಸಿದ್ದ ಆರು ಮಸೂದೆಗಳನ್ನು ಮತ್ತೆ ಅನುಮೋದನೆಗೆ ಕಳುಹಿಸಲಾಗಿದೆ.


ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ತಿದ್ದುಪಡಿ ಮಸೂದೆ ಸೇರಿ ಒಟ್ಟು ಆರು ಪ್ರಮುಖ ಮಸೂದೆಗಳನ್ನು ಪರಿಷ್ಕರಣೆ ಮಾಡಿ ಮತ್ತೊಮ್ಮೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ರಾಜ್ಯ ಸರ್ಕಾರ ಕಳುಹಿಸಿಕೊಡಲಾಗಿದೆ.

ಆರು ಮಸೂದೆಗಳಲ್ಲಿ ಮೂರು ಮಸೂದೆಗಳು ಕಳೆದ ಒಂದು ವರ್ಷದಿಂದ ರಾಜ್ಯಪಾಲರ ಒಪ್ಪಿಗೆಗಾಗಿ ಬಾಕಿ ಉಳಿದಿದ್ದವು. ಡಿಸೆಂಬರ್ 2024 ರಲ್ಲಿ ಅಂಗೀಕರಿಸಿದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ ಕೂಡ ಒಂದಾಗಿತ್ತು. ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯಕ್ಕೆ ಕುಲಪತಿಯನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿಗೆ ವಹಿಸಿರುವ ಮಸೂದೆಯನ್ನು ರಾಜ್ಯಪಾಲರು ವಾಪಸ್‌ ಕಳುಹಿಸಿದ್ದರು. ಇದು ರಾಜ್ಯ ಸರ್ಕಾರ ಹಾಗೂ ರಾಜಭವನದ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು.

ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವನ್ನು (ಮುಡಾ) ಪುನರುಜ್ಜೀವನಗೊಳಿಸುವ ಮಸೂದೆ ಸೇರಿ ಆರು ಮಸೂದೆಗಳನ್ನು ರಾಜ್ಯಪಾಲರು ಅನುಮೋದನೆಗಾಗಿ ಮತ್ತೆ ಕಳುಹಿಸಲಾಗಿದೆ.

ಮಾರ್ಚ್‌ನಲ್ಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ) (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಕಾರ್ಯಗಳು) (ತಿದ್ದುಪಡಿ) ಮಸೂದೆಯನ್ನು ಗೆಹ್ಲೋಟ್ ಅವರು ಹಿಂದಕ್ಕೆ ಕಳುಹಿಸಿದ್ದರು.

ನಿಯಮ ರಚಿಸುವಾಗ ಸರ್ಕಾರವು ಕೆಪಿಎಸ್‌ಸಿಯನ್ನು ಸಂಪರ್ಕಿಸಬೇಕೆಂಬ ಪ್ರಸ್ತಾವವನ್ನು ರಾಜ್ಯಪಾಲರು ವಿರೋಧಿಸಿದ್ದರು. ಆ ನಿಯಮಕ್ಕೆ ತಿದ್ದುಪಡಿ ತಂದು ಅನುಮೋದನೆಗೆ ಕಳುಹಿಸಿಕೊಡಲಾಗಿದೆ. ಗದಗ ಬೆಟಗೇರಿ ವ್ಯವಹಾರ, ಸಂಸ್ಕೃತಿ ಮತ್ತು ಪ್ರದರ್ಶನ ಪ್ರಾಧಿಕಾರ ಮಸೂದೆ, ಕರ್ನಾಟಕ ಸಹಕಾರಿ ಸಂಘಗಳು (ತಿದ್ದುಪಡಿ) ಮಸೂದೆ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆಯನ್ನೂ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ. ಈ ಯಾವೆಲ್ಲಾ ಮಸೂದೆಗಳಿಗೆ ರಾಜ್ಯಪಾಲರು ಅಂಕಿತ ಹಾಕಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

Read More
Next Story