
ರೈತರ ಪ್ರತಿಭಟನೆ
Sugarcane Crisis| ಹತ್ತರಗಿ ಟೋಲ್ ಬಳಿ ಕಲ್ಲುತೂರಾಟ ಪ್ರಕರಣ; ಆರು ಮಂದಿ ಬಂಧನ
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಬೆಳಗಾವಿಯ ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರ ಮೇಲೆ ಕೆಲವರು ಕಲ್ಲುತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಇತ್ತೀಚೆಗೆ ನಡೆದ ರೈತರ ಪ್ರತಿಭಟನೆ ವೇಳೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಯಮಕನಮರಡಿ ಠಾಣೆ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಚನ್ನಗೌಡ ಸಸಾಲಟ್ಟಿ, ಪ್ರಶಾಂತ ಮುಗಳಿ, ವಿನಾಯಕ ಕೋಟಿವಾಲಿ, ಉಳ್ಳಾಗಡ್ಡಿ, ಖಾನಾಪುರದ ಮಲ್ಲಪ್ಪ ಘಟಗಿ, ಕಾಕತಿಯ ಶಿವಪ್ಪ ವಾಣಿ ಮತ್ತು ಬಿದ್ರೆವಾಡಿಯ ಸೋಮನಾಥ ಹಿರೇಮಠ ಬಂಧಿತ ಆರೋಪಿಗಳು. ಇವರಲ್ಲಿ ರೈತರು, ಕೂಲಿ ಕಾರ್ಮಿಕರು ಮತ್ತು ಮಾಜಿ ಸೈನಿಕರೂ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಘಟನೆ?
ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ನಿಗದಿಪಡಿಸಬೇಕೆಂದು ಆಗ್ರಹಿಸಿ ರೈತರು ಹತ್ತರಗಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ಘಟನೆಯಲ್ಲಿ ಸಾರಿಗೆ ಸಂಸ್ಥೆಯ ನಾಲ್ಕು ಬಸ್ಸುಗಳು ಮತ್ತು ಪೊಲೀಸ್ ಇಲಾಖೆಯ ಎರಡು ಬಸ್ಸುಗಳು ಜಖಂಗೊಂಡಿದ್ದವು. ಅಲ್ಲದೆ, 12 ಮಂದಿ ಪೊಲೀಸರು ಗಾಯಗೊಂಡಿದ್ದರು.
ಬಹು ಆಯಾಮಗಳಲ್ಲಿ ತನಿಖೆ
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, "ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಸಾಕ್ಷ್ಯಗಳ ಆಧಾರದ ಮೇಲೆ ಆರು ಮಂದಿಯನ್ನು ಬಂಧಿಸಲಾಗಿದೆ. ದೊಂಬಿ, ಗುಂಪುಗಲಭೆ ಮತ್ತು ಮಾರಣಾಂತಿಕ ಹಲ್ಲೆಯಂತಹ ಗಂಭೀರ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ," ಎಂದು ತಿಳಿಸಿದರು.
"ಬಂಧಿತರು ಕಲ್ಲುತೂರಾಟ ನಡೆಸಲು ಕಾರಣವೇನು? ರೈತರ ಶಾಂತಿಯುತ ಹೋರಾಟದ ದಿಕ್ಕು ತಪ್ಪಿಸಲು ಇದರ ಹಿಂದೆ ಯಾವುದಾದರೂ ಒಳಸಂಚು ಇತ್ತೇ ಎಂಬ ಬಗ್ಗೆಯೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ," ಎಂದು ಅವರು ಸ್ಪಷ್ಟಪಡಿಸಿದರು. ಕಲ್ಲುತೂರಾಟದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ ಎಂದು ಅವರು ಹೇಳಿದರು. ಘಟನೆಯಲ್ಲಿ ಗಾಯಗೊಂಡ ಪೊಲೀಸರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.

