ರಾಹುಲ್ ಗಾಂಧಿ ವಿಚಾರ ಹೊರಕ್ಕೆ ಬರಬಹುದೆಂದು ಸಿಬಿಐಗೆ ತನಿಖೆ ವಹಿಸಿಲ್ಲ: ಡಿ.ವಿ.ಸದಾನಂದ ಗೌಡ ಆರೋಪ
x
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ

ರಾಹುಲ್ ಗಾಂಧಿ ವಿಚಾರ ಹೊರಕ್ಕೆ ಬರಬಹುದೆಂದು ಸಿಬಿಐಗೆ ತನಿಖೆ ವಹಿಸಿಲ್ಲ: ಡಿ.ವಿ.ಸದಾನಂದ ಗೌಡ ಆರೋಪ


Click the Play button to hear this message in audio format

ವಾಲ್ಮೀಕಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ವಹಿಸಿರುವ ರಾಜ್ಯ ಸರಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಕಿಡಿಕಾರಿದ್ದು, ರಾಹುಲ್ ಗಾಂಧಿಯವರಿಗೆ ಹಣ ಕಳುಹಿಸಿದ ವಿಚಾರ ಹೊರಕ್ಕೆ ಬರಬಹುದೆಂಬ ಕಾರಣಕ್ಕೆ ಸಿದ್ದರಾಮಯ್ಯನವರು ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಅವರು ಆರೋಪಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್‍ಐಟಿಗಳು ರಾಜ್ಯ ಸರಕಾರ ನೀಡುವ ಆದೇಶ ಪಾಲಿಸುವ ಏಜೆನ್ಸಿಗಳು. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.

ಇಷ್ಟು ದೀರ್ಘ ಕಾಲ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯನವರಿಗೆ ನಾಗೇಂದ್ರರನ್ನು ವಜಾ ಮಾಡುವ ಧೈರ್ಯ ಇಲ್ಲ ಮತ್ತು ಭ್ರಷ್ಟಾಚಾರಕ್ಕೆ ಪುಷ್ಟಿ ಕೊಡುವ ದಾರಿಯಲ್ಲಿ ಮುಂದೆ ಮುಂದೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.ನಾನು ಮುಖ್ಯಮಂತ್ರಿ ಆಗಿದ್ದರೆ ಇಂಥ ಸಚಿವನನ್ನು ಮರುದಿನವೇ ವಜಾ ಮಾಡುತ್ತಿದ್ದೆ. ಚಂದ್ರಶೇಖರರ ಆತ್ಮಹತ್ಯೆ ನಡೆದಿದೆ. ಈ ಹಗರಣ ಭ್ರಷ್ಟಾಚಾರಕ್ಕೆ ಒಂದು ಜ್ವಲಂತ ಸಾಕ್ಷಿ ಎಂದು ಟೀಕಿಸಿದರು.

ಹಲವು ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾವಣೆ ಆಗಿದ್ದು, ಸರಕಾರ ಮಾಹಿತಿ ಕೊಡುತ್ತಿಲ್ಲ. ನಿಗಮದ ಅಧ್ಯಕ್ಷರು ಸತ್ಯ ಸಂಗತಿ ಯಾಕೆ ಬಿಡುಗಡೆ ಮಾಡಿಲ್ಲ ಎಂದ ಅವರು, ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಹಾಗೂ ಸಿಬಿಐ ತನಿಖೆ ಮಾಡಿಸಲು ಒತ್ತಾಯಿಸಿದರು. ನಾಗೇಂದ್ರರು 2 ದಿನಗಳಿಂದ ಕಾಣೆಯಾಗಿದ್ದಾರೆ. ಇದರ ಕುರಿತು ಸಿಎಂ ಮಾಹಿತಿ ಕೊಡಲಿ ಎಂದು ತಿಳಿಸಿದರು.

ಸಿದ್ದರಾಮಯ್ಯ ಮೌನಿಯಾಗಿರುವುದು ಯಾಕೆ?

ಇನ್ನು ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಮೌನಿಯಾಗಿರುವುದನ್ನು ಪ್ರಶ್ನಿಸಿದ ಅವರು, ಪೂರ್ಣ ಪ್ರಮಾಣದ ಸಾಕ್ಷ್ಯಗಳಿದ್ದರೂ ಸಿದ್ದರಾಮಯ್ಯನವರು ಮೌನಿ ಆಗಿರುವುದೇಕೆ? ಮಾತೆತ್ತಿದರೆ ನಾವು ಭ್ರಷ್ಟಾಚಾರ ವಿರೋಧಿಗಳು, 40 ಶೇ. ಕಮಿಷನ್ ಹೊಡೆದವರನ್ನು ಇಳಿಸಿದ್ದೀವಿ, ಭ್ರಷ್ಟಾಚಾರದ ತನಿಖೆ ಮಾಡಲು ಆಯೋಗ ರಚಿಸಿದ್ದಾಗಿ ಹೇಳುವ ಸಿದ್ದರಾಮಯ್ಯನವರು ಭ್ರಷ್ಟಾಚಾರ ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಜೆಪಿಯಿಂದ ದೊಡ್ಡ ಪ್ರಮಾಣದ ಹೋರಾಟ

ಗುತ್ತಿಗೆದಾರರ ಸಂಘದವರು ಇವತ್ತು ಬಿಲ್ ಸಿಗದೆ ಒದ್ದಾಡುವಂತಾಗಿದೆ. ಕಮಿಷನ್‍ಗಾಗಿ ಬೇಡಿಕೆ ಕುರಿತು ದೊಡ್ಡದಾಗಿ ಹೇಳುವಂತಾಗಿದೆ. ರಟ್ಟಿನ ಪೆಟ್ಟಿಗೆಗಳಲ್ಲಿ ಹಣವೂ ಸಿಕ್ಕಿದೆ ಎಂದರು. ಇದೇ 6ರ ಬಳಿಕ ದೊಡ್ಡ ಪ್ರಮಾಣದ ಹೋರಾಟವನ್ನು ಬಿಜೆಪಿ ನಡೆಸಲಿದೆ ಎಂದು ವಿವರಿಸಿದರು.

ಕಾಂಗ್ರೆಸ್‌ನ ಎಟಿಎಂಗೆ ಹೋಗುವ ಹಣ

15 ಖಾಸಗಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ. ಇದು ನೇರವಾಗಿ ಕಾಂಗ್ರೆಸ್ಸಿನ ಎಟಿಎಂಗೆ ಹೋಗುವ ಹಣವೆಂದು ಸಾಬೀತು ಪಡಿಸಿದೆ. ಸಚಿವರ ಸೂಚನೆ ಅಡಿಯಲ್ಲೇ ಇದು ನಡೆದಿದೆ ಎಂದು ಹೇಳಿದ್ದರೂ ಸಿದ್ದರಾಮಯ್ಯನವರು ಜಾಣಕುರುಡರಾಗಿ ನಾಗೇಂದ್ರರ ರಾಜೀನಾಮೆ ಪಡೆದಿಲ್ಲ ಎಂದು ಟೀಕಿಸಿದರು. 3 ಖಾತೆಗಳು ಹೈದರಾಬಾದ್ ಮೂಲದವು. ಇದರ ಮೂಲಕ ತೆಲಂಗಾಣಕ್ಕೆ ಹಣದ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಿದರು.


Read More
Next Story