ಧರ್ಮಸ್ಥಳ ಪ್ರಕರಣ: ಮುಸುಕುಧಾರಿ ಭೀಮನನ್ನು ವಿಚಾರಣೆ ಮಾಡುತ್ತಿರುವ ಎಸ್​​​ಐಟಿ ಅಧಿಕಾರಿಗಳು
x

ಧರ್ಮಸ್ಥಳ ಪ್ರಕರಣ: ಮುಸುಕುಧಾರಿ 'ಭೀಮ'ನನ್ನು ವಿಚಾರಣೆ ಮಾಡುತ್ತಿರುವ ಎಸ್​​​ಐಟಿ ಅಧಿಕಾರಿಗಳು

ಅಧಿಕಾರಿಗಳು ಬಂದೊಡನೆ ಎದ್ದು ನಿಂತಿದ್ದ ಭೀಮನಿಗೆ ಕುಳಿತುಕೊಳ್ಳುವಂತೆ ಸೂಚನೆ ನೀಡಿ, ಅರ್ಧ ಗಂಟೆಯ ನಂತರ ಒಳಬರುವಂತೆ ಹೇಳಲಾಗಿದೆ.


ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್​ಐಟಿ ತಂಡ ಶನಿವಾರ ಮುಸುಕುಧಾರಿ ದೂರುದಾರ 'ಭೀಮ'ನನ್ನೇ ತೀವ್ರ ವಿಚಾರಣೆಗೆ ಒಳಪಡಿಸಿದೆ. ಈ ಹಿನ್ನೆಲೆಯಲ್ಲಿ, ಇಂದು ಯಾವುದೇ ಅಗೆತ ಕಾರ್ಯವನ್ನು ನಡೆಸದಿರಲು ನಿರ್ಧಾರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬೆಳಗ್ಗೆ 10 ಗಂಟೆಯ ಮೊದಲೇ ಹಾಜರಾದ ಭೀಮನನ್ನು, ತನಿಖಾಧಿಕಾರಿಗಳು ಆರಂಭದಲ್ಲಿ ಶವಗಳ ಉತ್ಖನನ ಕಾರ್ಯಕ್ಕೆ ಕರೆದುಕೊಂಡು ಹೋಗುವ ನಿರೀಕ್ಷೆ ಇತ್ತು. ಆದರೆ, ಅಧಿಕಾರಿಗಳ ಆಗಮನದ ನಂತರ, ಭೀಮನನ್ನೇ ಕಚೇರಿ ಒಳಗೆ ತೀವ್ರ ತನಿಖೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಮುಸುಕುಧಾರಿಯನ್ನು ಕಚೇರಿ ಒಳಗೆ 'ಮುಸುಕು ರಹಿತನನ್ನಾಗಿ' ಮಾಡಿದ್ದು, ಆತನೊಂದಿಗೆ ಮಾತುಕತೆ ಆರಂಭಿಸಿದ್ದಾರೆ. ಇದು ಕಳೆದ 15 ದಿನಗಳಿಂದ ನಡೆಯುತ್ತಿದ್ದ ಶವಗಳ ಅವಶೇಷ ಉತ್ಖನನ ಕಾರ್ಯಕ್ಕೆ ವಿದಾಯ ಹಾಡುವ ಬಗ್ಗೆ ಸೂಚನೆ ಎಂದು ಹೇಳಲಾಗುತ್ತಿದೆ.

ಪ್ರತ್ಯಕ್ಷದರ್ಶಿಗಳ ಹೇಳಿಕೆ

ಮುಸುಕುಧಾರಿ ಭೀಮ ಎಸ್ಐಟಿ ಕಚೇರಿಗೆ ಬಂದ ಕೂಡಲೇ ವಿಕ್ಟರಿ ಸಿಂಬಲ್ ತೋರಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಬಂದೊಡನೆ ಎದ್ದು ನಿಂತಿದ್ದ ಭೀಮನಿಗೆ ಕುಳಿತುಕೊಳ್ಳುವಂತೆ ಸೂಚನೆ ನೀಡಿ, ಅರ್ಧ ಗಂಟೆಯ ನಂತರ ಒಳಬರುವಂತೆ ಹೇಳಲಾಗಿದೆ. ಆ ಬಳಿಕ ಹೊರಬಂದ ಪೊಲೀಸರಲ್ಲಿ ವಿಚಾರಿಸಿದ ಮಾಧ್ಯಮ ಪ್ರತಿನಿಧಿಗಳಿಗೆ "ಇಂದು ಯಾವುದೇ ಅಗೆತ ಇಲ್ಲ" ಎಂಬ ಮಾಹಿತಿ ಲಭ್ಯವಾಗಿದೆ.

ಮಂಪರು ಪರೀಕ್ಷೆಗೆ ಸಿದ್ಧತೆ?

ಎಸ್ಐಟಿ ಭೀಮನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯೂ ಬಂದಿದೆ. ಮಂಪರು ಪರೀಕ್ಷೆಗೆ ಬೇಕಾದ ಸಿದ್ಧತೆಗಳನ್ನು ನಡೆಸುವ ಹಿನ್ನೆಲೆಯಲ್ಲಿ, ಇಂದು ಭೀಮನನ್ನು ತೀವ್ರ ವಿಚಾರಣೆ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಸರ್ಕಾರದ ಸೂಚನೆಯ ಪ್ರಕಾರ, ಮುಸುಕುಧಾರಿ ವ್ಯಕ್ತಿಯ ಹೇಳಿಕೆಗಳ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವಂತೆ ಸೂಚನೆ ಇದೆ ಎನ್ನಲಾಗಿದೆ.

ಗೃಹ ಸಚಿವರ ಹೇಳಿಕೆ ನಿರ್ಣಾಯಕ?

ಹೋರಾಟಗಾರ ಮಹೇಶ್ ತಿಮರೋಡಿ ಅವರು ಶನಿವಾರದ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಭೀಮನ ಜೊತೆಗೆ ಇಂದಿನ ತನಿಖೆ ಯಾವ ರೀತಿ ಮುಂದುವರಿಯಲಿದೆ ಮತ್ತು ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ. ಹಾಗೆಯೇ, ಸೋಮವಾರದಂದು ರಾಜ್ಯ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸದನದಲ್ಲಿ ನೀಡಲಿರುವ ಹೇಳಿಕೆ ಹೇಗಿರಲಿದೆ ಎಂಬುದರ ಮೇಲೆ ಎಸ್ಐಟಿಯ ಮುಂದಿನ ನಡೆಯ ಬಗ್ಗೆ ನಿರ್ಧಾರವಾಗಲಿದೆ

ಎಸ್ಐಟಿ ಅಧಿಕಾರಿಗಳ ಇಂದಿನ ನಡೆ, ಶವಗಳ ಅಗೆತಕ್ಕೆ ಕೊನೆಯೋ ಎಂಬಂತೆ ಹೇಳಲಾಗುತ್ತಿದೆ. ಇದರೊಂದಿಗೆ, ಮುಸುಕುಧಾರಿಯ ಮಂಪರು ಪರೀಕ್ಷೆಯ ಸಮಯ ಯಾವಾಗ ಎಂಬ ಕುತೂಹಲವೂ ಇದೆ. ಯಾವುದೇ ನಿರ್ಧಾರವಾಗದಿದ್ದರೂ, ಸೋಮವಾರ ಗೃಹ ಸಚಿವರು ಸದನದಲ್ಲಿ ಮಂಡಿಸಲಿರುವ ವರದಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ.

Read More
Next Story