
Jeeva Suicide Case | ಹೈಕೋರ್ಟ್‌ಗೆ ಎಸ್‌ಐಟಿ ವರದಿ ಸಲ್ಲಿಕದೆ; ಡಿವೈಎಸ್‌ಪಿ ಕನಕಲಕ್ಷ್ಮಿ ಕಿರುಕುಳ ನೀಡಿದ ಆರೋಪ ಸಾಬೀತು
ಜೀವಾ ಅವರನ್ನು ವಿಚಾರಣೆ ಮಾಡುವ ವೇಳೆ ವಿಸ್ತರಗೊಳಿಸಿದ್ದ ವಿಡಿಯೋ ಡಿಲೀಟ್ ಆಗಿದ್ದವು. ಅವುಗಳನ್ನು ಎಫ್ಎಸ್ಎಲ್ ಮೂಲಕ ಮರು ಸಂಗ್ರಹಿಸಿದ್ದು, ಜೀವಾ ತಾನು ಡೆತ್‌ನೋಟ್‌ನಲ್ಲಿ ಮಾಡಿದ್ದ ಬಹುತೇಕ ಆರೋಪಗಳು ತಾಳೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಕೀಲೆ ಜೀವಾ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಪೂರ್ಣಗೊಳಿಸಿದೆ. ಒಟ್ಟು 2,300 ಪುಟಗಳ ಅಂತಿಮ ವರದಿಯನ್ನು ಎಸ್ಐಟಿ ತಂಡವು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದು, ಈ ಪ್ರಕರಣದಲ್ಲಿ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 2021-22ರಲ್ಲಿ ಬಹಿರಂಗಗೊಂಡ ಹಗರಣವು ಸಂಚಲನ ಮೂಡಿಸಿತ್ತು. ಭೋವಿ ಸಮುದಾಯದ ಸದಸ್ಯರಿಗೆ ಉದ್ಯೋಗ ಯೋಜನೆಯಡಿ ಸಾಲ ನೀಡಲು ಮೀಸಲಿಟ್ಟಿದ್ದ ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಣ ದುರುಪಯೋಗ ಮಾಡಲಾಗಿತ್ತು. ಈ ಯೋಜನೆಯಡಿ ಸಾಲ ಪಡೆಯಲು ಅರ್ಹರಾದ ಫಲಾನುಭವಿಗಳ ಬದಲಿಗೆ, ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳಲ್ಲಿ ಒಬ್ಬರಾಗಿದ್ದ ವಕೀಲೆ ಜೀವಾ ಅವರ ಆತ್ಮಹತ್ಯೆಯು ಈ ಹಗರಣಕ್ಕೆ ಹೊಸ ಆಯಾಮ ಕೊಟ್ಟಿತ್ತು.
ಜೀವಾ ಆತ್ಮಹತ್ಯೆ ಮತ್ತು ಡೆತ್ನೋಟ್
2024ರ ನವೆಂಬರ್ 22ರಂದು, ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯ ಪದ್ಮನಾಭನಗರದಲ್ಲಿ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರು ಬರೆದಿದ್ದ 13 ಪುಟಗಳ ಮರಣ ಪತ್ರದಲ್ಲಿ, ಸಿಐಡಿಯ ಡಿವೈಎಸ್ಪಿ ಕನಕಲಕ್ಷ್ಮೀ ಅವರು ತನಿಖೆಯ ಸಂದರ್ಭದಲ್ಲಿ ತಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿತ್ತು. ಜೀವಾ ಅವರ ಸಹೋದರಿ ಸಂಗೀತಾ ಎಸ್ ಅವರು ಈ ಆರೋಪಗಳ ಆಧಾರದ ಮೇಲೆ ಸಿಐಡಿ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದರು, ಇದು ತನಿಖೆಗೆ ದಾರಿ ಮಾಡಿಕೊಟ್ಟಿತು.
ಎಸ್ಐಟಿ ರಚನೆ ಮತ್ತು ತನಿಖೆ
ಈ ಪ್ರಕರಣದ ಗಂಭೀರತೆಯನ್ನು ಗಮನಿಸಿದ ಕರ್ನಾಟಕ ಹೈಕೋರ್ಟ್, ಡಿಸೆಂಬರ್ 2024ರಲ್ಲಿ ಸಿಬಿಐ ಮತ್ತು ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿತು. ವಿನಾಯಕ್ ವರ್ಮಾ, ಅಕ್ಷಯ್ ಮಚೀಂದ್ರ, ಮತ್ತು ನಿಶಾ ಜೇಮ್ಸ್ ನೇತೃತ್ವದ ಈ ತಂಡಕ್ಕೆ ಜೀವಾ ಅವರ ಆತ್ಮಹತ್ಯೆಯ ಸುತ್ತಲಿನ ಸಂಗತಿಗಳನ್ನು ತನಿಖೆ ಮಾಡಿ ವರದಿ ಸಲ್ಲಿಸುವ ಜವಾಬ್ದಾರಿ ನೀಡಲಾಗಿತ್ತು. ಎಸ್ಐಟಿ ತಂಡವು ಸಾಕ್ಷ್ಯಗಳ ಸಂಗ್ರಹ, ಸಾಕ್ಷಿದಾರರ ಹೇಳಿಕೆಗಳ ದಾಖಲೀಕರಣ ಮತ್ತು ತಾಂತ್ರಿಕ ಪರಿಶೀಲನೆಯ ಮೂಲಕ ತನಿಖೆ ನಡೆಸಿತ್ತು.
ಎಸ್ಐಟಿ ವರದಿಯಲ್ಲೇನಿದೆ?
ಎಸ್ಐಟಿ ತನ್ನ 2,300 ಪುಟಗಳ ವರದಿಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ. ಜೀವಾ ಅವರ ವಿಚಾರಣೆಯ ಸಂದರ್ಭದಲ್ಲಿ ರೆಕಾರ್ಡ್ ಮಾಡಲಾಗಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿತ್ತು. ಆದರೆ, ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್ಎಸ್ಎಲ್) ಮೂಲಕ ಈ ವಿಡಿಯೋಗಳನ್ನು ಮರುಸಂಗ್ರಹಿಸಲಾಗಿದೆ.
ಮರುಸಂಗ್ರಹಿಸಿದ ವಿಡಿಯೋಗಳು ಮತ್ತು ಸಾಕ್ಷಿದಾರರ ಹೇಳಿಕೆಗಳು ಜೀವಾ ಡೆತ್‌ನೋಟ್‌ನಲ್ಲಿ ಮಾಡಿದ ಬಹುತೇಕ ಆರೋಪಗಳನ್ನು ದೃಢಪಡಿಸಿವೆ. ಡಿವೈಎಸ್ಪಿ ಕನಕಲಕ್ಷ್ಮೀ ಅವರು ಜೀವಾ ಅವರಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾರೆ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.
ಹಲವರ ಬಂಧನ
ಈ ಪ್ರಕರಣದಲ್ಲಿ ತನಿಖೆಯ ಭಾಗವಾಗಿ ಹಲವು ಕಾನೂನು ಕ್ರಮಗಳು ಮತ್ತು ಬಂಧನಗಳು ನಡೆದಿವೆ. ಮಾರ್ಚ್ ೧೧ ರಂದು ಡಿವೈಎಸ್ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ. ನಾಗರಾಜಪ್ಪ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿ, ಅವರನ್ನು ಬಂಧಿಸಿದೆ. ಏಜೆಂಟರ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಇಡಿ ವಶಪಡಿಸಿಕೊಂಡಿದೆ.
ಎಸ್ಐಟಿ ತನ್ನ ಅಂತಿಮ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ್ದು, ಈಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವ ಪ್ರಕ್ರಿಯೆ ಬಾಕಿ ಉಳಿದಿದೆ. ಡಿವೈಎಸ್ಪಿ ಕನಕಲಕ್ಷ್ಮೀ ಸರ್ಕಾರಿ ಅಧಿಕಾರಿಯಾಗಿರುವ ಕಾರಣ, ಚಾರ್ಜ್‌ಶೀಟ್ ಸಲ್ಲಿಸಲು ಪ್ರಾಸಿಕ್ಯೂಷನ್ ಅನುಮತಿ ಅಗತ್ಯ. ಈ ಅನುಮತಿಗಾಗಿ ಎಸ್ಐಟಿ ಅಧಿಕಾರಿಗಳು ಕಾಯುತ್ತಿದ್ದಾರೆ.