
Dharmastala Ground Report | ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಮಧ್ಯಂತರ ವರದಿಗೆ ಪ್ರತಿಪಕ್ಷಗಳ ಪಟ್ಟು; ಸೌಜನ್ಯ ಪರ ಹೋರಾಟಗಾರರ ಸಿಟ್ಟು
ಎಸ್ಐಟಿ ತನಿಖೆ ಕುರಿತು ವಿಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರೆ, ಧರ್ಮಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಿರಾತಂಕವಾಗಿದೆ. ಇಬ್ಬರು ಹೊಸ ಸಾಕ್ಷಿದಾರರು ಮುಂದೆ ಬಂದು ಹೇಳಿಕೆ ನೀಡಿರುವುದು ಪ್ರಕರಣವನ್ನು ಕುತೂಹಲ ಘಟ್ಟಕ್ಕೆ ಕೊಂಡೊಯ್ದಿದೆ.
ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದ ಪ್ರಮುಖ ಸಾಕ್ಷಿ ದೂರುದಾರ ಗುರುತಿಸಿದ ಕನ್ಯಾಡಿಯ ಖಾಸಗಿ ಜಾಗದಲ್ಲಿ ಎಸ್‌ಐಟಿ ಅಧಿಕಾರಿಗಳು ಗುರುವಾರ ಶೋಧ ಕಾರ್ಯಾಚರಣೆ ನಡೆಸಿದರು. ಖಾಸಗಿ ಜಾಗವಾದ ಕಾರಣ ಎಸ್‌ಐಟಿ ಅಧಿಕಾರಿಗಳು ಮತ್ತು ಆಯ್ದ ಸಿಬ್ಬಂದಿ ಮಾತ್ರ ಶೋಧ ಕಾರ್ಯಾಚರಣೆಗೆ ತೆರಳಿದರು.
ಈ ಮಧ್ಯೆ, ವಿಧಾನಸಭೆ ಅಧಿವೇಶನದಲ್ಲಿ ಧರ್ಮಸ್ಥಳ ಪ್ರಕರಣ ಪ್ರತಿಧ್ವನಿಸಿದ್ದು, ಅನಾಮಿಕ ದೂರುದಾರ ಹಾಗೂ ಎಸ್ಐಟಿ ತನಿಖೆ ಕುರಿತು ವಿಪಕ್ಷಗಳ ಸದಸ್ಯರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದವು. ಆದಾಗ್ಯೂ, ಧರ್ಮಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಿರಾತಂಕವಾಗಿದೆ. ಇಬ್ಬರು ಹೊಸ ಸಾಕ್ಷಿದಾರರು ಮುಂದೆ ಬಂದು ಹೇಳಿಕೆ ನೀಡಿರುವುದು ಪ್ರಕರಣವನ್ನು ಕುತೂಹಲ ಘಟ್ಟಕ್ಕೆ ಕೊಂಡೊಯ್ದಿದೆ.
ಮುಂದೆ ಬಂದ ಇನ್ನಿಬ್ಬರು ಸಾಕ್ಷಿದಾರರು
13 ನೇ ಜಾಗದಲ್ಲಿ 32 ಅಡಿ ಆಳ, 13 ಅಡಿ ಅಗಲ ಅಗೆದು ಜಿಪಿಆರ್ ಬಳಸಿ ಶೋಧ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಇದರ ನಡುವೆಯೇ, ಇಬ್ಬರು ವ್ಯಕ್ತಿಗಳು ಸಾಕ್ಷ್ಯ ನುಡಿಯುವುದಾಗಿ ಮುಂದೆ ಬಂದಿದ್ದು, ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. 13ನೇ ಪಾಯಿಂಟ್‌ನಲ್ಲಿ ಶವ ಹೂತಿದ್ದನ್ನು ನಾವು ನೋಡಿದ್ದೇವೆ ಎಂದು ತುಕಾರಾಮ ಗೌಡ ಹಾಗೂ ಪುರಂದರ ಗೌಡ ಎಂಬ ಸಾಕ್ಷಿದಾರರು ಹೇಳಿಕೆ ದಾಖಲಿಸಿದ್ದಾರೆ.
ನೇತ್ರಾವತಿ ನದಿ ತಟದಲ್ಲಿ ಶವ ಹೂತಿರುವ ಪ್ರಕರಣದಲ್ಲಿ ಒಬ್ಬ ಅಧಿಕಾರಿಯ ಪಾತ್ರವೂ ಇದೆ, ಅದನ್ನು ಎಸ್ಐಟಿ ಬಳಿ ಹೇಳುತ್ತೇವೆ. ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣ ತೆಗೆದು ಸಂಜೆ 4 ರಿಂದ 5 ಗಂಟೆ ಸುಮಾರಿಗೆ ಹೂತುಹಾಕಿದ್ದನ್ನು ನೋಡಿದ್ದೇನೆ ಎಂದು ಸಾಕ್ಷಿದಾರ ಪುರಂದರ ಗೌಡ ಹೇಳಿರುವುದು ಕುತೂಹಲ ಮೂಡಿಸಿದೆ.
ಭಯದಿಂದಾಗಿ ಈವರೆಗೂ ಬಾಯ್ಬಿಟ್ಟಿರಲಿಲ್ಲ. ಈಗ ರಾಜ್ಯ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಎಸ್ಐಟಿ ರಚನೆ ಮಾಡಿರುವ ಹಿನ್ನೆಲೆ ಸ್ವಯಂಪ್ರೇರಿತರಾಗಿ ಹೇಳಿಕೆ ನೀಡುತ್ತಿದ್ದೇವೆ. ಈ ಜಾಗದಲ್ಲಿ ಹೆಣದ ಕುರುಹು ಸಿಗದಿರಲು ಅಭಿವೃದ್ಧಿ ಆಗರುವುದೇ ಕಾರಣ. ಪ್ರವಾಹ ಹಾಗೂ ಅಣೆಕಟ್ಟು ನಿರ್ಮಾಣದ ಕೆಲಸದಿಂದಾಗಿ ಜಾಗದಲ್ಲಿ ವ್ಯತ್ಯಾಸವಾಗಿರಬಹುದು ಎಂದು ಪುರಂದರ ಗೌಡ ಹೇಳಿದ್ದಾರೆ.
ಗೃಹ ಸಚಿವರನ್ನು ಭೇಟಿ ಮಾಡಿದ ಮೊಹಾಂತಿ
ಈ ಮಧ್ಯೆ, ಎಸ್‌ಐಟಿ ತನಿಖಾ ತಂಡದ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಎಸ್‌ಐಟಿ ತನಿಖೆಯ ಮಧ್ಯಂತರ ವರದಿಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಮತ್ತೊಂದೆಡೆ ಧರ್ಮಸ್ಥಳದ ಪರವಾಗಿ ರಾಜ್ಯವ್ಯಾಪಿ ಪ್ರತಿಭಟನೆ ಆರಂಭವಾಗಿದ್ದು, ಅಪಪ್ರಚಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಕೆಲವರು ತನಿಖೆ ನಿಲ್ಲಿಸಲು ಒತ್ತಾಯಿಸುತ್ತಿದ್ದಾರೆ. ಒಂದು ವೇಳೆ ತನಿಖೆ ನಿಂತರೆ ಸಾಕ್ಷಿದಾರನಿಗೆ ರಿಲೀಫ್ ಸಿಗಬಹುದು. ಆದರೆ, ಆತ ಗುರುತಿಸಿರುವ ಸಾಕಷ್ಟು ಸ್ಥಳಗಳಲ್ಲಿ ಏನಿದೆ ಎಂಬ ಕುತೂಹಲ ಹಾಗೆಯೇ ಉಳಿಯಲಿದೆ. ಇನ್ನು ಗುರುವಾರ ಕೈಗೊಂಡಿರುವ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹು ಸಿಗದೇ ಹೋದರೆ ತನಿಖೆ ನಿಲ್ಲಿಸುವ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ 100ಕ್ಕೂ ಹೆಚ್ಚು ಸ್ಯಾಂಪಲ್ ಸಂಗ್ರಹಣೆ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅವುಗಳ ವರದಿ ಮುಂದಿನ ವಾರದೊಳಗೆ ಬರುವ ಸಾಧ್ಯತೆ ಇದ್ದು, ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಇನ್ನು ಸಿಕ್ಕಿರುವ ಸಾಕ್ಷ್ಯ ಮತ್ತು ಅವುಗಳ ದಾಖಲೀಕರಣ ಅಗತ್ಯವಾಗಿದೆ. ಇದು ಸರ್ಕಾರದ ಜವಾಬ್ದಾರಿ. ಭವಿಷ್ಯದಲ್ಲಿ ಇನ್ನೊಂದು ತನಿಖೆಗೆ ಆದೇಶವಾದಲ್ಲಿ ಸಾಕ್ಷಿನಾಶದ ಆರೋಪ ಎಸ್‌ಐಟಿ ಮೇಲೆ ಬರಲಿದೆ. ಈ ಕಾರಣದಿಂದ ಸರ್ಕಾರ ಅತ್ಯಂತ ಜಾಗರೂಕತೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮಧ್ಯಂತರ ವರದಿ ಬೇಡವೆಂದ ಹೋರಾಟಗಾರರು
ಧರ್ಮಸ್ಥಳ ಪ್ರಕರಣ ಕುರಿತು ಎಸ್ಐಟಿ ತನಿಖೆ ನಡೆಸುತ್ತಿದ್ದು, ಮಧ್ಯಂತರ ವರದಿ ಮೂಲಕ ಮಾಹಿತಿ ನೀಡುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಸೌಜನ್ಯ ಪರ ಹೋರಾಟಗಾರರು ಮಾತ್ರ ಮಧ್ಯಂತರ ವರದಿ ಬಿಡುಗಡೆ ಮಾಡದಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಮಧ್ಯಂತರ ವರದಿಯಿಂದ ತನಿಖೆಯ ಹಾದಿ ತಪ್ಪಲಿದೆ ಎಂಬುದು ಸೌಜನ್ಯ ಪರ ಹೋರಾಟಗಾರರು ಆತಂಕವಾಗಿದೆ.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ಮಾಧ್ಯಮಗಳ ಮುಖಾಂತರ ಪ್ರಕರಣವನ್ನು ತಪ್ಪು ಹಾದಿಗೆ ಎಳೆಯಲಾಗುತ್ತಿದೆ. ಎಸ್ಐಟಿ ತನಿಖೆ ವಿಫಲವಾಗುತ್ತಿದೆ ಎಂದು ಬಿಂಬಿಸುವ ಮೂಲಕ ಅನಾಚಾರ ಮುಚ್ಚಿಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಒಂದು ವೇಳೆ ಸರ್ಕಾರ ಎಸ್ಐಟಿ ತನಿಖೆ ಹಿಂಪಡೆದರೆ ಸರ್ಕಾರದ ಮೇಲೆ ರಾಜಕೀಯ ಒತ್ತಡ ಹೇರಿರುವುದು ಸ್ಪಷ್ಟವಾಗಲಿದೆ. ಇದೇ ಕಾರಣಕ್ಕೆ ನಾನು ಆರಂಭದಲ್ಲೇ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಆಗ್ರಹಿಸಿದ್ದೆ ಎಂದು ಹೇಳಿದ್ದಾರೆ.
ಬೆಳ್ತಂಗಡಿಯ ಹೋರಾಟಗಾರ ಎಲ್. ಶೇಖರ್ ಪ್ರತಿಕ್ರಿಯಿಸಿ, ಎಸ್ಐಟಿ ತನಿಖೆ ಸರಿಯಾದ ರೀತಿ ನಡೆಯುತ್ತಿರುವ ಬಗ್ಗೆ ವಿಶ್ವಾಸವಿದೆ. ಆದರೆ, ವರದಿ ನೀಡುವ ವೇಳೆಗೆ ಇದು ಯಾವ ರೀತಿಯಲ್ಲಿ ಬದಲಾಗಲಿದೆ ಎಂಬುದೇ ಅನುಮಾನ. ಎಸ್ಐಟಿಗೆ ಮೇಲುಸ್ತುವಾರಿಯನ್ನಾಗಿ ಕಾನೂನು ತಜ್ಞರನ್ನು ನೇಮಿಸಬೇಕಿದೆ. ಇಲ್ಲವಾದಲ್ಲಿ ಇದೂ ಕೂಡ ಮಾಮೂಲಿ ತನಿಖೆಯಾಗಿ ಕಸದ ಬುಟ್ಟಿ ಸೇರುವ ಆತಂಕವಿದೆ ಎಂದು ಹೇಳಿದರು.
ಜಿಪಿಆರ್ ವೈಜ್ಞಾನಿಕ ಶೋಧ ವಿಧಾನ
ಉಜಿರೆಯ ಎಂಜಿನಿಯರಿಂಗ್ ಕಾಲೇಜೊಂದರ ನಿವೃತ್ತ ಪ್ರಾಧ್ಯಾಪಕ ವಸಂತಚಂದ್ರ ಮಾತನಾಡಿ, ಜಿಪಿಆರ್ ಅನ್ನು ಡ್ರೋನ್ ಮೂಲಕ ಬಳಸಲಾಗಿದೆ. ಜಿಪಿಆರ್ ಒಂದೇ ಸ್ಥಳದಿಂದ ಒಂದು ಮೀಟರ್ ಸುತ್ತಳತೆಯಲ್ಲಿ 200 ಅಡಿ ಆಳದವರೆಗೂ ಭೂಮಿಯನ್ನು ಸರ್ವೇಕ್ಷಣೆ ಮಾಡಲಿದೆ. ಇದಕ್ಕೆ ಪ್ರತ್ಯೇಕ ಮಾದರಿ ಇರುತ್ತದೆ. ಆದರೂ, ನೇತ್ರಾವತಿ ನದಿ ತಟದಲ್ಲಿ ನಡೆಸಿದ ಶೋಧದಲ್ಲಿ ಏನೂ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಜಿಪಿಆರ್‌ನಲ್ಲಿ ಮಣ್ಣಿನ ವಿಧಗಳು, ಮರಳು, ಕಲ್ಲಿನ ವಿಧಗಳು ಸಿಗುವುದು ಸಾಧ್ಯತೆ ಇದೆ. ಶವಗಳು ಕೊಳೆತಿದ್ದಲ್ಲಿ ಮಣ್ಣಿನ ಬಣ್ಣ ಬದಲಾವಣೆ ಆಗಿರುವುದು ಕೂಡ ತಿಳಿಯಲಿದೆ ಎಂದು ಹೇಳಿದರು.
ಧರ್ಮಸ್ಥಳದಲ್ಲಿ ರಿಕ್ಷಾ ಚಾಲಕರಾಗಿರುವ ಪದ್ಮನಾಭ ಪೂಜಾರಿ (ಹೆಸರು ಬದಲಿಸಲಾಗಿದೆ) ಹೇಳುವ ಪ್ರಕಾರ, ಎಲ್ಲಾ ಮಾಹಿತಿಗಳು ಸ್ಪಷ್ಟವಾಗಿದ್ದರೂ ದೇವಾಲಯದ ಒಳಗೆ ಯಾವುದೇ ಸದ್ದುಗದ್ದಲ ಇಲ್ಲ.ಇಲ್ಲಿನ ಹಿರಿಯ ವ್ಯಕ್ತಿಗಳಲ್ಲಿ ಯಾವುದೇ ಅಳುಕಿಲ್ಲ, ಎಸ್ಐಟಿ ತನಿಖೆ ವಿಫಲವಾಗಿದೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ. ಸೌಜನ್ಯ ಕೊಲೆಯ ತನಿಖೆ ಬಿಟ್ಟು ಮಣ್ಣು ಅಗೆಯಲು ಹೊರಟಿರುವುದು ಹಾಸ್ಯಸ್ಪದ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ದೇವಾಲಯದ ಭೋಜನಾಲಯದ ಹಿರಿಯ ಸೇವಕಿಯೊಬ್ಬರು ಮಾತನಾಡಿ, ಆರೋಪಗಳು ಸಾಮಾನ್ಯ. ಅನ್ನದ ತಟ್ಟೆಯಿಂದ ಹಿಡಿದು ತ್ಯಾಜ್ಯ ವಿಲೇವಾರಿವರೆಗೂ ಆರೋಪಗಳಿವೆ. ಗೂಂಡಾಗಿರಿ ಮತ್ತು ಹಣ ಬಲ ಚೆನ್ನಾಗಿದ್ದರೆ ಸುಲಭದಲ್ಲಿ ನಿವಾರಣೆ ಆಗುತ್ತವೆ. ಗುಂಡಿ ಅಗೆತದ ಸ್ಥಳದಲ್ಲಿ ಶವದ ಗುರುತು ಸಿಕ್ಕಿದರೆ ಇಲ್ಲಿನ ಯಾವುದಾದರೂ ನೌಕರರು ಜೈಲು ಪಾಲಾಗುತ್ತಾರೆಯೇ ಹೊರತು ದೊಡ್ಡವರಲ್ಲ ಎಂದರು.
ಉಜಿರೆ ನಿವಾಸಿ ವ್ಯಾಸ ಭಟ್ ಪ್ರಕಾರ, ಕ್ಷೇತ್ರದ ಹೆಸರು ಹಾಳು ಮಾಡುವ ಉದ್ದೇಶ ಇದ್ದರೆ, ಅದು ನಡೆಯದು. ಇಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಗಿಂತ ದೇವರು ಬಲವಾಗಿದ್ದಾನೆ. ಈಗಾಗಲೇ ಉದ್ದೇಶಿಸಲಾಗಿರುವ ಆರೋಪಿಗಳು ಕೂಡ ಕಾಲ ಕಾಲಕ್ಕೆ ದೇವರ ಶಿಕ್ಷೆ ಅನುಭವಿಸಿದ್ದಾರೆ ಎನ್ನುವುದನ್ನು ಆರೋಪ ಮಾಡುವವರು ಹಿರಿಯರಿಂದ ಕೇಳಿ ತಿಳಿದುಕೊಳ್ಳಲಿ ಎಂದು ಹೇಳಿದರು.