ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಕುರುಹುಗಳನ್ನು ಸಂಗ್ರಹಿಸಿದ ಎಸ್‌ಐಟಿ, ಎಫ್‌ಎಸ್‌ಎಲ್ ಅಧಿಕಾರಿಗಳು
ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಸಿಲುಕಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶುಕ್ರವಾರ ವಿದೇಶದಿಂದ ಬೆಂಗಳೂರಿಗೆ ಮರಳುವುದಾಗಿ ತಿಳಿಸಿದ ಬಳಿಕ ಎಸ್ ಐಟಿ ತನಿಖೆ ಚುರುಕುಗೊಂಡಿದ್ದು, ಹಾಸನದಲ್ಲಿ ಸಾಕ್ಷ್ಯ ಸಂಗ್ರಹ ಮಾಡಲಾಗುತ್ತಿದೆ.
ಪ್ರಕರಣದ ತನಿಖೆ ನಡೆಸುತ್ತಿರು ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರ ಅಧಿಕೃತ ಕ್ವಾರ್ಟರ್ಸ್‌ಗೆ ಮಂಗಳವಾರ ರಾತ್ರಿ ಭೇಟಿ ನೀಡಿದರು. ಬುಧವಾರ ಬೆಳಗ್ಗೆ 10 ಗಂಟೆಯವರೆಗೆ ಕ್ವಾರ್ಟರ್ಸ್‌ನಲ್ಲಿದ್ದ ಅಧಿಕಾರಿಗಳು, ಬುಧವಾರ ಬೆಳಗ್ಗೆ 4.50ರವರೆಗೆ ವಿವಿಧ ಮಾದರಿಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದರು. ಎಸ್‌ಐಟಿ ಮತ್ತು ಎಫ್‌ಎಸ್‌ಎಲ್ ಜಂಟಿಯಾಗಿ 10 ಗಂಟೆಗಳ ಕಾಲ ನಿರಂತರವಾಗಿ ಕ್ವಾರ್ಟರ್ಸ್ ತಪಾಸಣೆ ನಡೆಸಿತು.ಪ್ರಜ್ವಲ್ ಮಲಗುತ್ತಿದ್ದ ಮೂರು ಬೆಡ್‌ರೂಮ್‌ಗಳಿಂದ ಬೆಡ್‌ಗಳು, ಬೆಡ್‌ಶೀಟ್‌ಗಳು, ಬ್ಲಾಂಕೆಟ್‌ಗಳು, ನ್ಯಾಪ್‌ಕಿನ್‌ಗಳು ಮತ್ತು ಬಟ್ಟೆಗಳನ್ನು ಸಂಗ್ರಹಿಸಿದ್ದಾರೆ. ಎಫ್‌ಎಸ್‌ಎಲ್ ಅಧಿಕಾರಿಗಳು ಬೆರಳಚ್ಚುಗಳ ಛಾಯಾಚಿತ್ರಗಳನ್ನೂ ತೆಗೆದುಕೊಂಡರು.
ಲೈಂಗಿಕ ಹಗರಣ ಮತ್ತು ಅತ್ಯಾಚಾರದ ಕುರುಹುಗಳನ್ನು ಪತ್ತೆ ಮಾಡಲು ವಿಧಿವಿಜ್ಞಾನ ವಿಭಾಗದ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಆರೋಪಿ ಮತ್ತು ಸಂತ್ರಸ್ತರ ಕೂದಲು, ವೀರ್ಯದ ಕಲೆ ಮತ್ತಿತರ ಕುರುಹಗಳನ್ನು ಪತ್ತೆ ಮಾಡಲಾಗುತ್ತಿದೆ. ಪ್ರಜ್ವಲ್ ಬಂಧನವಾದ ಬಳಿಕ ಆ ಕುರುಹುಗಳ ಸಾಮ್ಯತೆಗೆ ಆತನ ಡಿಎನ್‌ಎ ಪರೀಕ್ಷೆ ನಡೆಸಲು ಇವು ಸಹಾಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 31ರಂದು ಪ್ರಜ್ವಲ್ ಭಾರತಕ್ಕೆ ವಾಪಸಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಎಸ್‌ಐಟಿ ತೀವ್ರ ನಿಗಾ ವಹಿಸಿದೆ. ಅಧಿಕಾರಿಗಳು ಎರಡನೇ ಬಾರಿಗೆ ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಹಿಂದೆ ಮೇ ಮೊದಲ ವಾರದಲ್ಲಿ ಪ್ರಜ್ವಲ್ ಅವರ ತಂದೆ ಹೆಚ್‌ಡಿ ರೇವಣ್ಣ ಅವರ ವಿರುದ್ಧ ಸಂತ್ರಸ್ತೆಯ ಅಪಹರಣ ಮತ್ತು ಲೈಂಗಿಕ ಕಿರುಕುಳದ ಪ್ರಕರಣದ ಸಂದರ್ಭದಲ್ಲಿಯೂ ಭೇಟಿ ನೀಡಿದ್ದರು.