ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವಿಸ್ಟಿಗೇಶನ್ ಟೀಮ್: ಕುಮಾರಸ್ವಾಮಿ ವಾಗ್ದಾಳಿ
x

ಪ್ರಜ್ವಲ್‌ ಪೆನ್‌ಡ್ರೈವ್‌ ಪ್ರಕರಣ | ಎಸ್‌ಐಟಿ ಎಂದರೆ ಸಿದ್ದರಾಮಯ್ಯ ಇನ್ವಿಸ್ಟಿಗೇಶನ್ ಟೀಮ್: ಕುಮಾರಸ್ವಾಮಿ ವಾಗ್ದಾಳಿ


ಹಾಸನ ಸಂಸದ ಪ್ರಜ್ವಲ್‌ ಹಾಗೂ ಹೆಚ್‌ಡಿ ರೇವಣ್ಣ ಪ್ರಕರಣದ ವಿಚಾರವಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರ ವಿರುದ್ಧ ಸರಣಿ ಆರೋಪಗಳನ್ನು ಮಾಡಿದ್ದಾರೆ.

"ಎಸ್​​ಐಟಿ ಅಂದರೆ ಸ್ಪೆಷಲ್ ಇನ್ವೆಸ್ಟಿಗೇಶನ್ ಎಂದು ನಾನು ಅಂದುಕೊಂಡಿದ್ದೆ. ಆದರೆ ಅದು ಒಂದು, ಸಿದ್ದರಾಮಯ್ಯ ಇನ್ವಿಸ್ಟಿಗೇಶನ್ ಟೀಮ್, ಇನ್ನೊಂದು ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್ʼʼ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ʻʻವಿಡಿಯೋ ವೈರಲ್‌ ಆಗಿರುವ ವಿಚಾರವಾಗಿ ಮಹಿಳಾ ಆಯೋಗದ ಅಧ್ಯಕ್ಷರು ಏಪ್ರಿಲ್ 25ಕ್ಕೆ ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಪತ್ರದಲ್ಲಿ ಪ್ರಭಾವಿ ರಾಜಕಾರಣಿಗಳಿದ್ದಾರೆ ಎಂದು ಹೇಳಿದ್ದಾರೆ. ರಾಜಕಾರಣಿಗಳು ಎಂದರೆ ನೂರು ಜನ ಬೇಕಾದರೂ ಆಗಬಹುದು. ಇದಕ್ಕೆ ನಮ್ಮ ಮುಖ್ಯಮಂತ್ರಿಗಳು ಅವತ್ತು ರಾತ್ರಿಯೆ ವಿಶೇಷ ತಂಡ ರಚನೆ ಮಾಡಿದರು. ಪತ್ರದಲ್ಲಿ ಎಲ್ಲೂ ರೇವಣ್ಣ ,ಪ್ರಜ್ವಲ್ ರೇವಣ್ಣ ಹೆಸರಿಲ್ಲ. ಅದರೂ ಮುಖ್ಯಮಂತ್ರಿಗಳು ಟ್ವೀಟ್‌ನಲ್ಲಿ ಪ್ರಜ್ವಲ್ ರೇವಣ್ಣ ಎಂದು ಬರೆದಿದ್ದಾರೆʼʼ ಎಂದು ಕಿಡಿಕಾರಿದರು.

ʻʻಟೆಕ್ನಿಕಲ್ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಏಪ್ರಿಲ್28 ಕ್ಕೆ ಬೆಂಗಳೂರಿನಲ್ಲಿ ಕೂತ್ಕೊಂಡು ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ಹೊಳೆನರಸೀಪುರದಲ್ಲಿ ಕಂಪ್ಲೈಂಟ್ ಕೊಡಿಸಿದರು. ಎಸ್​ಐಟಿ ರಚನೆ ಅಂದಾಗ ನನಗೆ ಬಹಳ ಸಂತೋಷವಾಯಿತು. ಎಸ್​​ಐಟಿ ಅಂದರೆ ಸ್ಪೆಷಲ್ ಇನ್ವೆಸ್ಟಿಗೇಶನ್ ಅಂತ ನಾನು ಅನ್ಕೊಂಡಿದ್ದೆ. ಅದರೆ ಇದು ಒಂದು ಟೀಮ್ ಸಿದ್ದರಾಮಯ್ಯ ಇನ್ವಿಸ್ಟಿಗೇಶನ್ ಟೀಮ್, ಇನ್ನೊಂದು ಶಿವಕುಮಾರ್ ಇನ್ವೆಸ್ಟಿಗೇಶನ್ ಟೀಮ್ʼʼ ಎಂದು ವಾಗ್ದಾಳಿ ನಡೆಸಿದರು.

ʻʻಇತ್ತೀಚಿಗೆ ರಾಜ್ಯದಲ್ಲಿ ನಡೆದಿರುವುದು ಅತ್ಯಂತ ಕೆಟ್ಟ ಬೆಳವಣಿಗೆ. ಏ.21 ರಂದು ಪೆನ್​​ಡ್ರೈವ್ ಅನ್ನು ಪೊಲೀಸ್ ಅಧಿಕಾರಿಗಳ ಉಸ್ತುವಾರಿಯಲ್ಲೇ ಹಾಸನ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹಂಚಿಕೆ ಮಾಡಲಾಗಿದೆʼʼ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ʻʻಏಪ್ರಿಲ್ 21ರ ರಾತ್ರಿ 8 ಗಂಟೆಗೆ ಪ್ರಜ್ವಲ್ ರೇವಣ್ಣ ವಿಡಿಯೋ ನೋಡಲು ಗ್ರೂಪ್‌ಗೆ ಜಾಯಿನ್ ಆಗಿ ಎಂದು ಮೆಸೇಜ್ ಕಳುಹಿಸಲಾಗಿತ್ತು. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ಅವರಿಗೆ ನೆಲದ ಕಾನೂನಿನಲ್ಲಿ ಕಠಿಣ ಶಿಕ್ಷೆ ಆಗಲಿ. ಇದರಲ್ಲಿ ನಾನು ಯಾವುದೇ ರಾಜಿ ಮತ್ತು ರಕ್ಷಣೆ ಕೊಡುವಂತಹ ಪ್ರಶ್ನೆ ಇಲ್ಲʼʼ ಎಂದು ಕುಮಾರಸ್ವಾಮಿ ಹೇಳಿದರು.

ವಿಡಿಯೋ ರಿಲೀಸ್‌ಗೆ ಕ್ಷಣಗಣನೆ ಎಂದು ಹೇಳಿರೋದು ನವೀನ್ ಗೌಡ. ಆದರೆ ಈ ವ್ಯಕ್ತಿ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ ಯಾಕೆ? ಎಂದು ಕೇಳಿದ ಎಚ್‌ ಡಿ ಕೆ, ಪತ್ರಿಕಾಗೋಷ್ಠಿಯಲ್ಲಿ ಕೆಲ ಫೋಟೋಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದರು. ಸಚಿವ ಜಮೀರ್ ಅಹ್ಮದ್, ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸೇರಿದಂತೆ ಕೈ ಮುಖಂಡರ ಜೊತೆ ನವೀನ್ ಗೌಡ ಇರುವ ಫೋಟೋಗಳನ್ನು ಬಿಡುಗಡೆ ಮಾಡಿದರು.

25 ಸಾವಿರ ಪೆನ್ ಡ್ರೈವ್ ಹಂಚಿಕೆ

"ರಾಜ್ಯಾದ್ಯಂತ ಸುಮಾರು 25 ಸಾವಿರ ಪೆನ್ ಡ್ರೈವ್ ಹಂಚಿಕೆ ಮಾಡಲಾಗಿದೆ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಬಂದಿದೆ. ಆ ಬಗ್ಗೆ ದೂರು ಕೊಟ್ಟ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾರಾದ್ರು ಕಾರ್ಯಕರ್ತರು ಒಂದು ಪೋಸ್ಟ್ ಮಾಡಿದರೆ ತರಾತುರಿಯಲ್ಲಿ ಮನೆ ಸರ್ಚ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಇನ್ನೂ ಏನು ಕ್ರಮ ಆಗಿಲ್ಲ ಏಕೆ" ಎಂದು ಅವರು ಪ್ರಶ್ನಿಸಿದರು.

"ಚುನಾವಣೆ ಸಮಯದಲ್ಲಿ ಮುಖ್ಯಮಂತ್ರಿಗಳು ಜೆಡಿಎಸ್ ಪಕ್ಷ, ಕುಮಾರಸ್ವಾಮಿ ಗೆಲ್ಲಲ್ಲ ಎಂದು ಪದೇ ಪದೇ ಹೇಳಿದ್ದಾರೆ. ಇವರು ಅಷ್ಟು ಧೈರ್ಯವಾಗಿ‌ ಹೇಳಬೇಕಾದರೆ ಯಾರ್ಯಾರು ಇದರಲ್ಲಿ ಪಾಲುದಾರರಿದ್ದಾರೆ" ಎಂದು ಗೊತ್ತಾಗಬೇಕು ಎಂದು ವಾಗ್ದಾಳಿ ನಡೆಸಿದರು.

ಹಾಸನ ಜಿಲ್ಲಾಧಿಕಾರಿ ವಿರುದ್ಧವೂ ಮಾತನಾಡಿರುವ ಕುಮಾರಸ್ವಾಮಿ, "ಜಿಲ್ಲಾಧಿಕಾರಿಗಳಾದ ನೀವು ಶಿಶುಪಾಲ ಕತೆ ಹೇಳಿದ್ದೀರಿ. ನೀವು ಗಂಡ ಹೆಂಡತಿ ಕೋಲಾರದಲ್ಲಿ ಏನ್ ಮಾಡಿದ್ದೀರಿ ಎನ್ನುವುದು ಗೊತ್ತಿದೆ. ಹೆಣ್ಣು ಮಕ್ಕಳಿಗಾಗಿ ಸಹಾಯವಾಣಿ ಕತೆ ಹೇಳುತ್ತಿದ್ದೀರಿ. ಎಷ್ಟು ಜನ ಸಹಾಯವಾಣಿಗೆ ದೂರು ಕೊಟ್ಟಿದ್ದಾರೆ" ಎಂದು ಪ್ರಶ್ನೆ ಮಾಡಿದರು.

"ಮಹಾನುಭಾವ ರಾಹುಲ್ ಗಾಂಧಿ ಪ್ರಕರಣದಲ್ಲಿ ಅಪ್ರಾಪ್ತೆಯರು ಇದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯನವರೇ ಮುಂದಿನ ಪ್ರಧಾನಿ ಅಂತ ಹೇಳಿದ್ದೀರಲ್ಲ. ಹಾಗಾದರೆ ರಾಹುಲ್ ಗಾಂಧಿ ಯಾವ ಆಧಾರದಲ್ಲಿ 400 ಮಂದಿ ಮೇಲೆ ಅತ್ಯಾಚಾರ ಅಂತ ಹೇಳಿದ್ದಾರೆ. ರಾಹುಲ್ ಗಾಂಧಿಯನ್ನು ವಿಚಾರಣೆಗೆ ಒಳಪಡಿಸಿದ್ದೀರಾ?" ಎಂದು ಎಸ್​ಐಟಿ ಮುಖ್ಯಸ್ಥರನ್ನು ಕೇಳಿದರು.

Read More
Next Story