
ಧರ್ಮಸ್ಥಳ ಪ್ರಕರಣ|ಗೃಹ ಸಚಿವರಿಗೆ ತನಿಖಾ ಮಾಹಿತಿ ನೀಡಿದ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ
ಪ್ರಣಬ್ ಮೊಹಾಂತಿ ಅವರು ಗೃಹ ಸಚಿವರನ್ನು ಭೇಟಿ ಮಾಡಿರುವ ತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿರುವುದು ಸಾಮಾನ್ಯ ಸಂಗತಿಯಾದರೂ ರಾಜಕೀಯವಾಗಿ ಹೆಚ್ಚು ಕುತೂಹಲ ಮೂಡಿಸಿದೆ.
ಧರ್ಮಸ್ಥಳ ಪ್ರಕರಣದ ತನಿಖೆ ದಿನಕ್ಕೊಂದು ತಿರುವು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಶನಿವಾರ ಗೃಹಸಚಿವ ಜಿ.ಪರಮೇಶ್ವರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಸುಮಾರು 20 ನಿಮಿಷಗಳ ಕಾಲ ನಡೆದ ಚರ್ಚೆಯಲ್ಲಿ ತನಿಖೆಯ ಪ್ರಗತಿ, ಸಾಕ್ಷ್ಯ ಸಂಗ್ರಹಣೆಯ ಹಂತಗಳು ಹಾಗೂ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ತನಿಖೆಯು ಹೊಸ ಹೊಸ ತಿರುವು ಪಡೆಯುತ್ತಿದ್ದು, ಈ ಕುರಿತಂತೆಯೂ ಗೃಹಸಚಿವರಿಗೆ ವಿವರಿಸಿದರು. ಹೊರ ರಾಜ್ಯಗಳಲ್ಲಿ ದಾಖಲಾಗಿರುವ ಕಾಣೆಯಾದ ಯಾತ್ರಾರ್ಥಿಗಳ ಎಫ್‌ಐಆರ್‌ಗಳ ಪರಿಶೀಲನೆ, ಪತ್ತೆಯಾಗಿರುವ ಸಾಕ್ಷ್ಯಾಧಾರಗಳ ಶೋಧನೆ ಮತ್ತು ತಜ್ಞರ ಅಭಿಪ್ರಾಯ ಪಡೆಯುವ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಪ್ರಣಬ್ ಮೊಹಾಂತಿ ಅವರು ಗೃಹ ಸಚಿವರನ್ನು ಭೇಟಿ ಮಾಡಿರುವ ತನಿಖೆಯ ಪ್ರಗತಿ ಕುರಿತು ಮಾಹಿತಿ ನೀಡಿರುವುದು ಸಾಮಾನ್ಯ ಸಂಗತಿಯಾದರೂ ರಾಜಕೀಯವಾಗಿ ಹೆಚ್ಚು ಕುತೂಹಲ ಮೂಡಿಸಿದೆ.
ತನಿಖೆ ತೀವ್ರಗೊಳಿಸುವಂತೆ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಆ.31ರಂದು ಜೆಡಿಎಸ್ ವತಿಯಿಂದ ಸತ್ಯಯಾತ್ರೆ, ಸೆ.1 ರಂದು ಬಿಜೆಪಿಯು ಧರ್ಮಸ್ಥಳ ಚಲೋ ಕೈಗೊಂಡಿದೆ. ಹಾಗಾಗಿ, ಪ್ರಣಬ್ ಮೊಹಾಂತಿ ಅವರನ್ನು ಕರೆಸಿಕೊಂಡು ಮಾಹಿತಿ ಪಡೆಯಲಾಗಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.
ಎಸ್‌ಐಟಿ ತನಿಖೆಯು ವಿಸ್ತರಣೆಯಾಗುತ್ತಿದ್ದು, ಬೇರೆ ಬೇರೆ ರಾಜ್ಯಗಳ ಪೊಲೀಸರ ಜತೆಗೂಡಿ ಕಾರ್ಯಾಚರಣೆ ನಡೆಸಬೇಕಾಗಿದೆ. ಹಳೆಯ ದಾಖಲೆಗಳ ಪುನರ್ ಪರಿಶೀಲನೆ ಹಾಗೂ ತಜ್ಞರ ಸಮಿತಿಯಿಂದ ಅಭಿಪ್ರಾಯ ಪಡೆಯುವ ಕುರಿತಂತೆ ಗೃಹ ಸಚಿವರೊಂದಿಗೆ ಚರ್ಚಿಸಲಾಗಿದೆ ಎನ್ನಲಾಗಿದೆ.
ಮಾಫಿ ಸಾಕ್ಷಿಯಾಗಿ ಪರಿಗಣನೆ
ಸುಜಾತಾ ಭಟ್ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಲ್ಲ, ಬದಲಾಗಿ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತು ಹಾಕಲಾಗಿದೆ.