ಸಿರಿಗೆರೆ ಮಠ ಗದ್ದುಗೆ ವಿವಾದ | ಪೀಠ ತ್ಯಾಗಕ್ಕೆ ಸ್ವಾಮೀಜಿಗಳಿಗೆ ಸದ್ಭುಕ್ತ ಮಂಡಳಿ ಆಗ್ರಹ
x

ಸಿರಿಗೆರೆ ಮಠ ಗದ್ದುಗೆ ವಿವಾದ | ಪೀಠ ತ್ಯಾಗಕ್ಕೆ ಸ್ವಾಮೀಜಿಗಳಿಗೆ ಸದ್ಭುಕ್ತ ಮಂಡಳಿ ಆಗ್ರಹ


ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ ಮುಂದಿನ ಉತ್ತರಾಧಿಕಾರಿ ಘೋಷಣೆ ಮಾಡಬೇಕು. ಶ್ರೀಮಠದ ಏಕವ್ಯಕ್ತಿ ಡೀಡ್ ರದ್ದುಪಡಿಸಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥವತ್ತಾಗಿ ಜಾರಿಗೊಳಿಸಬೇಕು ಎಂದು ಮಠದ ಸದ್ಭಕ್ತ ಸಾದು ಲಿಂಗಾಯತ ಸಮಾಜದ ಗಣ್ಯರು ನಿರ್ಣಯ ಕೈಗೊಂಡಿದೆ.

ಭಾನುವಾರ ದಾವಣಗೆರೆ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ “ತರಳಬಾಳು ಪೀಠ: ಅಂದು- ಇಂದು ಮುಂದು” ಎಂಬ ವಾಕ್ಯದಡಿ ಶ್ರೀಮಠದ ಸದ್ಭಕ್ತರ ಸಮಾಲೋಚನಾ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಸಾಣೇಹಳ್ಳಿ ಶ್ರೀಗಳು 2019ರಲ್ಲೇ ಪೀಠ ತ್ಯಾಗದ ಬಗ್ಗೆ ಪತ್ರ ಬರೆದಿರುವ ವಿಚಾರ ಮುನ್ನೆಲೆಗೆ ಬಂದಿತು. ಸಾಣೇಹಳ್ಳಿ ಶ್ರೀಗಳು 2019ರಲ್ಲಿಯೇ ತಮ್ಮನ್ನು ಪೀಠದ ಜವಾಬ್ದಾರಿಯಿಂದ ಬಿಡುಗಡೆಗೊಳಿಸಬೇಕೆಂದು ಸಂಘಕ್ಕೆ ಹಾಗೂ ಮೂಲ ಪೀಠಾಧಿಪತಿಗಳಿಗೆ ಪತ್ರ ಬರೆದಿದ್ದರು ಎನ್ನುವ ವಿಚಾರವು ಪ್ರಸ್ತಾಪವಾಗಿದೆ.

ಆದರೆ, ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಠದ ಮೂಲ ಬೈಲಾವನ್ನು ಧಿಕ್ಕರಿಸಿ, 30 ವರ್ಷಗಳ ಹಿಂದೆ ಟ್ರಸ್ಟ್ ರಚಿಸಿ ಏಕವ್ಯಕ್ತಿ ಡೀಡ್ ರಚಿಸಿದ್ದಾರೆ. ಆದರೆ ಇದು ಮಠದ ನಿಯಮಕ್ಕೆ ವಿರುದ್ಧವಾದದು. ಮಠದ ಭಕ್ತರು ದೇಣಿಗೆ ನೀಡಿರುವ 300ರಿಂದ 400 ಕೋಟಿ ರೂ. ಬ್ಯಾಂಕ್‌ ಖಾತೆಯಲ್ಲಿದೆ. ಅಲ್ಲದೆ, ಪೀಠದ ಆಸ್ತಿಯು ತಾವು ಯಾರಿಗೆ ಬರೆಯುತ್ತೇವೆಯೋ ಅವರಿಗೆ ಸೇರಬೇಕೆಂದು ಶ್ರೀಗಳು ಏಕವ್ಯಕ್ತಿ ಡೀಡ್‌ ಮಾಡಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ಎಲ್ಲ ವಿಚಾರಗಳು ಇತ್ತೀಚೆಗೆ ಬಹಿರಂಗವಾಗಿವೆ. ಸಹಜವಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂಬ ಅಂಶಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾದವು.

ಸ್ವಾಮೀಜಿಗಳ ಪೀಠ ತ್ಯಾಗಕ್ಕೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಸಭೆಗಳು ನಡೆಯುತ್ತಿದ್ದವು. ಆದರೆ, ಮುನ್ನಲೆಗೆ ಬಂದಿರಲಿಲ್ಲ. ಇದೀಗ ಶಾಸಕ ಶಾಮನೂರು ಶಿವಶಂಕರಪ್ಪ ಪ್ರವೇಶದಿಂದ ಈ ವಿಚಾರ ಮಹತ್ವ ಪಡೆದುಕೊಂಡಿದೆ.

ಶ್ರೀಗಳು ಪೀಠತ್ಯಾಗ ಕೂಗಿಗೆ ಕಾರಣವೇನು?

ಮಠದ ಹಿಂದಿನ ಗುರುಗಳಾದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಂದ ರೂಪಿತವಾದ ನಿಯಮಗಳ ಪ್ರಕಾರ, ಮಠದ ಗುರುಗಳು 60 ವರ್ಷದ ನಂತರ ಪೀಠ ತ್ಯಾಗ ಮಾಡಿ ಉತ್ತರಾಧಿಕಾರಿ ನೇಮಿಸಬೇಕು. ಆದರೆ, ಡಾ. ಶಿವಮೂರ್ತಿ ಶ್ರೀಗಳಿಗೆ ಈಗ 78 ವರ್ಷ ವಯಸ್ಸಾಗಿದೆ. ಅವರು ಪೀಠಾಧಿಪತಿ ಆಗಿ 42 ವರ್ಷ ಕಳೆದಿದೆ. ಸ್ವಾಮೀಜಿ ಅವರಿಗೆ 60 ವರ್ಷ ಆದ ಕೂಡಲೇ ನಿವೃತ್ತಿ ಹೊಂದಬೇಕಿತ್ತು, ಆದರೂ ನಿವೃತ್ತಿ ಆಗಿಲ್ಲ. ಈ ಹಿಂದೆ ಸ್ವಾಮೀಜಿಯ ಸಹೋದರಿಯ ಮಗನನ್ನು ಉತ್ತರಾಧಿಕಾರಿ ಮಾಡಬೇಕು ಎಂದು ಸ್ವಾಮೀಜಿ ಮುಂದಾಗಿದ್ದರು. ಆದರೆ ಸಮಾಜದಲ್ಲಿ ವಿರೋಧ ವ್ಯಕ್ತವಾಗಿದ್ದಕ್ಕೆ ಆ ಪ್ರಯತ್ನವನ್ನು ಮುಂದೂಡಿದ್ದರು. ನಿವೃತ್ತಿ ವಯಸ್ಸು ಹತ್ತಿರ ಬಂದಾಗಲಾದರೂ ಮರಿ ಸ್ವಾಮಿಯನ್ನು ನೇಮಕ ಮಾಡಬೇಕಿತ್ತು. ಅದು ಕೂಡ ಆಗಿಲ್ಲ ಎಂದು ಸಭೆಯಲ್ಲಿದ್ದ ಸದ್ಭಕ್ತರು ಆತಂಕ ವ್ಯಕ್ತಪಡಿಸಿದರು.

ಸದ್ಭಕ್ತರ ಸಭೆಯ ನಿರ್ಣಯವೇನು?

ಹಿಂದಿನ ಶಿವಕುಮಾರ ಶ್ರೀಗಳು ವಿಲ್ ಮಾಡಿರುವಂತೆ ಹಾಗೂ ಬೈಲಾ ಪ್ರಕಾರ ಈಗಿನ ಸ್ವಾಮೀಜಿಯವರನ್ನು ಬದಲಾವಣೆ ಮಾಡಿ ಹೊಸ ಪೀಠಾಧಿಪತಿಗಳ ನೇಮಕ ಆಗಬೇಕು. ಚಿತ್ರದುರ್ಗದ ಸಿರಿಗೆರೆ ಪೀಠಾಧಿಪತಿ ಹಾಗೂ ಸಾಣೇಹಳ್ಳಿಯ ಪೀಠಾಧಿಪತಿಗಳ ಬದಲಾವಣೆ ಆಗಬೇಕು. ಈಗಿರುವ ಇಬ್ಬರೂ ಶ್ರೀಗಳು ನಿವೃತ್ತಿ ಘೋಷಿಸಬೇಕು. 60 ವರ್ಷ ದಾಟಿದ ಬಳಿಕ ಪೀಠಾಧಿಪತಿ ಸ್ಥಾನ ಬಿಟ್ಟುಕೊಡಬೇಕೆಂಬ ನಿರ್ಣಯಕ್ಕೆ ಇಬ್ಬರೂ ಶ್ರೀಗಳು ಬದ್ಧರಾಗಬೇಕು. ಸಿರಿಗೆರೆ ಶ್ರೀಗಳ ಏಕವ್ಯಕ್ತಿ ಡೀಡ್‌ ರದ್ದಾಗಬೇಕು. ಸಾಧು ವೀರಶೈವ ಸಂಘಕ್ಕೆ ಹೊಸ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಮಾಡಬೇಕು. ಹಿರಿಯ ಶ್ರೀಗಳು ಕಟ್ಟಿ ಬೆಳಸಿದ ಮಠವನ್ನು ಉಳಿಸಲು ಸಮಾಜದ ಎಲ್ಲ ಭಕ್ತರು ಹೋರಾಟ ಮಾಡಬೇಕು ಎಂಬ ನಿರ್ಣಯವನ್ನು ಸದ್ಭಕ್ತ ಸಾದು ಲಿಂಗಾಯತ ಒಕ್ಕೂಟ ಅಂಗೀಕರಿಸಿದೆ.

ಸಭೆ ಬಳಿಕ ಈ ಬಗ್ಗೆ ಶಾಮನೂರು ಶಿವಶಂಕರಪ್ಪ ಮಾತನಾಡಿ, ʻʻಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಕೆಲವು ಮುಗ್ಧ ಭಕ್ತರ ಆಗ್ರಹದಿಂದ ತ್ಯಾಗ ಮಾಡಲಿಲ್ಲ. ನಂತರ ಮಠದ ಟ್ರಸ್ಟ್​​ ತಿದ್ದುಪಡಿ ಮಾಡಿಕೊಂಡಿದ್ದಾರೆ, ಇದರ ಅಗತ್ಯವಿತ್ತಾ? ಕೋರ್ಟ್‌ನಲ್ಲಿ ಈ ವಿಚಾರ ಇದೆ. ವೈಭವದಿಂದ ಇದ್ದ ಸಿರಿಗೆರೆ ಮಠಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಿರಿಗೆರೆ ಹಾಗೂ ಸಾಣೆಹಳ್ಳಿ ಸ್ವಾಮೀಜಿಗಳು ಬದಲಾಗಲಿ, ಉತ್ತರಾಧಿಕಾರಿಗಳನ್ನು ಮಾಡಲಿ ಎಂದು ಶಿವಶಂಕರಪ್ಪ ಒತ್ತಾಯಿಸಿದರು. ಅಲ್ಲದೇ, ಆ. 18ಕ್ಕೆ ಬೆಂಗಳೂರಿನಲ್ಲಿ ಸ್ವಾಮೀಜಿ ಭೇಟಿ ಆಗಲಿದ್ದೇವೆ. ಅದಕ್ಕಾಗಿ 25 ಸದಸ್ಯರ ನಿಯೋಗ ರಚನೆ ಆಗಿದೆ, ಅವರ ಜೊತೆ ಚರ್ಚೆ ಮಾಡಿ, ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದುʼʼ ಎಂದು ಹೇಳಿದರು.

ಆ.18ಕ್ಕೆ ಸಿರಿಗೆರೆ ಶ್ರೀಗಳ ಭೇಟಿಗೆ ನಿಯೋಗ?

ಮಠದ ಸದ್ಭಕ್ತರ ಸಭೆ ಹಾಗೂ ಅಲ್ಲಿ ಕೈಗೊಂಡಿರುವ ನಿರ್ಣಯಗಳ ಬಗ್ಗೆ ಚರ್ಚಿಸಲು ಆ.18 ರಂದು ಬೆಂಗಳೂರಿನಲ್ಲಿ ಸಿರಿಗೆರೆ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಸುಮಾರು 25 ಜನರ ನಿಯೋಗ ಭೇಟಿ ಮಾಡಲಿದೆ. ಅಂದು ಸ್ವಾಮೀಜಿಯವರು ನಮ್ಮ ಬೇಡಿಕೆ ಮನ್ನಿಸಿ ಪೀಠ ತ್ಯಾಗಕ್ಕೆ ಒಪ್ಪುತ್ತಾರೆ ಎಂಬ ವಿಶ್ವಾಸವಿದೆ. ಒಂದು ವೇಳೆ ಅವರು ಒಪ್ಪದೇ ಇದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು ಎಂದು ಶಾಮನೂರು ಹೇಳಿದ್ದಾರೆ.

ಈ ನಡುವೆ, ಸಭೆಯಲ್ಲಿ ಹಾಜರಿದ್ದ ಸಮುದಾಯದ ಮತ್ತೊಬ್ಬ ಮುಖಂಡರಾದ ಅಣಬೇರು ರಾಜಣ್ಣ ಅವರು, ಸ್ವಾಮೀಜಿ ಕೂಡಲೇ ಪೀಠತ್ಯಾಗ ಮಾಡಬೇಕು ಮತ್ತು ಏಕವ್ಯಕ್ತಿ ಡೀಡ್‌ ರದ್ದು ಮಾಡಬೇಕು. ಅದಕ್ಕೆ ಒಪ್ಪದೇ ಹೋದರೆ ಮಠಕ್ಕೆ ಐವತ್ತು ಸಾವಿರ ಜನರೊಂದಿಗೆ ಪಾದಯಾತ್ರೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಮುಖಂಡರಾದ ಎಸ್‌ ಎ ರವೀಂದ್ರನಾಥ್‌, ಬಿ ಸಿ ಪಾಟೀಲ್‌, ಬಿ ಪಿ ಹರೀಶ್‌ ಮತ್ತಿತರರು ಇದ್ದರು.

Read More
Next Story