ಸಿರಿಗೆರೆ ಮಠದ ಗದ್ದುಗೆ ವಿವಾದ | ಪೀಠಕ್ಕೆ ಅಂಟಿ ಕುಳಿತಿಲ್ಲ, ಧರ್ಮ- ಕಾನೂನು ಪಾಲನೆ ಮಾಡುತ್ತಿದ್ದೇನೆ: ಶ್ರೀಗಳ ಕಿಡಿನುಡಿ
ʻʻಪೀಠಕ್ಕೆ ಅಂಟಿ ಕುಳಿತಿಲ್ಲ. ಧರ್ಮ, ಕಾನೂನು ಪಾಲನೆ ಮಾಡುವ ಸಲುವಾಗಿ ನಾನು ಮುಂದುವರಿಯುತ್ತಿದ್ದೇನೆ. ಭಕ್ತರ ಇಚ್ಚೆಯನುಸಾರವೇ ನಿರ್ಧಾರ ಇರುತ್ತದೆʼʼ ಎಂದು ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಭಾನುವಾರ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಠದ ಸದ್ಭಕ್ತರ ಸಮಾಲೋಚನಾ ಸಭೆಯನ್ನು ವಿರೋಧಿಸಿ ಸೋಮವಾರ ಸಿರಿಗೆರೆಯ ತರಳಬಾಳು ಬೃಹನ್ಮಠದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿ, ಆಕ್ರೋಶ ಹೊರಹಾಕಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಶ್ರೀಗಳು, ʻʻಕೆಲವರು ಡೀಡ್ ವಿಚಾರ ಸಂಬಂಧ ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್‌ನಲ್ಲಿನ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಬರಲಿ. ಸಮುದಾಯಕ್ಕೆ ಒಳಿತಾಗಬೇಕು ಎಂಬುದು ನಮ್ಮ ಆಶಯʼʼ ಎಂದು ಹೇಳಿದರು.
ʻʻಮುಕ್ತ ಚರ್ಚೆಗೆ ನಾವು ಯಾವಾಗಲೂ ಸಿದ್ಧರಿದ್ದೇವೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ಮೊದಲಿನಿಂದಲೂ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ, ನಿನ್ನೆಯ (ಭಾನುವಾರ) ಸಭೆಗೆ ಯಾಕೆ ಹೋದರು ಎಂಬುದು ಗೊತ್ತಿಲ್ಲ. ಅವರೊಟ್ಟಿಗೆ ಫೋನ್‌ನಲ್ಲಿಯೂ ಮಾತನಾಡುತ್ತಿದ್ದೆವು. ಅವರೂ ನಮ್ಮ ಬಳಿ ವಿಚಾರ ಚರ್ಚೆ ಮಾಡುತ್ತಿದ್ದರು. ಆದರೆ, ಇದ್ದಕ್ಕಿದ್ದ ಹಾಗೆ ಈ ರೀತಿ ನಡೆದುಕೊಂಡಿರುವುದು ಭಕ್ತರಿಗೆ ಬೇಸರ ತರಿಸಿದೆʼʼ ಎಂದರು.
ʻʻನಾವು ಯಾವಾಗಲೂ ಪೀಠದಲ್ಲೇ ಇರಬೇಕೆಂಬ ಇರಾದೆ ಹೊಂದಿಲ್ಲ. ಕೋರ್ಟ್‌ನಲ್ಲಿನ ಕೇಸ್ ವಾಪಸ್ ಪಡೆದು ಬರಲಿ. ಎಲ್ಲಾ ವಿಚಾರಗಳ ಕುರಿತಂತೆ ಸಮಾಲೋಚನೆ ನಡೆಸಲಿ. ಮುಕ್ತವಾಗಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮ್ಮ ವಿರೋಧ ಇಲ್ಲ. ವಿನಾಕಾರಣ ಆರೋಪ ಮಾಡುವುದು ನಿಲ್ಲಬೇಕು. ಭಕ್ತರ ಆಕ್ರೋಶ ನೋಡಿದರೆ, ಇದು ಎಲ್ಲಿ ಮುಟ್ಟತ್ತದೆ ಎಂಬ ಭಯ ಕಾಡುತ್ತದೆ. ಎಲ್ಲರೂ ಶಾಂತಿಯುತವಾಗಿ ವರ್ತಿಸಿ. ಯಾವುದೇ ಕಾರಣಕ್ಕೂ ಸಿಟ್ಟಿನಲ್ಲಿ ಮೂಗು ಕೊಯ್ದುಕೊಂಡಂತೆ ಆಗಬಾರದುʼʼ ಎಂದು ಭಕ್ತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು.
ʻʻಮಠದಲ್ಲಿನ ಎಲ್ಲಾ ಕಾರ್ಯಗಳು ಪಾರದರ್ಶಕವಾಗಿವೆ. ಮಠದಿಂದ ಉಚ್ಚಾಟನೆಗೊಂಡವರು, ಮಠದ ಉಪಕಾರ ಪಡೆದುಕೊಂಡವರು ಅಪಕಾರ ಮಾಡಲು ಹೊರಟಿದ್ದಾರೆ. ಇದಕ್ಕೆಲ್ಲಾ ಜಗ್ಗುವುದೂ ಇಲ್ಲ, ಬಗ್ಗುವುದೂ ಇಲ್ಲ. ಏನೇ ಇದ್ದರೂ ಸಾಕ್ಷಿ ಸಮೇತ ಬರಲಿ, ಸಮಾಜದವರೆಲ್ಲರೂ ಸೇರಿ ಒಟ್ಟಾಗಿ ಕುಳಿತು ಚರ್ಚಿಸಲಿ. ಅದನ್ನು ಬಿಟ್ಟು ಸಭೆ ನಡೆಸಿ, ಆರೋಪಗಳ ಮೇಲೆ ಆರೋಪ ಮಾಡಿದರೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸತ್ಯವಿರಬೇಕು, ಸತ್ಯವಿದ್ದರೆ ಆರೋಪ ಮಾಡಬೇಕು. ಯಾರನ್ನೋ ಮೆಚ್ಚಿಸಲು ಈ ರೀತಿಯ ವರ್ತನೆಯು ಸರಿಯಾದದ್ದಲ್ಲ ಎಂಬುದು ನಮ್ಮ ಭಾವನೆʼʼ ಎಂದು ಸಿರಿಗೆರೆ ಶ್ರೀಗಳು ಹೇಳಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಭಕ್ತರೊಬ್ಬರು ಮಾಹಿತಿ ನೀಡಿದ್ದಾರೆ.