ಹೊಸ ವರ್ಷ ಸ್ವಾಗತಿಸಿದ ಸಿಲಿಕಾನ್ ಸಿಟಿ: ಮುಗಿಲು ಮುಟ್ಟಿದ ಸಂಭ್ರಮ
2024ಕ್ಕೆ ಗುಡ್ ಬೈ ಹೇಳಿ 2025ನ್ನು ಜನತೆ ಹರ್ಷೋಲ್ಲಾಸದಿಂದ ಸ್ವಾಗತಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಮಂಗಳವಾರ ರಾತ್ರಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. 2024ಕ್ಕೆ ಬಾಯ್ ಹೇಳಿದ್ದಾರೆ. ಸಡಗರ- ಸಂಭ್ರಮಗಳು ಕ್ಷಣಗಳು ಪ್ರಮುಖವಾಗಿ ಇಲ್ಲಿನ ಎಂಜಿ ರೋಡ್ ಹಾಗೂ ಬ್ರಿಗೇಡ್ ರೋಡ್ನಲ್ಲಿ ಕುಣಿದು ಕುಪ್ಪಳಿದ ಜನತೆಯ ಖುಷಿಗೆ ಸಾಕ್ಷಿಯಾಗಿವೆ.
ಐಟಿ ಕಂಪನಿಗಳು ಹೆಚ್ಚಿರುವ ಟೆಕಿಗಳೇ ತುಂಬಿ ತುಳುಕುತ್ತಿರುವ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ದೇಶದ ಇತರ ನಗರಗಳಿಗಿಂತ ಭಿನ್ನವಾಗಿ ನಡೆಯಿತು. ಹೇಳಿಕೇಳಿ ಬೆಂಗಳೂರು ಪಬ್‌ಗಳೇ ಹೆಚ್ಚಿರುವ ನಗರ. ಹೀಗಾಗಿ ಇಲ್ಲಿ ಮದ್ಯದ ಪಾರ್ಟಿಗಳಿಗೂ ಕೊರತೆ ಇಲ್ಲ. ಮಧ್ಯರಾತ್ರಿ ತನಕ ಕಾದು ಕುಳಿತು ಎಲ್ಲರಿಗೂ ಚಿಯರ್ಸ್ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿದರು.
ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಅಂಗಡಿ ಮತ್ತು ಮಾಲ್‌ಗಳಿಗೆ ಬಣ್ಣದ ಲೈಟ್‌ಗಳ ಸಿಂಗಾರ ಮಾಡಲಾಗಿತ್ತು. ಝಗಮಗಿಸುವ ಬೆಳಕಿನ ಅಲಂಕಾರ ನಗರಕ್ಕೆಹೊಸ ಕಳೆ ತಂದುಕೊಟ್ಟಿತು. ಸಂಜೆಯ ವೇಳೆ ಜನರ ಖರೀದಿಯೂ ಜೋರಾಗಿತ್ತು. ಇನ್ನೂ ಕೆಲವರು 2024ರ ಕೊನೇ ಸೂರ್ಯಾಸ್ತವನ್ನು ಗಮನಿಸಿದರು.
ಹೊಸ ವರ್ಷದ ಸಂಭ್ರಮಾಚರಣೆಗೆ ಮಧ್ಯರಾತ್ರಿ 2 ಗಂಟೆಯವರಿಗೆ ಅವಕಾಶ ಮಾಡಿಕೊಡಲಾಗಿದೆ. ಏತನ್ಮಧ್ಯೆ,ಕ ಬೆಂಗಳೂರಿನಲ್ಲಿ ಭರ್ಜರಿ ಮದ್ಯ ಮಾರಾಟವಾಗುತ್ತಿದೆ. ಬೆಳಗ್ಗೆಯಿಂದಲೇ ಮದ್ಯ ಖರೀದಿಗೆ ಮದ್ಯಪ್ರಿಯರು ಮುಗಿಬಿದ್ದಿದ್ದು, ಕೇಸ್ ಗಟ್ಟಲೆ ಮದ್ಯದ ಬಾಟಲ್ಗಳನ್ನು ಖರೀದಿಸುತ್ತಿರುವುದು ಎಂ.ಜಿ. ರಸ್ತೆಯ ಟಾನಿಕ್ ವೈನ್ ಶಾಪ್ನಲ್ಲಿ ಕಂಡು ಬಂತು.
ಎಂಜಿ, ಬ್ರಿಗೇಡ್ ರೋಡ್ ಫುಲ್ ರಷ್
ಹೊಸ ವರ್ಷಾಚರಣೆಗೆ ಬ್ರಿಗೇಡ್ ರೋಡ್ ಕೂಡ ಸಿದ್ಧವಾಗಿದೆ. ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್ಗೆ ತಂಡೋಪತಂಡಗಳಲ್ಲಿ ಜನರು ಆಗಮಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪ್ರಮುಖವಾಗಿ ಮಹಿಳೆಯರ ಸುರಕ್ಷತೆಗೆ ಪೊಲೀಸರ ಒತ್ತು ಕೊಟ್ಟಿದ್ದರು. ಮಹಿಳೆಯರ ಸುರಕ್ಷತೆಗಾಗಿ ವುಮೆನ್ ಸೇಫ್ಟಿ ಐಲ್ಯಾಂಡ್ ಮತ್ತು ಎಮರ್ಜೆನ್ಸಿ ಮೆಡಿಕಲ್ ಔಟ್ ಪೋಸ್ಟ್ ನಿರ್ಮಾಣ ಮಾಡಲಾಗಿತ್ತು. ಮಹಿಳೆಯರಿಗೆ ತೊಂದರೆ ಆದರೆ ಸೇಫ್ಟಿ ಐಲ್ಯಾಂಡ್ನಲ್ಲಿ ಆಶ್ರಯ ಪಡೆಯಲು ಅವಕಾಶವಿತ್ತು.
ಹೊಸ ವರ್ಷಾಚರಣೆಗೆ ಶುರುವಾಗುವ ಮುನ್ನ ಎಂಜಿ ರೋಡ್, ಬ್ರಿಗೇಡ್ ರಸ್ತೆಯಲ್ಲಿ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ಸ್ಕ್ವಾಡ್ ಪರಿಶೀಲನೆ ಮಾಡಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಇಂಚಿಂಚು ಜಾಗವನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪರಿಶೀಲನೆ ಮಾಡಿ ಹೊಸ ವರ್ಷ ಆಚರಣೆ ಮಾಡುವವರಿಗೆ ಭದ್ರತೆಯನ್ನು ಪೊಲೀಸರು ಒದಗಿಸಿದ್ದಾರೆ. ಅಂಗಡಿ ಮುಗ್ಗಟ್ಟುಗಳು ಹಾಗೂ ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಬ್ರಿಗೇಡ್ ರಸ್ತೆ ಬಳಿ ಪೊಲೀಸ್ ಕಂಟ್ರೋಲ್ ರೂಂ ಪ್ಲಸ್ ಸಿಸಿಟಿವಿ ಮಾನಿಟರಿಂಗ್ ರೂಮ್ ಸ್ಥಾಪನೆ ಮಾಡಲಾಗಿದೆ. ಕೇಂದ್ರ ವಿಭಾಗದ ತಾತ್ಕಾಲಿಕ ಕಂಟ್ರೋಲ್ ರೂಂ ಅನ್ನು ಪೊಲೀಸರು ಸಿದ್ದ ಪಡಿಸಿಕೊಂಡಿದ್ದಾರೆ. 337 ಸಿಸಿ ಕ್ಯಾಮರಾಗಳನ್ನು ಇಲ್ಲಿಂದ ಕಂಟ್ರೋಲ್ ಮಾಡಲಾಯಿತು.
ಜೊತೆಗೆ ಪೊಲೀಸರು ಸಂಜೆ 6.30ಕ್ಕೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ವಾಹನಗಳು ಓಡಾಟದಿಂದ ಯಾವುದೇ ಅಹಿತಕರ ಘಟನೆ ಆಗದಂತೆ ತಡೆಯಲು ಬ್ಯಾರಿಕೇಡ್ ಹಾಕಲಾಗಿದೆ. ನಡೆದುಕೊಂಡು ಹೋಗುವವರಿಗೆ ಮಾತ್ರ ಅವಕಾಶ ಮಾಡಿ ಕೊಡಲಾಗಿತ್ತು.
ಕೋರಮಂಗಲದಲ್ಲಿ ಮುಗಿಲು ಮುಟ್ಟಿದ ಸಂಭ್ರಮ
ಇನ್ನು ಹೊಸ ವರ್ಷವನ್ನು ಸ್ವಾಗತಿಸಲು ಕೋರಮಂಗಲದಲ್ಲಿ ಪಬ್ಗಳು ಸಿದ್ಧಗೊಂಡಿತ್ತು. ಕೋರಮಂಗಲದಲ್ಲಿ ನ್ಯೂಇಯರ್ ಪಾರ್ಟಿಗಾಗಿ ಒಂದು ವಾರದ ಮುಂಚೆಯೇ ಜನರು ಬುಕ್ಕಿಂಗ್ ಮಾಡಿಕೊಂಡಿದ್ದರು. ಕೋರಮಂಗಲದಲ್ಲಿ ಭದ್ರತೆ ದೃಷ್ಟಿಯಿಂದ 180 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಮಹಿಳೆಯರ ಸುರಕ್ಷತೆಗಾಗಿ 25 ಐಲ್ಯಾಂಡ್ಗಳನ್ನು ನಿರ್ಮಾಣ ಮಾಡಲಾಗಿತ್ತು. ಜೊತೆಗೆ 20 ವಾಚ್ ಟವರ್ಗಳನ್ನು ಪೊಲೀಸರು ಮಾಡಿಕೊಂಡಿದ್ದರು. ಕೋರಮಂಗಲದಲ್ಲಿ ಮಿನಿ ಕಂಟ್ರೋಲ್ ರೂಂ ಅನ್ನು ಪೊಲೀಸ್ ಇಲಾಖೆ ಮಾಡಿಕೊಂಡಿತ್ತು. ಕಳೆದ ಬಾರಿಗಿಂತ ಈ ಸಲ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.ಹೆಚ್ಚುವರಿಯಾಗಿ 180 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಮೂರು ಅಂಬ್ಯುಲೆನ್ಸ್ ಜೊತೆಗೆ ಎರಡು ಪ್ರೈಮರಿ ಹೆಲ್ತ್ ಸೆಂಟರ್ ಸ್ಥಾಪಿಸಲಾಗಿದ್ದು, 2 ಫೈರ್ ಸೇಫ್ಟಿ ವಾಹನಗಳ ನಿಯೋಜನೆ ಮಾಡಲಾಗಿದ್ದು, 500ಕ್ಕಿಂತ ಹೆಚ್ಚು ಹೋಂಗಾರ್ಡ್, 700 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನ ಕೋರಮಂಗಲದ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಇಂದಿರಾನಗರದಲ್ಲೂ ಹೊಸ ವರ್ಷಾಚರಣೆ ಸಂಭ್ರಮ
ಇಂದಿರಾನಗರದ 100 ಫೀಟ್ ರೋಡ್‌ನ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲೂ ಸಂಭ್ರಮಾಚರಣೆ ಜೋರಾಗಿತ್ತು. ಇಂದಿರಾನಗರದ 100, 80 ಫೀಟ್ ರಸ್ತೆಯಲ್ಲಿ 600 ಎಲ್ ಇಡಿ ಫೋಕಸ್ ಲೈಟ್ ಅಳವಡಿಸಲಾಗಿದೆ. ಅಲ್ಲಿಯೂ ಕೂಡ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗಿದೆ. 100 ಪೀಟ್ ರಸ್ತೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಜೊತೆಗೆ ಮಹಿಳಾ ಸುರಕ್ಷಿತ ಕೇಂದ್ರವನ್ನೂ ಮಾಡಲಾಗಿತ್ತು.
ಭದ್ರತೆ ಇದ್ದರೂ ನಡೆದೆ ಹೋಯ್ತು ಅವಘಡ
ಭದ್ರತೆಯ ನಡೆವೆಯೂ ಮದ್ಯದ ಅಮಲಿನಲ್ಲಿ ಡಿವೈಡರ್ ಮೇಲೆ ಕಾರು ಹತ್ತಿಸಿ ವ್ಯಕ್ತಿಯೊಬ್ಬ ರಂಪಾಟ ಮಾಡಿದ ಘಟನೆ ಇಂದಿರಾನಗರ 100 ಫೀಟ್ ರಸ್ತೆಯಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ಡಿವೈಡರ್ ಹತ್ತಿಸಿದ್ದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಅಪಘಾತ ನಡೆದ ವೇಳೆ ಸುತ್ತುವರಿದ ಸಾರ್ವಜನಿಕರು ಮೇಲೂ ಅಮಲಿನಲ್ಲಿದ್ದ ವ್ಯಕ್ತಿ ರಂಪಾಟ ಮಾಡಿದ್ದಾನೆ. ಇಂದಿರಾನಗರ 100 ಫೀಟ್ ರಸ್ತೆಯ 12th ಮೇನ್ ಜಂಕ್ಷನ್ ನಲ್ಲಿ ಘಟನೆ ನಡೆದಿದೆ. ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.