
ಇಂಗ್ಲೆಂಡ್‌ನಲ್ಲಿ ಸಿಖ್ ಮಹಿಳೆ ಮೇಲೆ ಅತ್ಯಾಚಾರ, ಜನಾಂಗೀಯ ನಿಂದನೆ: ತೀವ್ರ ಆಕ್ರೋಶ
ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್ ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಇದು ಕೇವಲ "ಅತ್ಯಂತ ಹಿಂಸಾತ್ಮಕ ಕೃತ್ಯ" ಮಾತ್ರವಲ್ಲ, "ಜನಾಂಗೀಯ ಪ್ರಚೋದಿತ" ದಾಳಿ ಎಂದು ಹೇಳಿದ್ದಾರೆ.
ಯುನೈಟೆಡ್ ಕಿಂಗ್‌ಡಮ್‌ನ (UK) ಓಲ್ಡ್‌ಬರಿ ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ಸಿಖ್ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, "ನಿನ್ನ ದೇಶಕ್ಕೆ ವಾಪಸ್ ಹೋಗು" ಎಂದು ಜನಾಂಗೀಯ ನಿಂದನೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯನ್ನು ಪೊಲೀಸರು "ಜನಾಂಗೀಯ ಪ್ರಚೋದಿತ ದಾಳಿ" ಎಂದು ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
ಸೆಪ್ಟೆಂಬರ್ 9 ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಓಲ್ಡ್‌ಬರಿಯ ಟೇಮ್ ರಸ್ತೆ ಬಳಿ ಈ ಕೃತ್ಯ ನಡೆದಿದೆ. ಸಂತ್ರಸ್ತೆಯ ಮೇಲೆ ದಾಳಿ ನಡೆಸಿದ ಆರೋಪಿಗಳು ಬಿಳಿ ಜನಾಂಗೀಯರಾಗಿದ್ದು, ಒಬ್ಬ ಬೋಳು ತಲೆಯ, ದಪ್ಪ ದೇಹದ ವ್ಯಕ್ತಿಯಾಗಿದ್ದು, ಕಪ್ಪು ಬಣ್ಣದ ಸ್ವೆಟ್‌ಶರ್ಟ್ ಮತ್ತು ಕೈಗವಸುಗಳನ್ನು ಧರಿಸಿದ್ದ. ಇನ್ನೊಬ್ಬ ಬೂದು ಬಣ್ಣದ ಟಾಪ್ ಧರಿಸಿದ್ದ ಎಂದು ಪೊಲೀಸರು ಶಂಕಿತರ ವಿವರ ನೀಡಿದ್ದಾರೆ.
ಸಿಖ್ ಸಮುದಾಯದಲ್ಲಿ ಆಕ್ರೋಶ
ಈ ಘಟನೆಯು ಸ್ಥಳೀಯ ಸಿಖ್ ಸಮುದಾಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಇದೊಂದು ಉದ್ದೇಶಿತ ದಾಳಿ ಎಂದು ಪರಿಗಣಿಸಲಾಗಿದೆ. ಜನರ ಆಕ್ರೋಶ "ಸಂಪೂರ್ಣವಾಗಿ ಅರ್ಥವಾಗುವಂತಹದ್ದು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದು, ಆ ಪ್ರದೇಶದಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. "ದಾಳಿಯ ಸಮಯದಲ್ಲಿ ಆರೋಪಿಗಳು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಮಹಿಳೆ ನಮಗೆ ತಿಳಿಸಿದ್ದಾರೆ" ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಹೇಳಿದ್ದಾರೆ.
ಬ್ರಿಟಿಷ್ ಸಂಸದರಿಂದ ಖಂಡನೆ
ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್ ಈ ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಇದು ಕೇವಲ "ಅತ್ಯಂತ ಹಿಂಸಾತ್ಮಕ ಕೃತ್ಯ" ಮಾತ್ರವಲ್ಲ, "ಜನಾಂಗೀಯ ಪ್ರಚೋದಿತ" ದಾಳಿಯೂ ಆಗಿದೆ ಎಂದು ಹೇಳಿದ್ದಾರೆ. "ಅವಳು ಇಲ್ಲಿಗೆ ಸೇರಿದವಳು. ನಮ್ಮ ಸಿಖ್ ಸಮುದಾಯ ಮತ್ತು ಪ್ರತಿಯೊಂದು ಸಮುದಾಯಕ್ಕೂ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುತವಾಗಿ ಬದುಕುವ ಹಕ್ಕಿದೆ. ಓಲ್ಡ್‌ಬರಿಯಲ್ಲಿ ಅಥವಾ ಬ್ರಿಟನ್‌ನ ಯಾವುದೇ ಭಾಗದಲ್ಲಿ ಜನಾಂಗೀಯ ದ್ವೇಷಕ್ಕೆ ಸ್ಥಾನವಿಲ್ಲ," ಎಂದು ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಹೆಚ್ಚುತ್ತಿರುವ ಜನಾಂಗೀಯ ದಾಳಿಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರೊಂದಿಗೆ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.