
ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿ; ಬಿಜೆಪಿ-ಆರ್‌ಎಸ್‌ಎಸ್ ಬೆದರಿಕೆಗೆ ಜಗ್ಗಲ್ಲ ಎಂದ ಸಿಎಂ
ಕೇಂದ್ರ ಸರ್ಕಾರದ ಜನ ವಿರೋಧಿಗಳ ನೀತಿಗಳ ವಿರುದ್ಧ ಆಯೋಜಿಸಿದ್ದ ಖಂಡನಾ ಸಮಾವೇಶದಲ್ಲಿ ಸಿಎಂ ಭಾಷಣಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿದೆ.
ಪಾಕಿಸ್ತಾನದ ಜತೆ ಯುದ್ಧ ಬೇಡ ಎಂಬ ತಮ್ಮ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ ಹೊರತಾಗಿಯೂ ಬಿಜೆಪಿ ನಾಯಕರ ಆಕ್ರೋಶ ಮುಂದುವರಿದಿದೆ.
ಬೆಳಗಾವಿಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧದ ಖಂಡನಾ ಸಮಾವೇಶದಲ್ಲಿ ಸಿಎಂ ಭಾಷಣಕ್ಕೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಅಡ್ಡಿಪಡಿಸಿದ ಘಟನೆ ನಡೆದಿದೆ.
ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಭಾಷಣ ಮುಗಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಮಾಡಲು ಮುಂದಾದರು. ಆಗ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಕಪ್ಪು ಪಟ್ಟಿ ಧರಿಸಿ, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾರ್ಯಕ್ರಮದ ಸ್ಥಳದಲ್ಲಿ ಗೊಂದಲ ಉಂಟಾದ ಕಾರಣ ಸಿಎಂ ಅವರು ಕೆಲ ಹೊತ್ತು ಮಾತು ಭಾಷಣ ನಿಲ್ಲಿಸಿದರು.
ಎಎಸ್ಪಿಗೆ ಸಿಎಂ ತರಾಟೆ
ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರಿಂದ ಆಕ್ರೋಶಗೊಂಡ ಸಿಎಂ ಸಿದ್ದರಾಮಯ್ಯ ಅವರು ಧಾರವಾಡ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರನ್ನು ವೇದಿಕೆಗೆ ಕರೆದು ತರಾಟೆಗೆ ತೆಗೆದುಕೊಂಡರು. ಬೆಳಗಾವಿ ಎಸ್ಪಿ 'ಯಾರ್ರಿ' ಎಂದು ಏರುಧ್ವನಿಯಲ್ಲಿ ಕೇಳಿದರು. ಆಗ ಮಧ್ಯಪ್ರವೇಶಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನೂ ಗದರಿದರು. ಬಿಜೆಪಿಗರ ಪ್ರತಿಭಟನೆಗೆ ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೊಲೀಸರು ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದರು.
ಕಿಡಿಗೇಡಿಗಳಿಗೆ ಸಿಎಂ ಸವಾಲು
ಭಾಷಣ ಮುಂದುವರಿಸಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ-ಆರ್‌ಎಸ್‌ಎಸ್ ಗೊಡ್ಡು ಬೆದರಿಕೆಗೆ ಜಗ್ಗಲ್ಲ-ಬಗ್ಗಲ್ಲ. ನಿಮ್ಮನ್ನು ಸಾರ್ವಜನಿಕವಾಗಿ ಎದುರಿಸುವ ಶಕ್ತಿ ನನಗೆ ಹಾಗೂ ನಮ್ಮ ಕಾರ್ಯಕರ್ತರಿಗೆ ಎಂದು ಗುಡುಗಿದರು.
ಕಳೆದ ಹತ್ತು ವರ್ಷಗಳಿಂದ ನಿರಂತರ ಬೆಲೆ ಏರಿಕೆಯು ಭಾರತೀಯರ ಬದುಕನ್ನು ಬೇಯುವಂತೆ ಮಾಡಿದೆ. ಸಮಾಜವನ್ನು ಛಿದ್ರಗೊಳಿಸುವ, ಬಿರುಕು ಮೂಡಿಸುವ ಜನದ್ರೋಹಿ ವರ್ತನೆ ಬಿಟ್ಟರೆ ಬೇರೆ ಏನು ಮಾಡಿದ್ದೀರಿ ತೋರಿಸಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಭಾರತೀಯರು ಬ್ರಿಟೀಷರ ವಿರುದ್ಧ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾಗ ಸಂಘ ಪರಿವಾರದವರು ಏನು ಕಡೆದು ಕಟ್ಟೆ ಹಾಕ್ತಿದ್ರಿ? ಸ್ವಾತಂತ್ರ್ಯ ಹೋರಾಟಕ್ಕೆ ಏಕೆ ಬರಲಿಲ್ಲ ? ಏನ್ ಮಾಡ್ತಾ ಕೂತಿದ್ರಿ ಎಂದು ಪ್ರಶ್ನಿಸಿದರು.
ಭದ್ರತಾ ಲೋಪವಲ್ಲದೇ ಮತ್ತೇನು?
ಕಾಶ್ಮೀರದಲ್ಲಿ ಅಮಾಯಕ ಭಾರತೀಯರನ್ನು ರಾಜಾರೋಷವಾಗಿ ಹತ್ಯೆ ಮಾಡಿದರಲ್ಲ. ಇದು ಕೇಂದ್ರ ಸರ್ಕಾರದ ಭದ್ರತಾ ಲೋಪ ಅಲ್ಲದೇ ಮತ್ತೇನು, ಭಾರತೀಯರಿಗೆ ರಕ್ಷಣೆ ಕೊಡುವುದರಲ್ಲಿ ವಿಫಲವಾಗಿರುವ ನಿಮ್ಮನ್ನು ನಾವು ಪ್ರಶ್ನಿಸಬಾರದಾ, ಪ್ರಶ್ನಿಸಿದರೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸ್ತೀರಾ ಎಂದು ವಾಗ್ದಾಳಿ ನಡೆಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದು 52 ವರ್ಷಗಳ ಕಾಲ ಆರ್‌ಎಸ್‌ಎಸ್ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಲೇ ಇಲ್ಲ. ಇದು ನಿಮಗೆ ನಾಚಿಕೆ ಎನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.
ಎಲ್ಲದರ ಬೆಲೆ ಏರಿಕೆ ಮಾಡಿದ್ದೀರಿ
ಅಕ್ಕಿ, ಎಣ್ಣೆ, ಚಿನ್ನ, ಬೆಳ್ಳಿ, ಗೊಬ್ಬರ, ಕಾಳು, ಬೇಳೆ, ಡೀಸೆಲ್, ಪೆಟ್ರೋಲ್, ಸಿಲಿಂಡರ್ ಎಲ್ಲದರ ಬೆಲೆ ಏರಿಸಿದ್ದೀರಿ. ಯಾವುದನ್ನು ಬಿಟ್ಟಿದ್ದೀರಿ. ಕಚ್ಛಾ ತೈಲ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ನಿರಂತರವಾಗಿ ಏರಿಕೆ ಮಾಡುತ್ತಲೇ ಇರುವುದು ಭಾರತೀಯರಿಗೆ ಬಿಜೆಪಿ ಬಗೆಯುತ್ತಿರುವ ಮಹಾ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.