ಪ್ರಜ್ವಲ್ ಲೈಂಗಿಕ ಹಗರಣ | ಪ್ರಧಾನಿಗೆ ಮತ್ತೆ ಸಿಎಂ ಪತ್ರ: ಪಾಸ್‌ಪೋರ್ಟ್ ರದ್ದತಿಗೆ ಆಗ್ರಹ
ಭಾರೀ ಲೈಂಗಿಕ ಹಗರಣದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅನುಕೂಲವಾಗುವಂತೆ ಆತನ ರಾಜತಾಂತ್ರಿಕ ಪಾಸ್‌ಪೋರ್ಟನ್ನು ರದ್ದುಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಮೇ 1ರಂದು ಪ್ರಧಾನಿ ಮೋದಿಗೆ ಮೊದಲ ಪತ್ರ ಬರೆದಿದ್ದರು.
ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪೆನ್‌ಡ್ರೈವ್ ಲೈಂಗಿಕ ಹಗರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಮಾಡುವಂತೆ ಕೋರಿ ಪ್ರಧಾನಿ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮತ್ತೊಂದು ಪತ್ರ ಬರೆದಿದ್ದಾರೆ.
ಭಾರೀ ಲೈಂಗಿಕ ಹಗರಣದ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲು ಅನುಕೂಲವಾಗುವಂತೆ ಆತನ ರಾಜತಾಂತ್ರಿಕ ಪಾಸ್‌ಪೋರ್ಟನ್ನು ರದ್ದುಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಮೇ 1ರಂದು ಪ್ರಧಾನಿ ಮೋದಿಗೆ ಮೊದಲ ಪತ್ರ ಬರೆದಿದ್ದರು.
ಆದರೆ, ಪತ್ರ ಬರೆದು 20 ದಿನಗಳಾದರೂ ಪ್ರಧಾನಿ ಮೋದಿಯವರು, ಹೇಯ ಆರೋಪ ಹೊತ್ತಿರುವ ಹಾಸನದ ಸಂಸದ ಹಾಗೂ ಬಿಜೆಪಿ ಮಿತ್ರಪಕ್ಷ ಜೆಡಿಎಸ್ ಯುವ ಮುಖಂಡನ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮತ್ತೊಂದು ಪತ್ರ ಬರೆದು, ಪ್ರಕರಣದ ತನಿಖೆಗೆ ನೇಮಕವಾಗಿರುವ ಎಸ್ ಐಟಿಯ ಮುಂದೆ ಆರೋಪಿ ಹಾಜರಾಗಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆತನಿಗೆ ನೀಡಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ಕೂಡಲೇ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿ ಪ್ರಕರಣದ ವಿವರಗಳನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಪ್ರಕರಣದ ಗಂಭೀರತೆ ಮತ್ತು ಆರೋಪಿ ಸಂಸದನ ತುರ್ತು ವಿಚಾರಣೆಯ ಅನಿವಾರ್ಯತೆಯನ್ನು ಪರಿಗಣಿಸಿ ಪಾಸ್‌ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10(3) ರ ಅಡಿಯಲ್ಲಿ ಅಥವಾ ಸಂಬಂಧಪಟ್ಟ ಇತರೆ ಯಾವುದೇ ನಿಯಮದಡಿ ಪಾಸ್‌ಪೋರ್ಟ್ ರದ್ದು ಮಾಡಿ ಆರೋಪಿಯನ್ನು ಕೂಡಲೇ ದೇಶಕ್ಕೆ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಲೋಕಸಭಾ ಚುನಾವಣಾ ಕ್ಷೇತ್ರದ ಹುರಿಯಾಳಾಗಿದ್ದ ಪ್ರಜ್ವಲ್ ರೇವಣ್ಣ ವಿರುದ್ಧ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬ್ಲ್ಯಾಕ್‌ಮೇಲ್, ಜೀವ ಬೆದರಿಕೆ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು. ಆತ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾದ ವಿಡಿಯೋಗಳು ವೈರಲ್ ಆಗಿದ್ದವು. ಆ ಕುರಿತ ಮೊದಲ ದೂರು ದಾಖಲಾಗುವ ಕೆಲವೇ ಗಂಟೆಗಳ ಮುನ್ನ, ಏ.27ರ ಬೆಳಗಿನ ಜಾವ ಪ್ರಜ್ವಲ್ ದೇಶ ತೊರೆದು ಜರ್ಮನಿಗೆ ಪಲಾಯನ ಮಾಡಿದ್ದ.
ಆ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್‌ಗೆ ನೋಟಿಸ್ ಜಾರಿ ಮಾಡಿತ್ತು. ಬಳಿಕ, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿತ್ತು. ಆದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸುವಂತೆ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ಕೇಂದ್ರ ಸರ್ಕಾರ ಆ ಮನವಿಗೆ ಸ್ಪಂದಿಸಿಲ್ಲ ಎಂದು ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್ ಬುಧವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಇದೀಗ ಮುಖ್ಯಮಂತ್ರಿಗಳು ಮತ್ತೊಂದು ಪತ್ರ ಬರೆದು ಕೇಂದ್ರದ ಮೇಲೆ ಒತ್ತಡ ತಂತ್ರ ಪ್ರಯೋಗಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಇದೀಗ ಚೆಂಡು ಕೇಂದ್ರದ ಅಂಗಳಕ್ಕೆ ವರ್ಗಾವಣೆಯಾಗಿದ್ದು, ಪಾಸ್‌ಪೋರ್ಟ್ ರದ್ದು ಮಾಡುವ ವಿಷಯದಲ್ಲಿ ಕೂಡಲೇ ಕ್ರಮ ಕೈಗೊಳ್ಳದೇ ಹೋದಲ್ಲಿ ಕೇಂದ್ರ ಸರ್ಕಾರ ಹೇಯ ಅಪರಾಧಗಳ ಆರೋಪಿಯೊಬ್ಬನಿಗೆ ತಮ್ಮ ಮಿತ್ರ ಪಕ್ಷದ ಮುಖಂಡ ಎಂಬ ಕಾರಣಕ್ಕೆ ವಿಶೇಷ ರಿಯಾಯ್ತಿ ನೀಡಿದ ಗಂಭೀರ ಆರೋಪಕ್ಕೆ ಈಡಾಗಲಿದೆ.
ʼಈಗಾಗಲೇ ಆರೋಪಿ ಪರಾರಿಯಾಗಿ ಬಹುತೇಕ ತಿಂಗಳು ಕಳೆಯುತ್ತಾ ಬಂದಿದ್ದರೂ ಕೇಂದ್ರ ಸರ್ಕಾರ ಆತನ ಪಾಸ್‌ಪೋರ್ಟ್ ರದ್ದುಪಡಿಸಿ, ಆತನನ್ನು ಬಂಧಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಪ್ರಧಾನಿ ಮೋದಿಯವರ ಸರ್ಕಾರಕ್ಕೆ ನೂರಾರು ಸಂತ್ರಸ್ತೆಯರ ಜೀವ ಮತ್ತು ಘನತೆಗಿಂತ ತಮ್ಮ ರಾಜಕೀಯ ಮೈತ್ರಿಯೇ ಮುಖ್ಯವಾಯಿತೆ?ʼ ಎಂಬ ಪ್ರಶ್ನೆಗಳನ್ನು ಸಂತ್ರಸ್ತೆಯರ ಪರ ಹೋರಾಟಗಾರರು ಎತ್ತಿದ್ದಾರೆ.
ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದೀಗ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣದಲ್ಲಿ ಇಕ್ಕಟ್ಟಿಗೆ ಸಿಲುಕಿದ್ದು, ಕೂಡಲೇ ಪಾಸ್ ಪೋರ್ಟ್ ರದ್ದತಿ ಪ್ರಕ್ರಿಯೆಗಳನ್ನು ಆರಂಭಿಸುವ ಒತ್ತಡದ ಪರಿಸ್ಥಿತಿ ಉದ್ಭವಿಸಿದೆ. ಈಶಾನ್ಯ ರಾಜ್ಯಗಳು ಮತ್ತು ಪೂರ್ವ ಭಾರತದ ರಾಜ್ಯಗಳ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿರುವ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡನೇ ಪತ್ರದ ಬಗ್ಗೆ ಎಷ್ಟು ತುರ್ತಾಗಿ ಗಮನ ಹರಿಸಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.