Siddaramaiah–DK Shivakumar Rift Widens on Constitution Day as CM Post Battle Peaks
x

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ 

ಗದ್ದುಗೆ ಗುದ್ದಾಟ| ನಾನೊಂದು ತೀರ-ನೀನೊಂದು ತೀರ"; ಸಂವಿಧಾನ ದಿನದಂದೇ 'ಮುರಿದು ಬಿದ್ದ' ಸಿದ್ದು-ಡಿಕೆಶಿ ಒಗ್ಗಟ್ಟು

ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ 'ಜೋಡೆತ್ತುಗಳು' ಎಂದೇ ಬಿಂಬಿತವಾಗಿದ್ದ ಈ ಇಬ್ಬರು ನಾಯಕರು, ಸಂವಿಧಾನ ದಿನದಂದು ಪರಸ್ಪರ ಮುಖಾಮುಖಿಯಾಗುವುದನ್ನು ಪ್ರಜ್ಞಾಪೂರ್ವಕವಾಗಿಯೇ ತಪ್ಪಿಸಿಕೊಂಡಂತಿದೆ.


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿಯ ಕಾದಾಟ ತಾರಕಕ್ಕೇರಿರುವ ಹೊತ್ತಿನಲ್ಲೇ, ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಮುನಿಸು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಮಂಗಳವಾರ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿಯಾಗಿದ್ದು, ಒಂದೇ ನಗರದಲ್ಲಿದ್ದರೂ "ನಾನೊಂದು ತೀರ, ನೀನೊಂದು ತೀರ" ಎಂಬಂತೆ ವರ್ತಿಸಿದ ಉಭಯ ನಾಯಕರ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಅಥವಾ ಪಕ್ಷದ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದ 'ಜೋಡೆತ್ತುಗಳು' ಎಂದೇ ಬಿಂಬಿತವಾಗಿದ್ದ ಈ ಇಬ್ಬರು ನಾಯಕರು, ಸಂವಿಧಾನ ದಿನದಂದು ಪರಸ್ಪರ ಮುಖಾಮುಖಿಯಾಗುವುದನ್ನು ಪ್ರಜ್ಞಾಪೂರ್ವಕವಾಗಿಯೇ ತಪ್ಪಿಸಿಕೊಂಡಂತಿದೆ.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದರು. ಆದರೆ, ಕೂದಲೆಳೆ ಅಂತರದಲ್ಲಿಯೇ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಅಚ್ಚರಿ ಮೂಡಿಸಿದರು.

ಮತ್ತೊಂದೆಡೆ, ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರದ ಅಧಿಕೃತ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಶಿಷ್ಟಾಚಾರದ ಪ್ರಕಾರ ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರಬೇಕಿತ್ತು. ಅವರು ಬೆಂಗಳೂರಿನಲ್ಲೇ ಇದ್ದರೂ ಈ ಕಾರ್ಯಕ್ರಮಕ್ಕೆ ಗೈರಾಗುವ ಮೂಲಕ ಸಿಎಂ ಮೇಲಿನ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ದೆಹಲಿ ಮಟ್ಟದ ಗುದ್ದಾಟದ ಎಫೆಕ್ಟ್?

ಕಳೆದ ಕೆಲ ದಿನಗಳಿಂದ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ನಡುವೆ ಅಧಿಕಾರ ಹಂಚಿಕೆಯ ಸಮರ ಜೋರಾಗಿದೆ. "ನಾನೇ ಐದು ವರ್ಷ ಸಿಎಂ" ಎಂಬ ಸಿದ್ದರಾಮಯ್ಯನವರ ಹೇಳಿಕೆ ಮತ್ತು ಅದಕ್ಕೆ ಪ್ರತ್ಯುತ್ತರವಾಗಿ ಡಿಕೆಶಿ ಬಣದ ಪಟ್ಟುಗಳು ಹೈಕಮಾಂಡ್ ಅಂಗಳ ತಲುಪಿದೆ. ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಮತ್ತು ಜಂಟಿ ಸಭೆಗಳು ನಡೆಯಲಿವೆ ಎಂಬ ವರದಿಗಳ ಬೆನ್ನಲ್ಲೇ, ಈ "ವೇದಿಕೆ ಬಹಿಷ್ಕಾರ" ತಂತ್ರಗಾರಿಕೆ ನಡೆದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಬ್ಬರು ಸರ್ಕಾರದ ಕಾರ್ಯಕ್ರಮದಿಂದ ದೂರ ಉಳಿದರೆ, ಮತ್ತೊಬ್ಬರು ಪಕ್ಷದ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಕೇವಲ ಕಾಕತಾಳೀಯವಾಗಿರದೆ, ಹೈಕಮಾಂಡ್ ನಾಯಕರಿಗೆ ಮತ್ತು ರಾಜ್ಯದ ಜನತೆಗೆ ತಮ್ಮ ತಮ್ಮ 'ಶಕ್ತಿ ಪ್ರದರ್ಶನ' ಅಥವಾ 'ಮುನಿಸಿನ ಸಂದೇಶ' ರವಾನಿಸುವ ತಂತ್ರಗಾರಿಕೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಸಂವಿಧಾನವನ್ನು ಎತ್ತಿಹಿಡಿಯುವ ದಿನದಂದೇ ಕಾಂಗ್ರೆಸ್ ನಾಯಕರ ನಡುವಿನ ಈ ಶೀತಲ ಸಮರ ಸಂವಿಧಾನದ ಆಶಯಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಮೇಲುಗೈ ಸಾಧಿಸಿದಂತಿದೆ.

Read More
Next Story