ಇನ್ನೂ ಮೂರುವರೆ ವರ್ಷ ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ: ಬಸವರಾಜ ರಾಯರೆಡ್ಡಿ
x

ಇನ್ನೂ ಮೂರುವರೆ ವರ್ಷ ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ: ಬಸವರಾಜ ರಾಯರೆಡ್ಡಿ


ʻʻಇನ್ನೂ ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲʼʼ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ʻʻಯಾರೂ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಆಗಲ್ಲ. ಹೈಕಮಾಂಡ್ ಕೂಡ ಅಂತಹ ಮನಸ್ಸನ್ನು ಮಾಡುವುದಿಲ್ಲʼʼ ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ʻʻರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಬಾಂಡ್ ಪೇಪರ್‌ನಲ್ಲಿ ಬರೆದುಕೊಟ್ಟಿದ್ದಾರಾ? ಅವರೇ ಇನ್ನೂ ಮೂರುವರೇ ವರ್ಷ ಸಿಎಂ ಆಗಿರಬೇಕು. ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಈ ಬಗ್ಗೆ ನನಗೂ ಮಾಹಿತಿ ಬಂದಿದೆ. ಸಿಎಂ ಸ್ಥಾನಕ್ಕಾಗಿ ಯಾರು ಸಹ ನಮ್ಮಲ್ಲಿ ಪ್ರಯತ್ನ ಮಾಡುತ್ತಿಲ್ಲʼʼ ಎಂದು ಅವರು ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಇನ್ನೂ 3 ವರ್ಷ 10 ತಿಂಗಳು ಜನಪರ ಆಡಳಿತ ನೀಡಲಿ ಎಂಬುದು ನಮ್ಮ ಆಶಯ ಎಂದು ವಾರದ ಹಿಂದಷ್ಟೇ ಕೊಪ್ಪಳದಲ್ಲಿ ರಾಯರೆಡ್ಡಿ ಹೇಳಿದ್ದರು. ಇದೀಗ ಜನಾಂದೋಲನ ಸಮಾವೇಶದಲ್ಲೇ ಆ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.

ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದ ರಾಯರೆಡ್ಡಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆರಂಭದ ದಿನಗಳಲ್ಲಿ ಸಚಿವರ ಕಾರ್ಯವೈಖರಿಗೆ ಬೇಸತ್ತು ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ಬಹಳಷ್ಟು ಚರ್ಚೆಗೂ ಗ್ರಾಸವಾಗಿತ್ತು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿರುವುದು ನಿಜ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದು, ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರು. ಇದೀಗ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

Read More
Next Story