ಧರ್ಮಸ್ಥಳಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಭೇಟಿ ನೀಡಿದ ಸಿದ್ದರಾಮಯ್ಯ
x

ಧರ್ಮಸ್ಥಳಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಭೇಟಿ ನೀಡಿದ ಸಿದ್ದರಾಮಯ್ಯ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ ಎಂದರೆಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ


ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿ ದೇಗುಲದ ಸಂಪ್ರದಾಯವನ್ನು ಪಾಲಿಸಿ ಮಂಜುನಾಥೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ಬೈರತಿ ಸುರೇಶ್ ಮತ್ತಿತರರ ಜತೆ ದೇಗುಲಕ್ಕೆ ಭೇಟಿ ನೀಡಿದ್ದರು. ಧರ್ಮಸ್ಥಳ ದೇಗುಲದ ಸಂಪ್ರದಾಯದಂತೆ ಬಿಳಿ ಪಂಚೆ ಧಾರಿಯಾಗಿದ್ದ ಸಿಎಂ ತಮ್ಮ ಅಂಗಿ ಕಳಚಿ ಮೈಗೆ ಶಾಲು ಸುತ್ತಿಕೊಂಡು ದೇಗುಲದ ಗರ್ಭಗುಡಿ ಹತ್ತಿರಕ್ಕೆ ತೆರಳಿ ದೇವರ ದರ್ಶನ ಪಡೆದರು.

ಆದರೆ ಈ ಬಾರಿ ಧರ್ಮಸ್ಥಳ ದೇಗುಲದ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಅಂಗಿ ಕಳಚಿ ತಮ್ಮ ಮೈಗೆ ಬಿಳಿ ಶಾಲು ಸುತ್ತಿಕೊಂಡು ಹೋಗಿರುವ ಅವರ ನಡೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಯಾಕೆಂದರೆ ಈ ಹಿಂದೆ ದೇಗುಲಗಳಲ್ಲಿ ಭಕ್ತರು ಅಂಗಿ ಕಳಚಿ ಪ್ರವೇಶಿಸಬೇಕೆಂಬ ನಿಯಮದ ವಿರುದ್ಧ ಅವರು ಟೀಕಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಧರ್ಮಸ್ಥಳ ದೇಗುಲಕ್ಕೆ ಒಂದು ಬಾರಿ ಮೀನಿನ ಊಟ ಮಾಡಿದ ಬಳಿಕ ಭೇಟಿ ನೀಡಿದ್ದರೆಂಬ ಬಗ್ಗೆಯೂ ವಿವಾದ ಎದ್ದಿತ್ತು.

ಧರ್ಮಸ್ಥಳ ಮತ್ತು ಸಿದ್ದರಾಮಯ್ಯ

ಕಳೆದ ವರ್ಷ(2023) ಸಾಮಾಜಿಕ ಸುಧಾರಕ ನಾರಾಯಣ ಗುರುಗಳ 169ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ದೇಗುಲಕ್ಕೆ ಅಂಗಿ ಕಳಚಿ ಪ್ರವೇಶಿಸಿ ದೇವರ ದರ್ಶನ ಪಡೆಯುವುದನ್ನು ಅವರು ಟೀಕಿಸಿದ್ದರು. "ನಾನು ಒಮ್ಮೆ ಕೇರಳದ ದೇವಸ್ಥಾನಕ್ಕೆ ಹೋಗಿದ್ದೆ, ಅಲ್ಲಿ ನನ್ನ ಅಂಗಿ ಕಳಚಿ ಒಳಗೆ ಪ್ರವೇಶಿಸಲು ಹೇಳಿದರು. ಆದರೆ ನಾನು ಆ ರೀತಿ ದೇವಸ್ಥಾನ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದೆ. ಅಲ್ಲಿ ಎಲ್ಲರಿಗೂ ತಮ್ಮ ಅಂಗಿಗಳನ್ನು ತೆಗೆಯಲು ಕೇಳುತ್ತಿರಲಿಲ್ಲ, ಆದರೆ ಕೆಲವರಿಗೆ ಮಾತ್ರ. ಈ ಪದ್ಧತಿ ಅಮಾನವೀಯವಾಗಿದೆ. ಎಲ್ಲರೂ ದೇವರಿಗೆ ಸಮಾನರು," ಎಂದುಸಿದ್ದರಾಮಯ್ಯ ಹೇಳಿದ್ದರು. ಅದು ದೇಗುಲಗಳ ಸಂಪ್ರದಾಯವನ್ನು ವಿರೋಧಿಸುವ ಅವರ ನಡೆ ಎಂದು ಬಿಜೆಪಿ ಟೀಕಿಸಿತ್ತು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ( 2017), ಮೀನಿನ ಖಾದ್ಯ ತಿಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಅವರ ನಡೆ ಬಿಜೆಪಿ ಮತ್ತು ಸಂಘ ಪರಿವಾರದವರ ಟೀಕೆಗೆ ಒಳಗಾಗಿತ್ತು. ಕರಾವಳಿ ಖಾದ್ಯ ಮೀನನ್ನು ಸೇವಿಸಿ ಬಳಿಕ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಅವರ ನಡೆ ಬಗ್ಗೆ ವಿವಾದ ಎದ್ದಾಗ, ಸಿದ್ದರಾಮಯ್ಯ ಅವರು ತಾನು ಮೀನು, ಕೋಳಿಯ ಊಟ ಮಾಡಿದ್ದನ್ನು ಒಪ್ಪಿಕೊಂಡಿದ್ದರೂ, ದೇಗುಲದ ಗರ್ಭಗುಡಿಯ ಬಳಿ ತೆರಳಿರಲಿಲ್ಲ ಎಂದು ಸಮಜಾಯಿಷಿ ನೀಡಿದ್ದರು.

ಸನ್ಮಾನ ಸ್ವೀಕರಿಸದ ಸಿದ್ದರಾಮಯ್ಯ

ಕಳೆದ ವರ್ಷ (2023) ಸಿದ್ದರಾಮಯ್ಯ ಅವರು ಧರ್ಮಸ್ಥಳ ಶಿಕ್ಷಣ ಸಂಸ್ಥೆ ನೀಡಿದ್ದ ಸನ್ಮಾನ ಸ್ವೀಕರಿಸದೇ ಅಪಮಾನ ಮಾಡಿದ್ದಾರೆ ಎಂಬ ವಿವಾದಕ್ಕೆ ಸೃಷ್ಟಿಯಾಗಿತ್ತು. ರಾಜ್ಯ ಸರಕಾರದ ವತಿಯಿಂದ ನೂತನ ಶಾಸಕರಿಗೆ ವಿಶೇಷ ಶಿಬಿರವನ್ನು ಬೆಂಗಳೂರಿನ ಮಹದೇವಪುರದಲ್ಲಿರುವ ಎಸ್​ಡಿಎಂ ಇನ್​ಸ್ಟಿಟ್ಯೂಟ್​ ಆಫ್​ ನ್ಯಾಚುರೋಪತಿ ಹಾಗೂ ಯೋಗ ಸೈನ್ಸಸ್​ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಕಾರ್ಯಕ್ರಮದಲ್ಲಿ ಎಸ್​ಡಿಎಂ ಸಂಸ್ಥೆಯ ಪರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ನಿಗದಿಯಾಗಿತ್ತು. ನಿರೂಪಕಿ ಸನ್ಮಾನದ ವಿವರ ಓದಿದಾಗ, ಸಿದ್ದರಾಮಯ್ಯ ತಾವು ಸನ್ಮಾನ ಸ್ವೀಕರಿಸುವುದಿಲ್ಲ ಎಂದು ಸೂಚಿಸಿ ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹಗ್ಗಡೆ ಅವರ ಸೋದರ ಸುರೇಂದ್ರ ಕುಮಾರ್​ ಫಲ, ಪುಷ್ಪಗಳನ್ನು ತಂದುಕೊಟ್ಟಾಗ ಸ್ವೀಕರಿಸದೇ ವಾಪಸ್​ ಕಳುಹಿಸಿದ್ದರು. ಇದೂ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಧರ್ಮಸ್ಥಳದ ಶ್ಲಾಘನೆ

ಎರಡನೇ ಬಾರಿ ಮುಖ್ಯಮಂತ್ರಿ ಆದ ಬಳಿಕ ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಸಂಚರಿಸುವ ಶಕ್ತಿ ಯೋಜನೆ ಜಾರಿಯಾಗಿತ್ತು. ಆ ಬಳಿಕ 14 ನೇ ರಾಜ್ಯ ಬಜೆಟ್ ಮಂಡಿಸಿದ ಸಂದರ್ಭದಲ್ಲಿ (2023) ಸಿದ್ದರಾಮಯ್ಯ ಅವರು ತಮಗೆ ಬಿಜೆಪಿಯಿಂದ ರಾಜ್ಯಸಭೆಗೆ ನಾಮಕರಣಗೊಂಡಿದ್ದ ರಾಜ್ಯಸಭಾ ಸದಸ್ಯ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಭಿನಂದನೆ ಸಲ್ಲಿಸಿ ಪತ್ರ ಬರೆದಿದ್ದಾರೆ ಎಂದು ಘೋಷಿಸಿದ್ದರು.

"ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಮೊದಲ ಗ್ಯಾರಂಟಿಯಾಗಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ 'ಶಕ್ತಿ ಯೋಜನೆ' ಯಿಂದ ಧರ್ಮಸ್ಥಳಕ್ಕೆ ಬರುವ ಮಹಿಳೆಯ ಪ್ರಮಾಣ ಹೆಚ್ಚಾಗಿದೆ. ಮಂಜುನಾಥ ಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿನಲ್ಲಿ ಕಾಣಿಕೆ ಹಾಕುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅವಕಾಶ ಇದ್ದಾಗ ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದುಕೊಂಡು ಹೋಗಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಆಹ್ವಾನ ನೀಡಿದ್ದಾರೆ," ಎಂದು ಸಿದ್ದರಾಮಯ್ಯ ಹೇಳಿದ್ದರು.

ಈ ಎಲ್ಲ ಬೆಳವಣಿಗೆಗಳ ನಂತರ ಸಿದ್ದರಾಮಯ್ಯ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇಗುಲದ ಸಂಪ್ರದಾಯದಂತೆ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದ್ದಾರೆ.

ಶಕ್ತಿ ಯೋಜನೆಯಿಂದ ಧರ್ಮಸ್ಥಳಕ್ಕೆ ಹೆಚ್ಚಿದ ಭಕ್ತರು: ಸಿಎಂ, ಡಿಸಿಎಂ ಸಂತಸ

ಸಿದ್ದರಾಮಯ್ಯ ಅವರು ಬಳಿಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, "ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ತೆರಳುವ ಸಂದರ್ಭದಲ್ಲಿ ಕೆಲವು ಮಹಿಳೆಯರು ನಗುಮೊಗದಲ್ಲಿ ನನ್ನ ಬಳಿ ಬಂದು ಗೃಹಲಕ್ಷ್ಮಿ ಯೋಜನೆಯ 2,000 ರೂಪಾಯಿಯಿಂದ ನಾವು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದೇವೆ, ನೀವು ಶಕ್ತಿ ಯೋಜನೆ ಜಾರಿ ಮಾಡಿದ್ದರಿಂದ ಇಂದು ನಾವು ದೂರದ ಊರಿನಿಂದ ದೇವರ ದರ್ಶನಕ್ಕೆ ಬರಲು ಅನುಕೂಲ ಆಗಿದೆ, ನಿಮಗೆ ಮಂಜುನಾಥ ಸ್ವಾಮಿ ದೀರ್ಘ ಆಯಸ್ಸು, ಆರೋಗ್ಯ ನೀಡಲಿ, ಬಡವರಿಗೆ ಇನ್ನಷ್ಟು ಅನುಕೂಲ ಆಗುವಂತಹ ಕಾರ್ಯಕ್ರಮಗಳು ನಿಮ್ಮಿಂದ ಜಾರಿಯಾಗಲಿ ಎಂದು ಆಶೀರ್ವದಿಸಿದರು," ಎಂದು ಹೇಳಿದ್ದಾರೆ. "ಈ ದಿನ ದೇವರ ದರ್ಶನ ಭಾಗ್ಯದ ಜೊತೆಗೆ ಹತ್ತಾರು ತಾಯಂದಿರ ಆಶೀರ್ವಾದ ಪಡೆದ ಧನ್ಯತಾಭಾವ ನನ್ನದು," ಎಂದು ಹೇಳಿಕೊಂಡಿದ್ದಾರೆ.

ಡಿಕೆಶಿ ಹೇಳಿಕೆ

“ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ ಧರ್ಮಸ್ಥಳಕ್ಕೆ ಶನಿವಾರ ಭೇಟಿ ನೀಡಿದ ಬಳಿಕ ಮಾತನಾಡಿ “ನಾನು ಹಾಗೂ ಮುಖ್ಯಮಂತ್ರಿಗಳು ಮಂಜುನಾಥನ, ಅಣ್ಣಪ್ಪ ಸ್ವಾಮಿ ಹಾಗೂ ಅಮ್ಮನವರ ದರ್ಶನ ಮಾಡಿದ್ದೇವೆ. ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದ್ದು, ಉತ್ತಮ ಮಳೆ, ಬೆಳೆಯಾಗಿ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲಿ ಎಂದು ಪ್ರಾರ್ಥಿಸಿದ್ದೇವೆ.

ದೇವರ ದರ್ಶನದ ವೇಳೆ ಅನೇಕ ಮಹಿಳಾ ಭಕ್ತಾಧಿಗಳು ತಮಗೆ ಪ್ರತಿ ತಿಂಗಳು 2 ಸಾವಿರ ಹಣ ಬರುತ್ತಿದೆ ಎಂದು ಸಂತೋಷ ಹಂಚಿಕೊಂಡರು. ಅವರ ಪ್ರಾರ್ಥನೆ ಹಾಗೂ ಆಶೀರ್ವಾದ ನಮಗೆ ಹೆಚ್ಚಿನ ಶಕ್ತಿ ನೀಡುತ್ತದೆ. ಅವರ ಮನೆಯಲ್ಲಿ ಗೃಹಜ್ಯೋತಿ ಬೆಳಗುತ್ತಿದೆ. ಅನ್ನಭಾಗ್ಯ ಸಿಗುತ್ತಿದೆ. ಈ ಯೋಜನೆಗಳನ್ನು ಜಾರಿ ಮಾಡಿರುವುದಕ್ಕೆ ಮಂಜುನಾಥ ನಮಗೆ ಆಶೀರ್ವಾದ ಮಾಡಲಿದ್ದಾನೆ” ಎಂದು ನಂಬಿದ್ದೇನೆ ಎಂದರು.

Read More
Next Story