
ಸಿದ್ದರಾಮಯ್ಯಗೆ 77ನೇ ಜನ್ಮದಿನ: 'ನಮ್ಮ ಕೈ ಹೀಗೆ ಜೊತೆಯಾಗಿರಲಿದೆ' ಎಂದು ಹಾರೈಸಿದ ಡಿಕೆಶಿ
ಇದು ಕೇವಲ ಜನ್ಮದಿನದ ಹಾರೈಕೆಯಾಗಿರದೆ, ತೆರೆಮರೆಯಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಚರ್ಚೆಗಳ ನಡುವೆ ನೀಡಿದ ಮಹತ್ವದ ರಾಜಕೀಯ ಸಂದೇಶ ಏನೆಂಬುದರ ಚರ್ಚೆ ನಡೆಯುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಆಗಸ್ಟ್ 3) ತಮ್ಮ 77ನೇ ವಸಂತಕ್ಕೆ ಕಾಲಿರಿಸಿದ್ದು, ಈ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಡಿ.ಕೆ. ಶಿವಕುಮಾರ್, "ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ಮೂಲಕ ಉತ್ತಮ ಆಡಳಿತಕ್ಕೆ ತಾವು ಹೆಸರುವಾಸಿಯಾಗಿದ್ದೀರಿ," ಎಂದು ಶ್ಲಾಘಿಸಿದ್ದಾರೆ.
"ಕನ್ನಡಿಗರ ಹಿತವನ್ನು ಕಾಪಾಡಲು ಮತ್ತು ಕರ್ನಾಟಕದ ಕಲ್ಯಾಣಕ್ಕಾಗಿ ನಮ್ಮ 'ಕೈ' ಹೀಗೆ ಜೊತೆಯಾಗಿರಲಿದೆ. ದೇವರು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ," ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳ ಜನ್ಮದಿನಕ್ಕೆ ನಾಡಿನಾದ್ಯಂತ ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಕೌತುಕ ಹೆಚ್ಚಳ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಶುಭಾಶಯವು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದು ಕೇವಲ ಜನ್ಮದಿನದ ಹಾರೈಕೆಯಾಗಿರದೆ, ತೆರೆಮರೆಯಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆಯ ಚರ್ಚೆಗಳ ನಡುವೆ ನೀಡಿದ ಮಹತ್ವದ ರಾಜಕೀಯ ಸಂದೇಶವೆಂದೇ ವಿಶ್ಲೇಷಿಸಲಾಗುತ್ತಿದೆ.
ರಾಜ್ಯ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಇಬ್ಬರು ನಾಯಕರ ನಡುವೆ ತೆರೆಮರೆಯ ಗುದ್ದಾಟ ನಡೆಯುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿರುವಾಗಲೇ, ಡಿ.ಕೆ. ಶಿವಕುಮಾರ್ ಅವರ ಈ 'ಒಗ್ಗಟ್ಟಿನ' ಸಂದೇಶ ಎಲ್ಲಿಯ ತನಕ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿವೆ.