‘ಆಶಾಕಿರಣ’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ  ಫೆ.18ರಂದು
x

‘ಆಶಾಕಿರಣ’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ಫೆ.18ರಂದು


ಬೆಂಗಳೂರು, ಫೆ. 17 - ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ ರಾಷ್ಟ್ರೀಯ ಕಾರ್ಯಕ್ರಮದಡಿ ಹಾವೇರಿಯಲ್ಲಿ 'ಆಶಾಕಿರಣ - ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ' ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.18 ರಂದು ಹಾವೇರಿಯಲ್ಲಿ ಚಾಲನೆ ನೀಡಲಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪಕ್ರಮವಾದ 'ಆಶಾಕಿರಣ' ಯೋಜನೆಯಡಿ ಎಲ್ಲಾ ವಯೋಮಾನದವರಿಗೆ ಸಮಗ್ರ ಕಣ್ಣಿನ ತಪಾಸಣೆ ಮಾಡಲಾಗುವುದು. ಉಚಿತ ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಪ್ಪಿಸಬಹುದಾದ ಅಂಧತ್ವ ಕಡಿಮೆ ಮಾಡುವ ಉದ್ದೇಶದಿಂದ 'ಆಶಾಕಿರಣ'ವನ್ನು ಈಗಾಗಲೇ ಎಂಟು ಜಿಲ್ಲೆಗಳಲ್ಲಿ ಎರಡು ಹಂತಗಳಲ್ಲಿ ಜಾರಿಗೊಳಿಸಲಾಗಿದೆ. ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ ಮತ್ತು ಚಾಮರಾಜನಗರ, ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ. ʻಈ ಉಪಕ್ರಮಗಳು ಉತ್ತಮ ಫಲಿತಾಂಶ ನೀಡಿವೆ. ಲಕ್ಷಾಂತರ ಮಂದಿ ಪ್ರಯೋಜನ ಪಡೆದಿದ್ದಾರೆ. ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಎಲ್ಲಾ ವಯೋಮಾನದವರಿಗೆ ಪ್ರಾಥಮಿಕ ಕಣ್ಣಿನ ತಪಾಸಣೆಯನ್ನು ಅವರ ಮನೆಗಳಲ್ಲಿ ನಡೆಸುತ್ತಾರೆʼ ಎಂದು ಪ್ರಕಟಣೆ ತಿಳಿಸಿದೆ.

ʻತಪಾಸಣೆ ವೇಳೆ ಕಣ್ಣಿನ ತೊಂದರೆ ಇರುವವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದ್ವಿತೀಯ ತಪಾಸಣೆಗಾಗಿ ಕಳಿಸಲಾಗುತ್ತದೆ. ಪಿಎಚ್ಸಿಯಲ್ಲಿ ನೇತ್ರತಜ್ಞರು ಪರೀಕ್ಷೆ ನಡೆಸಿ, ಕನ್ನಡಕ ನೀಡುತ್ತಾರೆ. ಸರ್ಕಾರಿ ಆಸ್ಪತ್ರೆಗಳು ಮತ್ತು ನೋಂದಾಯಿತ ಸ್ವಯಂಸೇವಾ ಸಂಸ್ಥೆಗಳ ಆಸ್ಪತ್ರೆಗಳಲ್ಲಿ ಕಣ್ಣಿನ ಪೊರೆ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆʼ ಎಂದು ತಿಳಿಸಿದೆ.

ʻಮೊದಲ ಹಂತದಲ್ಲಿ 5,659,036 ಜನರು ಪ್ರಾಥಮಿಕ ತಪಾಸಣೆಗೆ ಒಳಗಾಗಿದ್ದಾರೆ. 245,587 ಮಂದಿಗೆ ಕನ್ನಡಕ ವಿತರಣೆ ಮತ್ತು 39,336 ಜನರು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎರಡನೇ ಹಂತದಲ್ಲಿ 5,277,235 ಮಂದಿ ಪ್ರಾಥಮಿಕ ತಪಾಸಣೆಗೆ ಒಳಗಾಗಿದ್ದಾರೆ. ಇವರ ಪೈಕಿ 943,398 ಜನರಿಗೆ ನೇತ್ರ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಆಶಾ ಕಿರಣ ಕಾರ್ಯಕ್ರಮವನ್ನು ಹೆಚ್ಚುವರಿ ಜಿಲ್ಲೆಗಳಿಗೆ ವಿಸ್ತರಿಸಲಾಗುತ್ತದೆ,ʼ ಎಂದು ತಿಳಿಸಿದೆ.

2024-25ರಲ್ಲಿ ರಾಮನಗರ, ಯಾದಗಿರಿ, ಕೊಡಗು ಮತ್ತು ಗದಗ ಹಾಗೂ 2025-26 ರಲ್ಲಿ ಚಿಕ್ಕಮಗಳೂರು, ಬೀದರ್, ಕೋಲಾರ ಮತ್ತು ಬಾಗಲಕೋಟೆಗೆ ವಿಸ್ತರಿಸಲಾಗುತ್ತದೆ. ರಾಜ್ಯ 6.5 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿದ್ದು,ಉತ್ತಮ ಕಣ್ಣಿನ ಆರೈಕೆ ನೀಡುತ್ತಿರುವ ರಾಜ್ಯಗಳಲ್ಲಿ ಒಂದು.

Read More
Next Story