
Delimitation Row | ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡು ಹೋರಾಟ: ಬೆಂಬಲಿಸಿದ್ದ ಸಿದ್ದರಾಮಯ್ಯ ಯು-ಟರ್ನ್
ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿರುವ ತನ್ನ ಮಿತ್ರ ಪಕ್ಷ ಡಿಎಂಕೆ ನಿಲುವಿಗೆ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಲು ಆಗದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವಿಗೆ ಕಾರಣ ಎನ್ನಲಾಗಿದೆ.
ಕೇಂದ್ರ ಸರ್ಕಾರದ ಉದ್ದೇಶಿತ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಅದರಿಂದ ದಕ್ಷಿಣ ರಾಜ್ಯಗಳಿಗೆ ಆಗುವ ಅಪಾಯದ ಕುರಿತು ಮಾ. 22 ರಂದು ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆದಿರುವ ಸಮಾವೇಶಕ್ಕೆ ಬೆಂಬಲ ಸೂಚಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಯು-ಟರ್ನ್ ಹೊಡೆದಿದ್ದಾರೆ.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ತಮಿಳುನಾಡಿನಲ್ಲಿರುವ ತನ್ನ ಮಿತ್ರ ಪಕ್ಷ ಡಿಎಂಕೆ ನಿಲುವಿಗೆ ಪೂರ್ಣ ಪ್ರಮಾಣದ ಬೆಂಬಲ ಸೂಚಿಸಲು ಆಗದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವಿಗೆ ಕಾರಣ ಎನ್ನಲಾಗಿದೆ. ಕ್ಷೇತ್ರ ಪುನರ್ವಿಂಗಡೆಯಾದರೆ ಉತ್ತರ ಭಾರತದ ಹಿಂದಿ ರಾಜ್ಯಗಳಲ್ಲೇ ಸಂಸತ್ ಕ್ಷೇತ್ರಗಳ ಹೆಚ್ಚಳವಾಗುವುದರಿಂದ ಸ್ಟಾಲಿನ್ ಅವರನ್ನು ಬೆಂಬಲಿಸುವುದು ಕಾಂಗ್ರೆಸ್‌ಗೆ ತ್ರಾಸದಾಯಕವಾಗಿದೆ. ಜತೆಗೆ, ತಮಿಳನಾಡಿನ ಹಿಂದಿ ವಿರೋಧಿ ನಿಲುವು ಕೂಡಾ ಉತ್ತರ ಭಾರದ ಕಾಂಗ್ರೆಸ್ ಅಸ್ತಿಸ್ತ್ವಕ್ಕೆ ಏಟು ಕೊಡಬಹುದು ಹಾಗೂ ಕೇಂದ್ರದ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಇನ್ನೊಂದು ಪ್ರಬಲ ಅಸ್ತ್ರ ನೀಡಿದಂತಾಗುವುದು ಎಂಬುದು ಕಾಂಗ್ರೆಸ್ ಚಿಂತೆ ಎನ್ನಲಾಗಿದೆ.
ಆ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹೋಗುವುದನ್ನು ತಪ್ಪಿಸಲು ಕಾಂಗ್ರೆಸ್ ಈ ತಂತ್ರ ಹೂಡಿದೆ. ಬುಧವಾರ ತಮ್ಮನ್ನು ಆಹ್ವಾನಿಸಲು ಬಂದಿದ್ದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಳುಹಿಸಿದ್ದ ನಿಯೋಗಕ್ಕೆ ತನ್ನ ಪೂರ್ಣ ಬೆಂಬಲ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಗುರುವಾರ ಒಮ್ಮೆಲೆ ತನ್ನ ಅಭಿಪ್ರಾಯವನ್ನು ಬದಲಿಸಿದ್ದಾರೆ.
"ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕ್ಷೇತ್ರ ಮರುವಿಂಗಡನೆ ವಿರುದ್ಧ ದಕ್ಷಿಣದ ರಾಜ್ಯಗಳು ಒಗ್ಗೂಡುತ್ತಿವೆ. ಈ ಹಿನ್ನಲೆಯಲ್ಲಿ 07.03.2025 ರಂದು ನೀವು ಬರೆದ ಪತ್ರ ನನಗೆ ತಲುಪಿದೆ. ಇದು ನಮ್ಮ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವ ತತ್ವಗಳ ಮೇಲೆ ಗಂಭೀರ ಪರಿಣಾಮ ಬೀರುವ ರಾಜ್ಯಗಳ ಸ್ವಾಯತ್ತತೆಯ ಪ್ರಮುಖ ಸಮಸ್ಯೆಗಳನ್ನು ಎತ್ತುತ್ತದೆ. ವಿಶೇಷವಾಗಿ ಹೊಸ ಜನಸಂಖ್ಯಾ ಮಾನದಂಡಗಳ ಆಧಾರದ ಮೇಲೆ ಸಂಸದೀಯ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆಯ ಸಮಸ್ಯೆಗಳು. ಈ ವಿಷಯಗಳನ್ನು ಸಮಾನ ಮನಸ್ಕ ರಾಜ್ಯಗಳು ದೀರ್ಘವಾಗಿ ಚರ್ಚಿಸಬೇಕಾಗಿದೆ. ನನ್ನ ಹಿಂದಿನ ಬದ್ಧತೆಗಳಿಂದಾಗಿ, ನಾನು ಸಭೆಯಲ್ಲಿ ಭಾಗವಹಿಸಲು ಬಯಸಿದ್ದರೂ, ನನಗೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ," ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಆದಾಗ್ಯೂ, 22.03.2025 ರಂದು ನಡೆಯಲಿರುವ ಈ ಸಭೆಯ ಮಹತ್ವವನ್ನು ಪರಿಗಣಿಸಿ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಚರ್ಚೆಗಳಲ್ಲಿ ಭಾಗವಹಿಸಲು ನಾನು ವಿನಂತಿಸಿದ್ದೇನೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಏನು ಹೇಳಿದ್ದರು?
ಪ್ರಮುಖವಾಗಿ ಒಂದು ಕಾಲದಲ್ಲಿ ಪ್ರಾದೇಶಿಕ ಪಕ್ಷದ ನಾಯಕರಾಗಿದ್ದ, ಈಗ ಕಾಂಗ್ರೆಸ್‌ನಲ್ಲಿದ್ದರೂ ಕರ್ನಾಟಕದ ಪರ ಆಗಾಗ ದನಿ ಎತ್ತುತ್ತಿರುವ ಸಿದ್ದರಾಮಯ್ಯ ಅವರು ತಮಿಳುನಾಡು ಸರ್ಕಾರದ ನಿಯೋಗ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಚರ್ಚಿಸುವ ವೇಳೆ ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ಬೆಂಬಲ ಸೂಚಿಸಿದರು. ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಕೇಂದ್ರ ಸರ್ಕಾರದ ಎಲ್ಲಾ ನಡೆಗಳನ್ನೂ ತಾವು ಮುಲಾಜಿಲ್ಲದೆ ಖಂಡಿಸುತ್ತೇವೆ. ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲ ನೀಡುತ್ತೇವೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು.
ಡಿ.ಕೆ. ಶಿವಕುಮಾರ್ ನಿಲುವೇನು?
ಬುಧವಾರ, ತಮಿಳುನಾಡಿನ ನಿಯೋಗದ ಭೇಟಿಯ ಬಳಿಕ ಆ ಬಗ್ಗೆ ಸ್ಪಷ್ಟತೆಯನ್ನು ನೀಡದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಇದು ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಭಾಷಾ ಹೇರಿಕೆ ಹಾಗೂ ಇತರ ರಾಷ್ಟ್ರೀಯ ವಿಚಾರಗಳಲ್ಲಿ ತನ್ನ ನಿಲುವುಗಳಿಂದ ವಿರೋಧ ಕಟ್ಟಿಕೊಂಡಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ಗೆ ರಾಜ್ಯಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಗೊಂದಲವಿವುದದರಿಂದ ಕಾಂಗ್ರೆಸ್ ನಿರ್ಧಾರ ಇನ್ನಷ್ಟೇ ಆಗಬೇಕಿದೆ.
ಬುಧವಾರ ತಮಿಳು ನಾಡು ನಿಯೋಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನೂ ಭೇಟಿಯಾಗಿತ್ತು.
“ಕೇಂದ್ರದ ಲೋಕಸಭಾ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸುವಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ಮುಂಚೂಣಿಯಲ್ಲಿದ್ದಾರೆ, ಕ್ಷೇತ್ರ ಪುನರ್ವಿಂಗಡಣೆ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದರೂ, ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ನಮ್ಮ ಮೈತ್ರಿಕೂಟದ ಪಾಲುದಾರ ಪಕ್ಷ. ಕ್ಷೇತ್ರ ಪುನರ್ವಿಂಗಡಣೆಯ ಬಗ್ಗೆ ಅವರ ನಿಲುವಿಗೆ ನಾವು ಸಮ್ಮತಿಸುತ್ತೇವೆ. ಆದರೆ, ನಾವು ರಾಷ್ಟ್ರೀಯ ಪಕ್ಷವಾಗಿರುವುದರಿಂದ, ನಮ್ಮ ಪಕ್ಷದ ಹೈಕಮಾಂಡ್ ಜೊತೆ ಇದನ್ನು ಚರ್ಚಿಸಬೇಕಾಗಿದೆ. ನಾವು ಹೈಕಮಾಂಡ್ ಸಲಹೆ ಪಡೆದ ನಂತರ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸುತ್ತೇವೆ," ಎಂದವವರು ಸ್ಪಷ್ಟಪಡಿಸಿದ್ದರು.
ಆದರೆ, ಮೂಲಗಳ ಪ್ರಕಾರ ಡಿ.ಕೆ. ಶಿವಕುಮಾರ್ ಅವರು ಇನ್ನೂ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಟಾಲಿನ್ ಅವರಿಗೆ ಬರೆದ ಪತ್ರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಡಿಎಂಕೆ ಸಭೆಯಲ್ಲಿ ಭಾಗವಹಿಸಲು ವಿನಂತಿ ಮಾಡುವುದಾಗಿ ಹೇಳಿದ್ದರು. ಆದರೆ, ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷರಾಗಿರುವುದರಿಂದ ಪಕ್ಷದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಕಾರ್ಯ ಸಾಧುವಲ್ಲ. ಆದರೂ, ಹೈಕಮಾಂಡ್ ನಿರ್ಧಾರದ ಬಳಿಕ ತನ್ನ ನಿಲುವು ಪ್ರಕಟಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕ್ಷೇತ್ರ ಪುನರ್ವಿಂಗಡಣೆ
ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ದಕ್ಷಿಣ ರಾಜ್ಯಗಳು ಉತ್ತರದ ಹಲವು ರಾಜ್ಯಗಳಿಗಿಂತ ಜನಸಂಖ್ಯಾ ಬೆಳವಣಿಗೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಆದಾಗ್ಯೂ, ಈ ಯಶಸ್ಸು ಕೇವಲ ಜನಸಂಖ್ಯಾ ಅಂಕಿಅಂಶಗಳನ್ನು ಆಧರಿಸಿದ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಹಿನ್ನಡೆಯನ್ನುಂಟುಮಾಡಬಹುದು, ಏಕೆಂದರೆ ಇದು ಈ ರಾಜ್ಯಗಳಿಗೆ ಸಂಸದೀಯ ಸ್ಥಾನಗಳ ಕಡಿತಕ್ಕೆ ಕಾರಣವಾಗಬಹುದು. ತಮಿಳುನಾಡಿನ ನಿಲುವನ್ನು ಬೆಂಬಲಿಸುವ ಮೂಲಕ, ಪರಿಣಾಮಕಾರಿ ಜನಸಂಖ್ಯಾ ನಿಯಂತ್ರಣವನ್ನು ನಿರ್ವಹಿಸಿದ ರಾಜ್ಯಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಎದುರಿಸುವ ತಮಿಳುನಾಡಿನ ಹೋರಾಟಕ್ಕೆ ದಕ್ಷಿಣ ರಾಜ್ಯಗಳು ಬೆಂಬಲಿಸುತ್ತಿವೆ.
ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಾದ ಅನುದಾನಗಳು, ತೆರಿಗೆ ಹಂಚಿಕೆ ಮತ್ತಿತರ ವಿಷಯಗಳ ಬಗ್ಗೆ ಪ್ರತಿಭಟಿಸುತ್ತಲೇ ಇರುವ ಸಿದ್ದರಾಮಯ್ಯ ಅವರ ನಿಲುವು ಕಾಂಗ್ರೆಸ್ ಪಕ್ಷದೊಳಗೆ ಏನು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೂ, ತಮಿಳುನಾಡಿನ ನಡೆಯನ್ನು ಬೆಂಬಲಿಸುವ ಬಗ್ಗೆ ಕಾಂಗ್ರೆಸ್‌ನೊಳಗಿನ ಭಿನ್ನಾಭಿಪ್ರಾಯ ಎದ್ದು ಕಾಣುತ್ತಿದೆ. ರಾಷ್ಟ್ರೀಯ ಘಟಕವಾಗಿ ಪಕ್ಷ ಎದುರಿಸುತ್ತಿರುವ ಸಂದಿಗ್ಧತೆಯನ್ನು ಕೂಡಾ ಅದು ಎತ್ತಿ ತೋರಿಸುತ್ತದೆ. ಅಂತಹ ಸಮಸ್ಯೆಗಳು ಉದ್ಭವಿಸಿದಾಗ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆಯನ್ನು ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮಹತ್ವವನ್ನು ಎತ್ತಿತೋರಿಸುತ್ತಿರುವ ಬೆಳವಣಿಗೆ ಇದಾಗಿದೆ.