
ಮುಖ್ಯಮಂತ್ರಿ ಸಿದ್ದರಾಮಯ್ಯ
Honey Trap | ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ; ಉನ್ನತ ಮಟ್ಟದ ತನಿಖೆ ಎಂದ ಸಿಎಂ ಸಿದ್ದರಾಮಯ್ಯ
ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದೆ. ತಮಗೆ ಹನಿಟ್ರ್ಯಾಪ್ ಯತ್ನ ಮಾಡಿರುವ ಬಗ್ಗೆ ಸಚಿವ ರಾಜಣ್ಣ ಪ್ರಸ್ತಾಪಿಸುತ್ತಿದ್ದು, ಇದು ದೊಡ್ಡ ರಾಜಕೀಯ ವಿವಾದದ ರೂಪ ಪಡೆದುಕೊಂಡಿವೆ.
ಹನಿ ಟ್ರ್ಯಾಪ್ ಕುರಿತಂತೆ ಪ್ರತಿಪಕ್ಷಗಳು ತನಿಖೆಗೆ ಆಗ್ರಹಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ್ದು, ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಆರಗ ಜ್ಞಾನೇಂದ್ರ , ಶಾಸಕ ಸುನೀಲ್ ಕುಮಾರ್, ಸಚಿವರಾದ ಕೆ ಎನ್ ರಾಜಣ್ಣ ಅವರು ಹನಿ ಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದು ಈ ಬಗ್ಗೆ ಉತ್ತರಿಸಬೇಕು. ಹನಿಟ್ರ್ಯಾಪ್ ಮಾಡಲು ಯತ್ನಿಸಿದವರನ್ನು ವಜಾ ಮಾಡಬೇಕು ಎಂದು ಅಗ್ರಹಿಸಿದ್ದರು. ಅಲ್ಲದೇ ನ್ಯಾಯಾಂಗ ತನಿಖೆಗೂ ಒತ್ತಾಯಿಸಿದ್ದರು.
ಪ್ರತಿಪಕ್ಷ ಹಾಗೂ ಸ್ವಪಕ್ಷಿಯ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಎಂ ಸಿದ್ದರಾಮಯ್ಯ, ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ಪ್ರಕರಣದಲ್ಲಿ ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿ ಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದರು.
ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಏನಿದು ಹನಿಟ್ರ್ಯಾಪ್ ವಿವಾದ
ರಾಜ್ಯ ಸಹಕಾರ ಸಚಿವ ಕೆ.ಎನ್. ರಾಜಣ್ಣ ವಿಧಾನಸಭೆಯಲ್ಲಿ ಕೇಂದ್ರ ನಾಯಕರು ಸೇರಿದಂತೆ ಕನಿಷ್ಠ 48 ರಾಜಕಾರಣಿಗಳು ಹನಿಟ್ರ್ಯಾಪ್‌ನಲ್ಲಿ ಸಿಲುಕಿದ್ದಾರೆ. ಈ ವಿಷಯ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ನನಗೆ ತಿಳಿದ ಮಟ್ಟಿಗೆ ಒಬ್ಬರು ಅಥವಾ ಇಬ್ಬರು ಅಲ್ಲ. ಸುಮಾರು 48 ಜನರು ಈ ಸಿಡಿಗಳು ಮತ್ತು ಪೆನ್ ಡ್ರೈವ್‌ಗಳಿಗೆ ಬಲಿಯಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಈ ಬಗ್ಗೆ ವಿಧಾನಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು
'ಸಂಪೂರ್ಣ ಸತ್ಯ ಹೊರಬರಬೇಕು'
ಈ ವಿಷಯದಲ್ಲಿ ಗೃಹ ಸಚಿವರಿಗೆ ಲಿಖಿತ ದೂರು ನೀಡುವುದಾಗಿ ಮತ್ತು ಈ ಸಂಪೂರ್ಣ ಪಿತೂರಿಯ ವಿವರವಾದ ತನಿಖೆಗೆ ಒತ್ತಾಯಿಸುವುದಾಗಿ ಸಚಿವ ರಾಜಣ್ಣ ವಿಧಾನಸಭೆಯಲ್ಲಿ ಹೇಳಿದ್ದರು. ಈ ಘಟನೆಗಳ ಹಿಂದೆ ಯಾರಿದ್ದಾರೆ, ಯಾರು ಇದನ್ನು ನಡೆಸುತ್ತಿದ್ದಾರೆ ಮತ್ತು ಅದರ ಉದ್ದೇಶವೇನು ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದರು.
ರಾಜಣ್ಣ ಅವರ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಕೂಡ ಈ ವಿಷಯದ ಬಗ್ಗೆ ಪರಿಷತ್ ನಲ್ಲಿ ಮಾತನಾಡಿ, ಕಳೆದ 6 ತಿಂಗಳಿನಿಂದ ರಾಜಕಾರಣಿಗಳನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸುವ ಪ್ರಯತ್ನಗಳು ನಡೆಯುತ್ತಿವೆ. ವಾಟ್ಸಾಪ್‌ನಲ್ಲಿ ಕರೆಗಳು ಮತ್ತು ಸಂದೇಶಗಳು ಬರುತ್ತವೆ. ನಾಯಕರನ್ನು ಬಲೆಗೆ ಬೀಳಿಸುವ ಪ್ರಯತ್ನಗಳು ನಡೆಯುತ್ತಿವೆ. ತನಿಖೆಯ ಫಲಿತಾಂಶಗಳಿಗಾಗಿ ನಾವು ಕಾಯಬೇಕು ಎಂದು ಹೇಳಿದ್ದರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಕರ್ನಾಟಕದ ಸಚಿವರನ್ನು ಹನಿಟ್ರ್ಯಾಪ್ ಮಾಡಲು ಎರಡು ಬಾರಿ ಪ್ರಯತ್ನಗಳು ನಡೆದವು ಆದರೆ ಅದು ವಿಫಲವಾಯಿತು. ರಾಜಕೀಯದಲ್ಲಿ ಅಂತಹ ಚಟುವಟಿಕೆಗಳ ಅಗತ್ಯವಿಲ್ಲ, ಆದರೆ ಕೆಲವರು ಅದನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.
ಪ್ರಶ್ನೆಗಳನ್ನು ಎತ್ತಿದ್ದ ವಿರೋಧ ಪಕ್ಷಗಳು
ಈ ಪ್ರಕರಣದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗೃಹ ಸಚಿವರು ಈ ವಿಷಯವನ್ನು ಹೇಗೆ ತನಿಖೆ ಮಾಡುತ್ತಾರೆ ಎಂಬುದನ್ನು ತಕ್ಷಣ ಹೇಳಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕ ಸಿ.ಟಿ. ರವಿ ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಸರ್ಕಾರವೇ ಈ ಹನಿ ಟ್ರ್ಯಾಪ್ ಕಾರ್ಖಾನೆಯನ್ನು ನಡೆಸುತ್ತಿದೆಯೇ ಎಂದು ಪ್ರಶ್ನೆ ಮಾಡಿದ್ದರು. ಸರ್ಕಾರ ಈ ಪಿತೂರಿಯಲ್ಲಿ ಭಾಗಿಯಾಗಿದ್ದರೆ, ಜನರಿಗೆ ನ್ಯಾಯ ಒದಗಿಸುವವರು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.