ಬಿಜೆಪಿ ಅವಧಿಯ 21 ಹಗರಣಗಳ ಪಟ್ಟಿ ಬಿಚ್ಚಿಟ್ಟ ಸಿದ್ದರಾಮಯ್ಯ
ಈ ಮುಂಗಾರು ಅಧಿವೇಶನ ಆರಂಭದ ದಿನದಿಂದ ಈವರೆಗೂ ಪ್ರತಿಪಕ್ಷ ಬಿಜೆಪಿಯು ವಾಲ್ಮೀಕಿ ಹಗರಣ ಮತ್ತು ಮೂಡಾ ಹಗರಣಗಳ ಬಗ್ಗೆಯೇ ಪ್ರಸ್ತಾಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿತು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಅವಧಿಯಲ್ಲಿನ 21 ಹಗರಣಗಳ ಪಟ್ಟಿಯನ್ನು ಬಿಚ್ಚಿಟ್ಟಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಅವಧಿಯ ಹಗರಣಗಳ ಪಟ್ಟಿ ಓದಿದ ಸಿಎಂ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ 42.16 ಕೋಟಿ ರೂ. ಎಪಿಎಂಸಿ ಹಗರಣವಾಗಿದ್ದು, ಈ ವೇಳೆ ಬಸವರಾಜ ಬೊಮ್ಮಾಯಿ ಮಂತ್ರಿಯಾಗಿದ್ದರು. ಇನ್ನು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ಕೋಟ ಶ್ರೀನಿವಾಸ ಪೂಜಾರಿ ಮಂತ್ರಿಯಾಗಿದ್ದಾಗ ಭೋವಿ ನಿಗಮದಲ್ಲಿ 87 ಕೋಟಿ ರೂ. ಹಗರಣವಾಗಿದೆ ಎಂದರು.
ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ 50.00 ಕೋಟಿಗೂ ಅಧಿಕ ಹಗರಣವಾಗಿತ್ತು. ಡಿಡಿಯುಟಿಟಿಎಲ್ ಅಧ್ಯಕ್ಷರಾಗಿದ್ದ ವೀರಯ್ಯ ಬಂಧನವಾಗಿದ್ದರೂ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಬೇರೆ ನಿಗಮಗಳಲ್ಲಿ 430 ಕೋಟಿ ರೂ.ಗಿಂತ ಹೆಚ್ಚು ಹಗರಣವಾಗಿದೆ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಪ್ರವಾಸೋದ್ಯಮ ಇಲಾಖೆಯಲ್ಲಿ 2.47 ಕೋಟಿ ಹಗರಣವಾಗಿದೆ. ಈ ವೇಳೆ ಸಿಪಿ ಯೋಗೇಶ್ವರ್ ಇಲಾಖೆಯ ಸಚಿವರಾಗಿದ್ದರು ಎಂದು ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವಧಿಯಲ್ಲಿ ಸುಮಾರು 500 ಕೋಟಿ ರೂ. ಕಿಯೋನಿಕ್ಸ್ ಹಗರಣವಾಗಿದೆ. ಈ ವೇಳೆ ಸಂಬಂಧಪಟ್ಟ ಇಲಾಖೆಯ ಸಚಿವರು ಅಶ್ವತ್ಥ್‌ನಾರಾಯಣ ಇದ್ದರು. ಇದು ಸಿಎಜಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಹೇಳಿದರು.
ಕೊವಿಡ್ ವೇಳೆ 40,000 ಕೋಟಿ ರೂ. ಹಗರಣವಾಗಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದರು ಎಂದರು. ಭದ್ರಾ ಮೇಲ್ದಂಡೆ ಯೋಜನೆ ಹಗರಣದ ಬಗ್ಗೆ ಹೆಚ್.ವಿಶ್ವನಾಥ್ ಮತ್ತು ಗೂಳಿಹಟ್ಟಿ ಶೇಖರ್ ಹೇಳಿದ್ದರು. ಈ ಕುರಿತು ನ್ಯಾಯಾಂಗ ತನಿಖೆ ನಡೆಯುತ್ತಿದೆ ಎಂದರು.
ಬಿಜೆಪಿ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ೪೦% ಹಗರಣ ಪ್ರಸ್ತಾಪಿಸಿ, ಗುತ್ತಿಗೆದಾರರ ಸಂಘದವರು ರಾಷ್ಟ್ರಪತಿಗಳಿಗೆ ದೂರು ಬರೆದಿದ್ದರು. ಬೆಳಗಾವಿ ಜಿಲ್ಲೆಯ ಸಂತೋಷ್‌ಪಾಟೀಲ ಆತ್ಮಹತ್ಯೆ ಮಾಡಿಕೊಂಡರು, ಆಗ ಸಚಿವ ಕೆಎಸ್‌ಈಶ್ವರಪ್ಪ ರಾಜೀನಾಮೆ ಕೊಡಬೇಕಾಯಿತು ಎಂದು ನೆನಪಿಸಿದರು.
ಪಿಎಸ್‌ಐ ಮತ್ತು ಇತರೆ ನೇಮಕಾತಿಯಲ್ಲಿ ನೂರಾರು ಕೋಟಿ ಹಗರಣವಾಗಿದೆ. ಈ ಬಗ್ಗೆ ಜಸ್ಟಿಸ್ ವೀರಪ್ಪ ಅವರು ತನಿಖಾ ವರದಿ ಸಲ್ಲಿಸಿದ್ದಾರೆ ಎಂದರು.
ಪರಶುರಾಮ್‌ಥೀಮ್‌ಪಾರ್ಕ್ ಹಗರಣದಲ್ಲಿ 11 ಕೋಟಿ ಹಗರಣವಾಗಿದೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ. ಆಗ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಗೆ ನೂರಾರು ಕೋಟಿ ರೂ. ಆದಾಯ ಇದರ ಬಗ್ಗೆ ತನಿಖೆ ಯಾಕಿಲ್ಲ ಎಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.
ಯಡಿಯೂರಪ್ಪ ಆಪ್ತ ಉಮೇಶ್ ಮತ್ತು ಇತರರ ಮನೆಯಲ್ಲಿ ಸಿಕ್ಕಿದ್ದು, ಯಡಿಯೂರಪ್ಪನವರ ಅಕ್ರಮ ಆಸ್ತಿ 750 ಕೋಟಿಗಿಂತ ಅಧಿಕ ಎಂದು ಆರೋಪಿಸಿದರು. ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ನೂರಾರು ಕೋಟಿ ಹಗರಣ ನಡೆದಿದೆ ಎಂದರು. ಈ ಬಗ್ಗೆ ಯಡಿಯೂರಪ್ಪನವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.
ಅಬಕಾರಿ ಇಲಾಖೆಯಲ್ಲಿ 750 ಕೋಟಿ ಹಗರಣ ನಡೆದಿದೆ ಎನ್ನುವ ಕಾರಣಕ್ಕೆ ಇಲಾಖೆಯ ಸಚಿವರಾಗಿದ್ದ ಹೆಚ್ ನಾಗೇಶ್ ಅವರನ್ನು ಬದಲಾಯಿಸಬೇಕಾಯಿತು ಎಂದು ಹೇಳಿದರು.
ಕೆಕೆಆರ್‌ಡಿಬಿಯಲ್ಲಿ 200 ಕೋಟಿ ಹಗರಣ, ಕಂದಾಯ ಇಲಾಖೆಯ ಸಚಿವರಾಗಿದ್ದ ಆರ್ ಅಶೋಕ್ ಅವರ ಆಪ್ತ ಸಹಾಯಕರು ಲಂಚ ಕೇಳಿದ್ದ ಪ್ರಕರಣ ಮತ್ತು ಆರ್ ಅಶೋಕ್ ಅವರ ಮೇಲೆ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬಗ್ಗೆ ಚುನಾವಣಾ ಅಫಡೆವಿಟ್‌ನಲ್ಲಿ ಉಲ್ಲೇಖಿಸಿಲ್ಲ.
ಕೃಷಿ ಇಲಾಖೆಯ ಅಧಿಕಾರಿಗಳು ರೈತರಿಂದ ಲಂಚ ಪಡೆಯುತ್ತಿದ್ದರು ಎನ್ನುವ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿತ್ತು.
ಅಂಗನವಾಡಿಗಳಿಂದ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಮಾತೃಪೂರ್ಣ ಯೋಜನೆಯಿಂದ ನೀಡಲಾಗುತ್ತಿದ್ದ ಮೊಟ್ಟೆ ಹಗರಣ, ಇದರಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಗಂಗಾವತಿ ಶಾಸಕರಾಗಿದ್ದ ಪರಣ್ಣ ಮುನವಳ್ಳಿ ಭಾಗಿಯಾಗಿದ್ದರು ಎಂದು ಹೇಳಿದರು.
ಕೆಐಎಬಿಡಿ ಹಗರಣದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ಮುರಗೇಶ್‌ನಿರಾಣಿ ಹೆಸರು ಕೇಳಿಬಂದಿದೆ. ಗಣಿ ಹಗರಣ, ಬಿಡಿಎ ಮತ್ತು ಕೆಐಎಬಿಡಿ ಡಿನೋಟಿಫಿಕೇಷನ್‌ಹಗರಣದಲ್ಲಿ ಮುಖ್ಯಮಂತ್ರಿಗಳು ಹಾಗೂ ಹಲವು ಸಚಿವರು ಜೈಲಿಗೆ ಹೋಗಿ ಬಂದಿದ್ದಾರೆ. ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿಬಂದಿದೆ. ಇದರಲ್ಲಿ ಅಮಾಯಕ ಜನರು ಸಾವಿರಾರು ಕೋಟಿ ಹಣ ಕಳೆದುಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ʻʻನಿಮ್ಮನ್ನು ಕಳ್ಳರು, ಲೂಟಿಕೋರರು ಎಂದು ಜನ ವಿಪಕ್ಷದಲ್ಲಿರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಎಲ್ಲಾ ಹಗರಣ ತನಿಖೆ ಮಾಡಿಸಿ ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸದೇ ಬಿಡಲ್ಲ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆ ಆಗುತ್ತದೆ. ಹಿಂದೆ ಇಡಿ ಅಧಿಕಾರಿಗಳು ಬರಲಿಲ್ಲ, ಈಗ ಶುರು ಮಾಡಿದ್ದಾರೆ. ಇಡಿ, ಬಿಜೆಪಿಗೆ ನಾವು ಭಯಪಡಲ್ಲ. ನನ್ನ ಹೆಸರು ಹೇಳದಿದ್ದರೆ ಬಿಜೆಪಿಯವರಿಗೆ ತಿಂದಿದ್ದು ಜೀರ್ಣ ಆಗಲ್ಲ. ಸಿದ್ದರಾಮಯ್ಯ, ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದು ಭಜನೆ ಮಾಡಿʼʼ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.