ಸಿದ್ದರಾಮಯ್ಯನವರೇ, ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ: ಪ್ರತಾಪ್ ಸಿಂಹ
ʻʻಸಿದ್ದರಾಮಯ್ಯರ 40 ವರ್ಷದ ರಾಜಕಾರಣವನ್ನು ಗಮನಿಸಿದರೆ ಅವರನ್ನು ಭ್ರಷ್ಟ ಎನ್ನಲು ಸಾಧ್ಯವಿಲ್ಲ. ಆದರೆ, ಈಗ ಅವರ ಬಗ್ಗೆ ಅನುಮಾನ ಶುರುವಾಗಿದೆ. ನಿವೇಶನಗಳನ್ನು ವಾಪಾಸ್ ಕೊಟ್ಟು ತನಿಖೆ ಮಾಡಿಸುವುದೇ ಸೂಕ್ತ. ಇಲ್ಲದೇ ಇದ್ದರೆ ಸಿಎಂ ಕುಟುಂಬದ ಪ್ರಕರಣವನ್ನು ಇಟ್ಟುಕೊಂಡು ಹಲವರು ಬಚಾವ್ ಆಗುತ್ತಾರೆʼʼ ಎಂದು ಪ್ರತಾಪ ಸಿಂಹ ಹೇಳಿದರು.
ʻʻಸಿದ್ದರಾಮಯ್ಯ ಅವರೇ, ನಿಮಗೆ ಬಂದಿರುವ ನಿವೇಶನಗಳನ್ನು ವಾಪಸ್ ಕೊಟ್ಟು ಪ್ರಕರಣದ ತನಿಖೆ ಮಾಡಿಸಿ" ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಸಿದ್ದರಾಮಯ್ಯರ 40 ವರ್ಷದ ರಾಜಕಾರಣವನ್ನು ಗಮನಿಸಿದರೆ ಅವರನ್ನು ಭ್ರಷ್ಟ ಎನ್ನಲು ಸಾಧ್ಯವಿಲ್ಲ. ಆದರೆ, ಈಗ ಅವರ ಬಗ್ಗೆ ಅನುಮಾನ ಶುರುವಾಗಿದೆ. ನಿವೇಶನಗಳನ್ನು ವಾಪಾಸ್ ಕೊಟ್ಟು ತನಿಖೆ ಮಾಡಿಸುವುದೇ ಸೂಕ್ತ. ಇಲ್ಲದೇ ಇದ್ದರೆ ಸಿಎಂ ಕುಟುಂಬದ ಪ್ರಕರಣವನ್ನು ಇಟ್ಟುಕೊಂಡು ಹಲವರು ಬಚಾವ್ ಆಗುತ್ತಾರೆʼʼ ಎಂದು ಹೇಳಿದರು.
ʻʻ40 ವರ್ಷಗಳಲ್ಲಿ ಕಳಂಕ ಅಂಟಿಸಿಕೊಳ್ಳದಿರುವ ನೀವು ಇದ್ಯಾವುದೋ 16 ನಿವೇಶನಗಳಿಗೆ ಕಳಂಕ ಅಂಟಿಸಿಕೊಳ್ಳುತ್ತಾ ಇದ್ದೀರಿ. ಇದು ಬೇಕಾ ನಿಮಗೆ? ಮುಂದಿನ ಮೂರವರೆ ವರ್ಷ ನೀವೇ ಮುಖ್ಯಮಂತ್ರಿ ಆಗಿರುತ್ತೀರಿ. ಇಡೀ ಮೂರೂವರೆ ವರ್ಷ ಇದೇ ಆರೋಪಕ್ಕೆ ತುತ್ತಾಗುತ್ತೀರಿ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿʼʼ ಎಂದರು.
ʻʻಈ ಹಿಂದೆ ಸಿಎಂ ಆಗಿದ್ದವರ ಆಸ್ತಿಗಳನ್ನೆಲ್ಲ ನೋಡಿದರೆ ಸಿದ್ದರಾಮಯ್ಯ ಆಸ್ತಿ ಏನೂ ಅಲ್ಲ. ಮುಡಾ ಹಗರಣವನ್ನು ಸಂತೋಷ್ ಹೆಗ್ಡೆ, ಎನ್ ಕುಮಾರ್ ಅವರಂಥ ವ್ಯಕ್ತಿಗಳಿಂದ ನ್ಯಾಯಾಂಗ ತನಿಖೆ ಮಾಡಿಸಿʼʼ ಎಂದು ಪ್ರತಾಪ್ ಸಿಂಹ ಹೇಳಿದರು.
ʻʻಮರೀಗೌಡ ದಡ್ಡ ಶಿಖಾಮಣಿ. ನಾನು ಮುಡಾದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದು ನಿವೇಶನ ಕೊಡಿಸಿದ್ದರೆ ಅಥವಾ ತೆಗೆದುಕೊಂಡಿದ್ದರೆ ತೋರಿಸಲಿ. ನಾನು ಮುಡಾಗೆ ಯಾವಾತ್ತೂ ವ್ಯವಹಾರಕ್ಕೆಂದು ಹೋಗಿಲ್ಲʼʼ ಎಂದು ಅವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅವರು ಇನ್ನೂ ಮುರೂವರೆ ವರ್ಷ ಸಿಎಂ ಸ್ಥಾನದಲ್ಲಿಯೇ ಮುಂದುವರಿಯುತ್ತಾರೆ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಪ್ರತಾಪ್ ಸಿಂಹ, ʻʻಸಿದ್ದರಾಮಯ್ಯ ಮೂರೂವರೆ ವರ್ಷ ಸಿಎಂ ಅಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಿರುತ್ತಾರೆ. ಹೀಗಾಗಿ ನಾನು ಹೇಳಿದೆ ಅಷ್ಟೇ.." ಎಂದು ಹೇಳಿದರು.
"ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆದರೂ ಖುಷಿಯೇ. ಅವರು ಸಹ ಹಳೇ ಮೈಸೂರು ಭಾಗದವರೇ. ಸಿದ್ದರಾಮಯ್ಯ ಸಹ ಮೈಸೂರಿನವರೇ. ಅವರು ಬೇರೆ ಪಕ್ಷದವರು ಇರಬಹುದು, ಆದರೆ ಅವರು ಮೈಸೂರಿನವರು ಎಂಬ ಹೆಮ್ಮೆ ಇದೆ" ಎಂದೂ ಪ್ರತಾಪ್ ಸಿಂಹ ಮುಖ್ಯಮಂತ್ರಿಗಳ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಮುಡಾ ಹಗರಣ ಬೆಳಕಿಗೆ ಬಂದು ಬಹುತೇಕ ತಿಂಗಳು ಕಳೆದಿದೆ. ಈವರೆಗೆ ಬಹುತೇಕ ಮೌನಕ್ಕೆ ಜಾರಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಇದೇ ಮೊದಲ ಬಾರಿಗೆ ಪ್ರಕರಣದ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ. ಎರಡು ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಅವರ ಬದಲಿಗೆ ಯಧುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.