JDS Protest | ಪಾಲಿಟೆಕ್ನಿಕ್ ಕಾಲೇಜು ಕೇಳಿದರೆ ಪಾರ್ಟಿಗೆ ಬನ್ನಿ ಅಂತಾರೆ ಸಿಎಂ;  ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ
x

JDS Protest | ಪಾಲಿಟೆಕ್ನಿಕ್ ಕಾಲೇಜು ಕೇಳಿದರೆ ಪಾರ್ಟಿಗೆ ಬನ್ನಿ ಅಂತಾರೆ ಸಿಎಂ; ಜೆಡಿಎಸ್‌ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

ನಾನು ನನ್ನ ಕ್ಷೇತ್ರಕ್ಕೆ ಪಾಲಿಟೆಕ್ನಿಕ್ ಕಾಲೇಜು ಕೊಡಿ ಎಂದು ಕೇಳಿದರೆ ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಸಿದ್ದರಾಮಯ್ಯ ಕರೆದಿದ್ದರು. ಒಬ್ಬ ಮುಖ್ಯಮಂತ್ರಿಯಾಗಿ ಹೀಗೆ ಮಾಡಬಹುದಾ? ಎಂದು ಜೆಡಿಎಸ್‌ ಶಾಸಕ ಎಂ.ಟಿ. ಕೃಷ್ಣಪ್ಪ ಪ್ರಶ್ನಿಸಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಶಾಸಕರಿಗೆ ಆಮಿಷ ಒಡ್ಡುತ್ತಿರುವ ಕುರಿತ ಆರೋಪಗಳ ಬೆನ್ನಲ್ಲೇ ತುರುವೇಕೆರೆ ಜೆಡಿಎಸ್‌ ಶಾಸಕ ಎಂ.ಟಿ. ಕೃಷ್ಣಪ್ಪ ಅವರು, ತಮಗೂ ಸಿಎಂ ಆಮಿಷವೊಡ್ಡಿದ್ದರು ಎಂದು ಹೇಳಿರುವುದು ಸಂಚಲನ ಸೃಷ್ಟಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಜೆಡಿಎಸ್‌ ವತಿಯಿಂದ ಆಯೋಜಿಸಿದ್ದ ʼಸಾಕಪ್ಪ ಸಾಕು ಕಾಂಗ್ರೆಸ್‌ ಸರ್ಕಾರʼ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.

''ನಾನು ನನ್ನ ಕ್ಷೇತ್ರಕ್ಕೆ ಪಾಲಿಟೆಕ್ನಿಕ್ ಕಾಲೇಜು ಕೊಡಿ ಎಂದು ಕೇಳಿದರೆ ಕಾಂಗ್ರೆಸ್ ಪಕ್ಷಕ್ಕೆ ಬಾ ಎಂದು ಸಿದ್ದರಾಮಯ್ಯ ಕರೆದಿದ್ದರು. ಒಬ್ಬ ಮುಖ್ಯಮಂತ್ರಿಯಾಗಿ ಹೀಗೆ ಮಾಡಬಹುದಾ?,'' ಎಂದು ಬೇಸರ ವ್ಯಕ್ತಪಡಿಸಿದರು.

''ನಾನು ಶಾಸಕನಾಗಿ ಎರಡು ವರ್ಷಗಳಾಗಿವೆ. ಕ್ಷೇತ್ರಗಳ ಅಭಿವೃದ್ಧಿಗೆ ಕನಿಷ್ಠ 50 ಕೋಟಿ ರೂ. ಕೊಟ್ಟಿಲ್ಲ. ಒಂದು ರಸ್ತೆಯ ಗುಂಡಿ ಮುಚ್ಚೋಕೆ ಆಗುತ್ತಿಲ್ಲ ಬರೀ ಲೂಟಿ ಬಿಟ್ಟರೆ ಏನು ಮಾಡುತ್ತಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಪಕ್ಷ. ನಾನು ಇನ್ನೂ ಇಪ್ಪತ್ತು ವರ್ಷಗಳಾದರೂ ಜೆಡಿಎಸ್ ನಲ್ಲಿಯೇ ಇರುತ್ತೇನೆ,'' ಎಂದು ಹೇಳಿದರು.

ಅಧಿಕಾರಕ್ಕೆ ಬಂದಾಗಿನಿಂದ ದರ ಏರಿಕೆ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಉಪ ನಾಯಕಿ ಶಾರದಾ ಪೂರ್ಯ ನಾಯಕ್ ಇತರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿ ಕೊಟ್ಟಿದೆ ನಿಜ. ಆದರೆ, ಗ್ಯಾರಂಟಿ ಪಡೆದ ಪಾಪಕ್ಕೆ ಜನರು ದಿನನಿತ್ಯ ಬೆಲೆ ಏರಿಕೆ ಬರೆಗೆ ತುತ್ತಾಗುತ್ತಿದ್ದಾರೆ. ಕೊಟ್ಟಿದ್ದು ಅಲ್ಪ, ಪಡೆಯುತ್ತಿರುವುದೇ ಹೆಚ್ಚು. ಜನರು ಯಾವುದೇ ಕಾರಣಕ್ಕೂ ಇದನ್ನು ಸಹಿಸಬಾರದು ಎಂದು ಕರೆ ನೀಡಿದರು.

ವಿಧಾನಸೌಧಕ್ಕೆ ಮುತ್ತಿಗೆ ಯತ್ನ; ಬಂಧನ

ಪ್ರತಿಭಟನಾ ಸಭೆ ಮುಕ್ತಾಯವಾದ ನಂತರ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಾಯಕರು, ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಜೆಡಿಎಸ್‌ ನಾಯಕರು ಹಾಗೂ ಕಾರ್ಯಕರ್ತರನ್ನು ಅಡ್ಡಗಟ್ಟಿದ ಪೊಲೀಸರು ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮುಖಂಡರನ್ನು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

Read More
Next Story