
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂಬ ಕಾನೂನು ಇದ್ದರೂ ಬಳಕೆಯಾಗುತ್ತಿದೆ.
ಶೆಡ್ಯೂಲ್ -9ಗೆ ಮೀಸಲಾತಿ ಕಾಯ್ದೆ ಸೇರಿಸದಿದ್ದರೆ ಉಗ್ರ ಹೋರಾಟ ಎಚ್ಚರಿಕೆ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂಬ ಕಾನೂನು ಇದ್ದರೂ ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಬೇಕು ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಳ ಮಾಡಿರುವ 2022 ರ ಕಾಯ್ದೆಯನ್ನು ಸಂವಿಧಾನದ ಶೆಡ್ಯೂಲ್- 9 ಕ್ಕೆ ಸೇರಿಸುವ ಮೂಲಕ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು. ಇಲ್ಲವಾದರೆ ವಾಲ್ಮೀಕಿ ಸಮಾಜದಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2022 ರ ಕಾಯ್ದೆಯನ್ನು ಭಾರತದ ಸಂವಿಧಾನದ 9 ನೇ ಶೆಡ್ಯೂಲ್ ಗೆ ಸೇರಿಸಲು ಮತ್ತು ಅನುಚ್ಛೇದ 15 ಮತ್ತು 16ಕ್ಕೆ ಮೀಸಲಾತಿ ಹೆಚ್ಚಿಸಲು ತಿದ್ದುಪಡಿ ತರಲು ಕೇಂದ್ರದ ಮೇಲೆ ಒತ್ತಡ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಹಾಗೆಯೇ ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ಬಂದಾಗೆಲ್ಲ ಕೆಲ ಜಾತಿಗಳನ್ನು ಎಸ್ಟಿಗೆ ಸೇರಿಸುವ ಭರವಸೆ ನೀಡಿ ಜನರನ್ನು ದಿಕ್ಕು ತಪ್ಪಿಸಿದ್ದಾರೆ. ಇದರಿಂದ ಸಾಕಷ್ಟು ಜನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ತ ಪಡೆಯುತ್ತಿದ್ದಾರೆ. ಇದಕ್ಕೆ ಬಿಜೆಪಿ ಸರ್ಕಾರ ಹಾಗೂ ಬಿಜೆಪಿ ನಾಯಕರೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಾಯಕರ ಮೇಲೂ ವಾಗ್ದಾಳಿ ನಡೆಸಿದ ಉಗ್ರಪ್ಪ ಅವರು, ಮುಂದಿನ ಬಾರಿ ಸುಮಾರು 4 ಲಕ್ಷ ಕೋಟಿ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಆದರೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಹಣವನ್ನು ಬೇರೆ ಕಾರ್ಯಗಳಿಗೆ ಬಳಸಬಾರದು ಎಂಬ ಕಾನೂನು ಇದ್ದರೂ ಬಳಕೆಯಾಗುತ್ತಿದೆ. ಇದನ್ನು ತಪ್ಪಿಸಬೇಕು. ಜೊತೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ 2022ರ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತಂದಿರುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಒತ್ತಡ ತಂದು ಶೆಡ್ಯೂಲ್ 9 ಗೆ ಸೇರಿಸಬೇಕು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಎಚ್.ಡಿ. ಕುಮಾರಸ್ವಾಮಿ, ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರದ ಮೇಲೆ ಒತ್ತಡ ತಂದು ಕರ್ನಾಟಕದ ತಳ ಸಮುದಾಯಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದ್ದಾರೆ.
ನಾವು ಮೊದಲಿನಿಂದಲೂ ಬದುಕಿನಲ್ಲಿ ಸಂಘರ್ಷ ಮಾಡಿಕೊಂಡೇ ಬಂದವರು. ನಾಯಕರು ಕೇವಲ ಸುದ್ದಿಗೋಷ್ಠಿ ನಡೆಸಿ ಸುಮ್ಮನಾಗುತ್ತಾರೆ ಎಂದು ಭಾವಿಸಬೇಡಿ. ಕೇಂದ್ರ ಸರ್ಕಾರ ಹೀಗೆ ನಿರ್ಲಕ್ಷ್ಯ ಧೋರಣೆ ತಾಳಿದರೆ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದರು. ನಮ್ಮ ಸಮುದಾಯದ ಇತರ ನಾಯಕರು ಕೂಡ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಲ್ಲಿ ಇದ್ದಾರೆ. ನೀವು ಗೆದ್ದಿರುವುದು ಮೀಸಲಾತಿಯಿಂದ ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಸಮುದಾಯದ ಹಿತದೃಷ್ಠಿಯಿಂದ ನಿಮ್ಮನ್ನು ಬೆಳೆಸಿದ ಸಮುದಾಯದ ಪರ ಧ್ವನಿ ಎತ್ತಿ ಎಂದು ಆಗ್ರಹಿಸಿದ್ದಾರೆ.
ಪಕ್ಕದ ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಸಂವಿಧಾನದಲ್ಲಿ ಎಲ್ಲೂ ಆರ್ಥಿಕ ಮೀಸಲಾತಿಯ ಬಗ್ಗೆ ಡಾ.ಬಿ.ಆರ್. ಅಂಬೇಡ್ಕರ್ ಉಲ್ಲೇಖಿಸಿಲ್ಲ. ಆದರೆ ಇಷ್ಟು ವರ್ಷಗಳಾದರೂ ಸಂವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರ ಹೆಸರಿನಲ್ಲಿ ಮೇಲ್ವರ್ಗದವರಿಗೆ ಮೀಸಲಾತಿ ಘೋಷಣೆ ಮಾಡಿದೆ. ಆರ್ಥಿಕವಾಗಿ ಹಿಂದುಳಿದವರ ಮೇಲ್ವರ್ಗದ ಸಮುದಾಯದ ಮಕ್ಕಳು ಸ್ಕಾಲರ್ ಶಿಪ್ ಪಡೆಯಲು 8.5 ಲಕ್ಷ ರೂ. ಆದಾಯ ಮಿತಿ ಇದೆ. ಆದರೆ ತಲ ತಕಾಂತರದಿಂದ ಶೋಷಣೆ ಅನುಭವಿಸುತ್ತ ಬಂದಿರುವ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳು ಸ್ಕಾಲರ್ ಶಿಪ್ ಪಡೆಯಲು ಆದಾಯ ಮಿತಿ 2.5 ಲಕ್ಷ ರೂ. ನಿಗಧಿಪಡಿಸಲಾಗಿದೆ. ಇದು ಯಾವ ಸೀಮೆ ನ್ಯಾಯ? ಬೇರೆ ಎಲ್ಲ ರೀತಿಯಲ್ಲೂ ಮೀಸಲಾತಿ ಘೋಷಣೆಯಾಗಿದ್ದರೂ ಜನಸಾಮಾನ್ಯರಿಗೆ ಮೀಸಲಾತಿ ಕೊಡುವಲ್ಲಿ ಭೇದ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗಲೇ ನಾವು ಹೋರಾಟ ನಡೆಸಿದ ಫಲವಾಗಿ ಪರಿಶಿಷ್ಟ ಪಂಗಡಕ್ಕೆ ಶೇ.3 ರ ಬದಲು ಶೇ.7 ಮೀಸಲಾತಿ ಹಾಗೂ ಪರಿಶಿಷ್ಟ ಜಾತಿಗೆ ಶೇ.15, ಇತರೆ ಹಿಂದುಳಿದ ವರ್ಗಗಳಿಗೆ ಶೇ.32 ಮೀಸಲಾತಿ ಜಾರಿಗೊಳಿಸಲಾಗಿತ್ತು. ಆದರೆ ಅದನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದವು. ಇದರಿಂದಾಗಿ ಕರ್ನಾಟಕ ಆಡಳಿತ ನ್ಯಾಯಮಂಡಳಿ ಆ ಕಾಯ್ದೆಯನ್ನು ಅನೂರ್ಜಿತಗೊಳಿಸಿದೆ. ಕರ್ನಾಟಕ ಉಚ್ಚ ನ್ಯಾಯಾಲಯ ಕೂಡ ಈ ಕಾಯ್ದೆಗೆ ತಡೆಯಾಜ್ಞೆ ನೀಡಿದೆ. ಇದರ ಪರಿಣಾಮ ಬಿಜೆಪಿ ಸರ್ಕಸರ ಜಾರಿಗೆ ತಂದ ಮೀಸಲಾತಿ ಹೆಚ್ಚಳ ರದ್ಧಾಗಿದೆ. ಇದನ್ನು ಅರಿತು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾಯ್ದೆ 2022 ಅನ್ನು ಶೆಡ್ಯೂಲ್ 9 ಗೆ ಸೇರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇದನ್ನು ನಾವು ನಮ್ಮ ಸಮುದಾಯ ಸ್ವಾಗತಿಸುತ್ತದೆ. ಆದರೆ ಒಂದು ತಿಂಗಳಾದರೂ ಕೇಂದ್ರ ಸರ್ಕಾರ ಅದನ್ನು ಶೆಡ್ಯೂಲ್ 9 ಗೆ ಸೇರಿಸದಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವುದಾಗಿ ಹೇಳಿದ ವಿ.ಎಸ್. ಉಗ್ರಪ್ಪ, ತಕ್ಷಣ ಸರ್ವಪಕ್ಷದ ನಿಯೋಗ ಕೊಂಡೊಯ್ದು, ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಶೇ. 56 ಮೀಸಲಾತಿ ನೀಡಿದ 2022 ರ ಈ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ ಅನುಚ್ಛೇದ 9 ಕ್ಕೆ ಸೇರಿಸಲು ಹಾಗೂ ಇಂದಿರಾ ಸಹಾನಿ ಮತ್ತು ಇನ್ನಿತರೆ ಕೇಸುಗಳಲ್ಲಿ ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ತಟಸ್ಥಗೊಳಿಸಿ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ಮಾಡಲು ಅನುಚ್ಛೇದ 15 ಮತ್ತು 16 ಕ್ಕೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದ್ದಾಗಿ ಹೇಳಿದ್ದಾರೆ.
ಜೊತೆಗೆ ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ತಳ ಸಮುದಾಯದ ಬಡ ಜನರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಈಗಾಗಿ ಸುಳ್ಳು ಪ್ರಮಾಣ ಪತ್ರ ಪಡೆದವರು ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳಿಗೆ ಕೂಡ ಸೂಕ್ತ ಕಟ್ಟುನಿಟ್ಟಿನ ಕ್ರಮ ಆಗಬೇಕು ಎಂದು ರಾಜ್ಯ ಸರ್ಕಾರವನ್ನು ಉಗ್ರಪ್ಪ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಕಾರ್ಯಾಧ್ಯಕ್ಷರಾದ ಎಂ.ನರಸಿಂಹಯ್ಯ, ಖಜಾಂಚಿ ಈ. ರಾಜಪ್ಪ, ಉಪಾಧ್ಯಕ್ಷರಾದ ರಾಜಣ್ಣ ಟಿ. ಚಿತ್ರದುರ್ಗ, ರೇವತಿ ಭೀಮಪುತ್ರಿ, ಪ್ರಧಾನ ಕಾರ್ಯದರ್ಶಿಗಳಾದ ಸಣ್ಣ ನಾಯಕ್, ರಮೇಶ್ ಹಿರೇಜಂಬೂರು, ನಾಗರಾಜ ಗಾಣದ ಹುಣಸೆ, ನಿವೃತ್ತ ಅಧಿಕಾರಿ ಕೆಂಪರಾಮಯ್ಯ, ಕೆಪಿಸಿಸಿ ಎಸ್ಟಿ ಸೆಲ್ ರಾಜ್ಯ ಅಧ್ಯಕ್ಷರಾದ ವಿಜಯ ನಾಯಕ್, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಹಿಳಾಅಧ್ಯಕ್ಷೆ ಜಯಶ್ರೀ ಗುಡ್ಡೆಕಾಯಿ, ಗುಲ್ಬರ್ಗಾ ವಿವಿ ನಿವೃತ್ತ ಉಪಕುಲಪತಿ ಶ್ರೀರಾಮುಲು, ಚಿತ್ರದುರ್ಗಾ ಜಿಲ್ಲಾಧ್ಯಕ್ಷರು ಬಸವರಾಜ್ ನಾಯಕ್, ಕಾರ್ಯದರ್ಶಿ ತುಳಸಿರಾಮ್ ಟಿ.ಆರ್., ಸಂಘಟನಾ ಕಾರ್ಯದರ್ಶಿ ಕೆ.ವಿ. ನಾಗೇಂದ್ರ, ರವಿಚಂದ್ರ ಮತ್ತುತರರು ಉಪಸ್ಥಿತರಿದ್ದರು.

