ಕರ್ನಾಟಕ ಸಂಸದರು, ಕೇಂದ್ರ ಸಚಿವರ ಸಭೆ: ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂತ್ರ ಹೆಣೆದ ಸಿದ್ದರಾಮಯ್ಯ
x

ಕರ್ನಾಟಕ ಸಂಸದರು, ಕೇಂದ್ರ ಸಚಿವರ ಸಭೆ: ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂತ್ರ ಹೆಣೆದ ಸಿದ್ದರಾಮಯ್ಯ

ದೆಹಲಿಯ ಕರ್ನಾಟಕ‌ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರ ಸಭೆ ನಡೆಸಿ, ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.


ದೆಹಲಿಯ ಕರ್ನಾಟಕ‌ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರ ಸಭೆ ನಡೆಸಿ, ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರುವ ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.

ಸಭೆಯಲ್ಲಿ ಕೇಂದ್ರ ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಕರ್ನಾಟಕ ಪ್ರತಿನಿಧಿಸುವ ಎಲ್ಲಾ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಿದ್ದರಾಮಯ್ಯ ಸಂಪುಟದ ಸಚಿವರು ಭಾಗವಹಿಸಿದ್ದರು.

ಕರ್ನಾಟಕದ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರು ಸದನದ ಒಳಗೆ ಹಾಗೂ ಹೊರಗೆ ಒಕ್ಕೊರಲಿನಿಂದ ಸೌಹಾರ್ದಯುತವಾಗಿ ದನಿ ಎತ್ತುವ ಅಗತ್ಯವನ್ನು ಸಿದ್ದರಾಮಯ್ಯ ಸಭೆಯಲ್ಲಿ ಹೇಳಿದ್ದಾರೆ. "ನಾವು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ ವೇದಿಕೆಯವರು. ನೆಲ, ಜಲ, ಸಂಪನ್ಮೂಲ, ಭಾಷೆ, ಸಂಸ್ಕೃತಿ, ಐಡೆಂಟಿಟಿ ಇತ್ಯಾದಿ ವಿಚಾರಗಳಿಗೆ ಬಂದಾಗ ನಮಗೆ ಪಕ್ಷಗಳಿಲ್ಲ. ಕರ್ನಾಟಕ ಹಿತಾಸಕ್ತಿಯ ರಕ್ಷಣೆ ನಮ್ಮ ಆಧ್ಯತೆ," ಎಂದು ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು, ಕೇಂದ್ರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳಿಗೆ ಅನುಮೋದನೆ ದೊರಕಿಸಿಕೊಡುವುದು ಹಾಗೂ ಕೆಲವು ಪಾಲಿಸಿ ವಿಷಯಗಳ ಕುರಿತು ಅವರೊಂದಿಗೆ ಚರ್ಚಿಸಲಾಯಿತು.

ಚರ್ಚಿಸಿದ ಪ್ರಮುಖ ವಿಷಯಗಳು:

1. ಬೆಂಗಳೂರು ಮತ್ತು ಸುತ್ತಮುತ್ತಲ ಜನ ವಸತಿ ಪ್ರದೇಶಗಳಿಗೆ ನಿರಾತಂಕವಾಗಿ ಕುಡಿಯುವ ನೀರನ್ನು ಪೂರೈಸಲು ಹಾಗೂ ಆಣೆಕಟ್ಟೆಯಿಂದ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರವು 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಯನ್ನು ರೂಪಿಸಿದೆ. ಈ ಪ್ರಸ್ತಾವನೆಯು 2018 ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಈ ಯೋಜನೆಗೆ ಹಲವು ಹಂತಗಳ ಅನುಮತಿ ಅಗತ್ಯವಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯವು environmental clearance ಅನ್ನು ಶೀಘ್ರವಾಗಿ ಮಾಡಿಕೊಡುವಂತೆ ಒತ್ತಾಯಿಸುವುದು.

2. ಭದ್ರಾ ಯೋಜನೆ ಮೂಲಕ 2.25 ಲಕ್ಷ ಹೆಕ್ಟೇರ್ ಎತ್ತುವರಿ ನೀರಾವರಿ ಮೂಲಕ ವ್ಯವಸಾಯಕ್ಕಾಗಿ / ಕುಡಿಯುವ ನೀರಿಗಾಗಿ ನೀರನ್ನು ಒದಗಿಸುವ ಪ್ರಸ್ತಾವನೆಯು 2020 ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಇದಕ್ಕಾಗಿ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ರೂ.5,300 ಕೋಟಿ ಅನುದಾನವನ್ನು ಘೋಷಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವುದಿಲ್ಲ. ಈ ಅನುದಾನವನ್ನು ಬಿಡುಗಡೆ ಮಾಡಿಸಲು ನೆರವಾಗಬೇಕು. ಜೊತೆಗೆ, ಈ ಯೋಜನೆಯನ್ನು ಕೂಡಲೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುವುದು.

3. ಕಳಸಾ ಬಂಡೂರಿ ನಾಲಾ ಯೋಜನೆಗೆ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ಅವಾರ್ಡ್ 2018 ರಲ್ಲಿ ಘೋಷಿಸಲಾಗಿತ್ತು. ರಾಜ್ಯ ಸರ್ಕಾರದ ವತಿಯಿಂದ ವಿಸ್ತೃತ ಯೋಜನಾ ವರದಿಯನ್ನು (DPR) ಈಗಾಗಲೆ ಒದಗಿಸಲಾಗಿದೆ. ಅದನ್ನು ಅನುಮೋದಿಸಲು ದಿನಾಂಕ: 30.01.2024 ರಂದು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ಸಮಿತಿ ಸಭೆ ಸೇರಿ ದಿನಾಂಕ: 08.01.2024 ರಂದು ವರದಿಯನ್ನು ಸಲ್ಲಿಸಿದೆ. ಈ ವಿಷಯವನ್ನು 77 ನೆ ಸಭೆಯ ಮುಂದೆ ಮಂಡಿಸಲಾಗಿತ್ತು. ಆದರೆ ಸಮಿತಿಯು ಈ ಕುರಿತು ತೀರ್ಮಾನ ಮಾಡಲು ಸಹ ಈ ವಿಷಯವನ್ನು ವಿನಾ ಕಾರಣ ಮುಂದೂಡಲಾಗಿದೆ [ಡೆಫರ್]. ಕಿತ್ತೂರು ಕರ್ನಾಟಕದ ಒಣ ಪ್ರದೇಶಗಳ ಜನರಿಗೆ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಆದ್ದರಿಂದ ಅತಿ ಶೀಘ್ರವಾಗಿ ತೊಡಕುಗಳು ನಿವಾರಣೆಯಾಗುವಂತೆ ನೋಡಿಕೊಳ್ಳುವುದು.

4. ನಮ್ಮ ಮೆಟ್ರೋ ರೈಲು ಯೋಜನೆಯಡಿಯಲ್ಲಿ ಹಂತ-3 ರ ಕಾಮಗಾರಿಗೆ ರೂ.15611 ಕೋಟಿಗಳ ಪ್ರಸ್ತಾವನೆಯನ್ನು ಕೇಂದ್ರದ ವಸತಿ ಮತ್ತು ನಗರಾಭಿವೃಧ್ಧಿ ಮಂತ್ರಾಲಯಕ್ಕೆ ದಿನಾಂಕ:03.08.2023 ರಂದು ಸಲ್ಲಿಸಲಾಗಿದೆ. ಹಾಗೂ ಡಿಪಿಆರ್ ಅನ್ನೂ ಸಹ ಸಲ್ಲಿಸಲಾಗಿದೆ. ಈ ಯೋಜನೆಯ ಕುರಿತು ಸಾರ್ವಜನಿಕ ಹೂಡಿಕೆಗಳ ಮಂಡಳಿಯು ದಿನಾಂಕ6-5.2024 ರಂದು ಸಭೆ ನಡೆಸಿದೆ. 17-5-2024 ರಂದು ಶಿಫಾರಸ್ಸನ್ನು ಸಹ ಮಾಡಲಾಗಿದೆ. ಪಿಐಬಿಯು ಕೇಳಿದ್ದ ಎಲ್ಲ ಮಾಹಿತಿಯನ್ನು ಒದಗಿಸಲಾಗಿದೆ. ಈ ಪ್ರಸ್ತಾವನೆಯು ಸದ್ಯ ಕೇಂದ್ರ ಸರ್ಕಾರದ ಮುಂದೆ ಇದೆ. ಈ ಪ್ರಸ್ತಾವನೆಯನ್ನು ಶೀಘ್ರವಾಗಿ ಅನುಮೋದನೆ ಮಾಡಿಸುವುದು.

5. 15ನೆ ಹಣಕಾಸು ಆಯೋಗವು ಎರಡು ವರದಿಗಳನ್ನು ನೀಡಿದೆ. ಎರಡೂ ವರದಿಗಳೂ ಸಹ ಅಂತಿಮ ವರದಿಗಳೆ ಮೊದಲನೆಯದು 2020-21 ವರ್ಷಕ್ಕೆ ಸಂಬಂಧಿಸಿದ್ದು ಎರಡನೆಯದು 2021 ರಿಂದ 2026 ವರ್ಷಗಳಿಗೆ ಸಂಬಂಧಿಸಿದ್ದು. ಮೊದಲ ವರದಿಯಲ್ಲಿ 5,495 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ಕೊಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಎರಡನೆಯ ವರದಿಯಲ್ಲಿ ಫೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ರೂ ಮತ್ತು ಕೆರೆ ಹಾಗೂ ಜಲಮೂಲಗಳ ಅಭಿವೃದ್ಧಿಗೆ 3,000 ಕೋಟಿ ಸೇರಿ ಒಟ್ಟಿಗೆ 11,495 ಕೋಟಿ ರೂಪಾಯಿಗಳನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ. ಈ ಅನುದಾನ / ವಿಶೇಷ ಅನುದಾನ ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ.

6. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶಗಳಲ್ಲೊಂದಾದ ಮಹಾತ್ವಾಕಾಂಕ್ಷೆ ಜಿಲ್ಲೆಯಾದ ರಾಯಚೂರಿನಲ್ಲಿ All India Institute of Medical Sciences (AIIMS) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ವಿವಿಧ ದಿನಾಂಕಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದಿಂದ ತ್ವರಿತ ಅನುಮೋದನೆ ನೀಡಲು ಕೋರಲಾಗಿದೆ.

7. ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು IIT ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದೇವೆ. ಇದು ಈಡೇರಿಸಬೇಕಾಗಿದೆ.

8. ಉಡಾನ್ ಯೋಜನೆಯಡಿ ‘SEA PLANE’ ಕಾರ್ಯಕ್ರಮವನ್ನು ಮಲ್ಪೆ, ಬೈಂದೂರು, ಮಂಗಳೂರು, ಕಾಳಿ ನದಿ ಮುಂತಾದ ಕಡೆ ಪ್ರಾರಂಭಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಗೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳು ಸದರಿ ಇಲಾಖೆಯಲ್ಲಿ ಬಾಕಿ ಇದ್ದು ಅವುಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಿ ಅನುಮೋದನೆ ಕೊಡಿಸುವುದು.

9. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು Air Cargo ಕಾಂಪ್ಲೆಕ್ಸ್ ಆಗಿ ಪರಿಗಣಿಸಲು ಸಿವಿಲ್ ಏವಿಯೇಷನ್ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ದಿನಾಂಕ:05.06.2024 ರಂದು ಕಳುಹಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಹೆಚ್ಚು ರಫ್ತು ಮತ್ತು ಆರ್ಥಿಕ ಬೆಳವಣಿಗೆ ಸುಧಾರಿಸುವುದು. ಆದ್ದರಿಂದ ಈ ಪ್ರಸ್ತಾವನೆಗೆ ಅನುಮೋದನೆ ದೊರೆಯುವಂತೆ ನೋಡಿಕೊಳ್ಳುವುದು.

10. ಪಶ್ಚಿಮ ಘಟ್ಟಗಳ ಜನರ ರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಂತೆ ನಿರ್ಧರಿಸಿ ಪ್ರಸ್ತಾವನೆಯನ್ನು ಕಳಿಸಲಾಗಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಅಂಗೀಕರಿಸಿ ಸೂಕ್ತ ತೀರ್ಮಾನಗಳನ್ನು ಹೊರಡಿಸಬೇಕಾಗಿರುತ್ತದೆ.

11. ರಾಜ್ಯವು ರೈಲ್ವೆ ನೆಟ್‌ವರ್ಕಿನಲ್ಲಿ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಬಹಳ ಹಿಂದುಳಿದಿದೆ. ಹಾಗಾಗಿ ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ.

12. ಗ್ರಾಮ ಸಡಕ್ ಯೋಜನೆಯಲ್ಲಿ ದೇಶದ ಅನೇಕ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯಕ್ಕೆ ಕಡಿಮೆ ಪ್ರಮಾಣದ ರಸ್ತೆಗಳನ್ನು ಮಂಜೂರು ಮಾಡಲಾಗಿದೆ. ಹಾಗಾಗಿ ತಾವುಗಳು ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದು ಹೆಚ್ಚು ಅನುದಾನಗಳನ್ನು ಒದಗಿಸಿಕೊಡಬೇಕು.

13. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಬೆಳಗಾವಿಯಲ್ಲಿ 70 ಕಾಮಗಾರಿಗಳು, ಯಾದಗಿರಿಯಲ್ಲಿ 70 ಕಾಮಗಾರಿಗಳು, ಕಲಬುರ್ಗಿಯಲ್ಲಿ 106 ಕಾಮಗಾರಿಗಳು, ಧಾರವಾಡದಲ್ಲಿ 50 ಕಾಮಗಾರಿಗಳು, ಒಟ್ಟು 296 ಕಾಮಗಾರಿಗಳ ಅಂದಾಜು ಮೊತ್ತ ರೂ.770 ಕೋಟಿಗಳು ಬಿಡುಗಡೆಯಾಗಬೇಕಾಗಿರುತ್ತದೆ. ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದಿಂದ ತ್ವರಿತ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುವುದು.

14. ದೇಶದಲ್ಲಿ 12 ಅತಿ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಇದ್ದು, ಬರವನ್ನು ತಡೆಗಟ್ಟುವ ಸಲುವಾಗಿ National Disaster Risk Management Fund (NDRMF) ಅಡಿಯಲ್ಲಿ ರೂ.100 ಕೋಟಿಗಳ ಅನುದಾನವನ್ನು ಒದಗಿಸುವಂತೆ ಕೋರಿ ದಿನಾಂಕ: 30.10.2023 ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ನೆರೆ ಸಂಭವಿಸಿದ್ದು, ಅವುಗಳನ್ನು ತಡೆಗಟ್ಟಲು 15ನೇ ಹಣಕಾಸು ಆಯೋಗವು ರೂ.250 ಕೋಟಿಗಳ ಅನುದಾನವನ್ನು ಓಆಖಒಈ ಅಡಿಯಲ್ಲಿ ಮೀಸಲಿಟ್ಟಿದ್ದು, ಈ ಅನುದಾನವು ಇನ್ನೂ ಬಿಡಗಡೆಯಾಗಿರುವುದಿಲ್ಲ. ಆದ್ದರಿಂದ ತುರ್ತಾಗಿ ಈ ಅನುದಾನ ಬಿಡುಗಡೆಯಾಗುವಂತೆ ನೋಡಿಕೊಳ್ಳುವುದು.

15. ಕೇಂದ್ರದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಮನವಿಯಂತೆ ದಿನಾಂಕ:20.07.2023 ರಂದು ರಾಜ್ಯ ಸರ್ಕಾರದ ಶಿರಾಡಿ ಘಾಟ್‌ನಲ್ಲಿ 30 ಕಿ.ಮೀ.ನ ಎರಡು ಲೇನ್ ರಸ್ತೆಯನ್ನಾಗಿ ಪರಿವರ್ತಿಸಲು ರೂ.2,580 ಕೋಟಿ ಪ್ರಸ್ತಾವನೆಯನ್ನು ಓಊಂI ರವರಿಗೆ ದಿನಾಂಕ: 03.08.2023 ರಂದು ಸಲ್ಲಿಸಲಾಗಿದ್ದು, ಇದನ್ನು ತ್ವರಿತಗೊಳಿಸಲು ಅನುಮೋದನೆ ನೀಡಿದಲ್ಲಿ ರಾಜ್ಯದ ವಾಣಿಜ್ಯ ಚಟುವಟಿಕೆಗಳನ್ನು ಮಂಗಳೂರು ಬಂದರಿಗೆ ರಫ್ತು ಮಾಡಲು ಉಪಯೋಗವಾಗುತ್ತದೆ. ಇದರ ಜೊತೆಗೆ ರಾಜ್ಯದಿಂದ [ದಿನಾಂಕ 28.07.2017 ಮತ್ತು 7.3.2018] ಒಟ್ಟು 38 ಹೆದ್ದಾರಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳಿಸಲಾಗಿದೆ. ಈ ಪ್ರಸ್ತಾವನೆಗಳಲ್ಲಿ ಒಟ್ಟಾರೆ 4,807 ಕಿ.ಮೀ. ರಸ್ತೆ ಒಳಗೊಂಡಿದೆ. ಈ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಇವೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸಿಕೊಡುವುದು.

16. MGNREGA ಅಡಿಯಲ್ಲಿ ಕೆಲವು ಅಗತ್ಯವಿರುವ ಶಾಲಾ ಕಟ್ಟಡ, ತರಗತಿ ಕೊಠಡಿ, ಗ್ರಂಥಾಲಯ, ಇತರೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಉಪಯೋಗಿಸಲು ಸುಮಾರು ಪ್ರಸ್ತಾವನೆಗಳನ್ನು ನೀಡಲಾಗಿದೆ. ಇದರಿಂದ ಗ್ರಾಮ ಮಟ್ಟದಲ್ಲಿ ಹೆಚ್ಚು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಮಾಡಲು ಕೇಂದ್ರದ ಭೂ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಾಲಯವನ್ನು ಕೋರಲಾಗಿದೆ.

17. ಇದೇ ರೀತಿ 207 ಸಬ್-ರಿಜಿಸ್ಟ್ರಾರ್ ಕಛೇರಿಗಳನ್ನು ಗಣಕೀಕರಣಗೊಳಿಸಲು, ಡಿಜಿಟಲ್ ಇಂಡಿಯಾ ಮಾಡ್ರನೈಸೇಷನ್ ಕಾರ್ಯಕ್ರಮದಡಿಯಲ್ಲಿ ರೂ.365 ಕೋಟಿಗಳ ಅನುದಾನದ ಪ್ರಸ್ತಾವನೆಯನ್ನು ದಿನಾಂಕ:07.06.2024 ರಂದು ಕಳುಹಿಸಲಾಗಿದೆ. ಇದರಿಂದ ಕಂದಾಯ ಇಲಾಖೆಯ ಮೂಲಕ ಉತ್ತಮ ಹಾಗೂ ನುರಿತ ಆಡಳಿತವನ್ನು ನೀಡಲು ಸಾಧ್ಯವಾಗುವುದು. ಈ ಪ್ರಸ್ತಾವನೆಯು ಸಹ ಭೂಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿದೆ. ಇವುಗಳು ತುರ್ತಾಗಿ ಅನುಮೋದನೆಯಾಗುವಂತೆ ನೋಡಿಕೊಳ್ಳುವುದು.

18. ಯುವಜನ ಸಬಲೀಕರಣ ಇಲಾಖೆಯಡಿಯಲ್ಲಿನ ಖೇಲೊ ಇಂಡಿಯಾ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 16 ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆಗಳು ಅನುಮೋದನೆಗಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇವೆ. ಖೇಲೊ ಇಂಡಿಯಾ ಯೋಜನೆ [ ಅಕ್ಟೋಬರ್-2017 ] ಪ್ರಾರಂಭವಾದಾಗಿದ ಅತ್ಯಂತ ಕಡಿಮೆ ಅನುದಾನ ಪಡೆದ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕವು ಅನೇಕ ಹೆಸರಾಂತ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಆದ್ದರಿಂದ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಈ 16 ಕಾರ್ಯಕ್ರಮಗಳು ಅನುಮೋದನೆಯಾಗುವಂತೆ ನೋಡಿಕೊಳ್ಳಬೇಕು.

19. ಕೇಂದ್ರದ ಆಹಾರ ಮತ್ತು ನಾಗರೀಕ ಸರಬರಾಜು ಮಂತ್ರಾಲಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಒಟ್ಟು ರೂ.584 ಕೋಟಿ ಅನುದಾನ ಬಿಡುಗಡೆಯಾಗಬೇಕಾಗಿದೆ ಹಾಗೂ ರಾಜ್ಯ ಸರ್ಕಾರಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಲಭ್ಯವಿದ್ದು, ಪ್ರಸ್ತುತ 30,000 ಮೆಟ್ರಿಕ್ ಟನ್ಗಳನ್ನು ಹೆಚ್ಚುವರಿಯಾಗಿ ನೀಡಲು ಕೋರಲಾಗಿದೆ.

20. ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನರಿಗೆ ಮನೆ ಕೊಡುವ ಪ್ರಸ್ತಾವನೆಯು ದಿನಾಂಕ:23.3.2023 ರಿಂದ ಬಾಕಿಯಾಗಿರುತ್ತದೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸಿಕೊಡುವುದು. ಇದೇ ಸಚಿವಾಲಯದಲ್ಲಿ ಹೊಸ ಪೋಸ್ಟ್ ಮೆಟ್ರಿಕ್ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯಗಳಿಗೆ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆಯನ್ನು ದಿನಾಂಕ:06-06-2023 ರಂದು ಕಳಿಸಲಾಗಿದೆ.

21. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವ್ಯಾಪ್ತಿಯಲ್ಲಿ ವಸತಿ, ವಸತಿ ನಿಲಯ ಮುಂತಾದ 5 ಪ್ರಸ್ತಾವನೆಗಳು 2023 ರ ಜೂನ್ ತಿಂಗಳಿAದ ಬಾಕಿಯಾಗಿವೆ.

22. ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ 52 ಯೋಜನೆಗಳನ್ನು ಸಲ್ಲಿಸಲಾಗಿತ್ತು. ಇವುಗಳ ಒಟ್ಟು ಮೊತ್ತ 659 ಕೋಟಿ ರೂ.ಗಳಷ್ಟಾಗಿರುತ್ತದೆ. 32 ವಸತಿ ಶಾಲೆಗಳು, 11 ವಸತಿ ನಿಲಯಗಳು, 4 ಡೇ ಸ್ಕೂಲ್‌ಗಳು, 4 ಕೌಶಲ್ಯ ಕೇಂದ್ರಗಳು ಸೇರಿವೆ. ಇವುಗಳಲ್ಲಿ 12 ಯೋಜನೆಗಳು ಅನುಮೋದನೆಯಾಗಿವೆ. ಆದರೆ ಹಣ ಬಿಡುಗಡೆಯಾಗಿಲ್ಲ. ಉಳಿದ 40 ಯೋಜನೆಗಳು ಬಾಕಿ ಉಳಿದಿವೆ.

23. MSP ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮರುಪಾವತಿಗೆ ಕಳುಹಿಸಿರುವ ದಾಖಲೆಗಳ ಮೊತ್ತವು ರೂ.1,027.82 ಕೋಟಿಗಳಾಗಿರುತ್ತದೆ. ಅದನ್ನು ಬಿಡುಗಡೆ ಮಾಡಲು ಕೋರಲಾಗಿದೆ.

24. ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮಾಜಳಿಯಲ್ಲಿ ಹೊಸದಾಗಿ ಮೀನುಗಾರಿಕಾ ಬಂದರನ್ನು ನಿರ್ಮಿಸುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಮೀನುಗಾರಿಕಾ ಬಂದರನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 2023 ರಿಂದ ಈ ವಿಷಯ ಬಾಕಿಯಾಗಿದೆ.

25. 15ನೆ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭರಿಸಲಾಗದ ನಷ್ಟವುಂಟಾಗಿದೆ. ಮೊದಲಿನ ಹಣಕಾಸು ಆಯೋಗಗಳು 1971 ರ ಜನಗಣತಿ ವರದಿಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತಿದ್ದವು. ಆದರೆ 15 ನೆ ಹಣಕಾಸು ಆಯೋಗವು 2011 ರ ಜನಗಣತಿಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚಿಕೆ ಮಾಡಿದೆ. ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಕಾರಣದಿಂದಾಗಿಯೆ ನಮ್ಮ ರಾಜ್ಯಕ್ಕೆ ಸಮಸ್ಯೆಯಾಗಿದೆ. ಈ ಕಾರಣದಿಂದ ನಮಗೆ 2017-18 ನೆ ಸಾಲಿನ ಬಜೆಟ್‌ಗೆ ಹೋಲಿಸಿದರೆ ಬೃಹತ್ ಪ್ರಮಾಣದಲ್ಲಿ [ಅರ್ಧಕ್ಕರ್ಧ] ತೆರಿಗೆ ಹಂಚಿಕೆ ಹಾಗೂ ಇನ್ನಿತರೆ ಸಂಪನ್ಮೂಲಗಳ ಹಂಚಿಕೆಯು ಕಡಿಮೆಯಾಗಿದೆ. ಈಗ 16 ಹಣಕಾಸು ಆಯೋಗವು ರಚನೆಯಾಗಿದೆ. 16 ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯವಾಗದಂತೆ ತಾವುಗಳು ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇವೆ.

26. ಈ ಎಲ್ಲಾ ಬೇಡಿಕೆ, ಯೋಜನೆ, ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ ಮಾಡುತ್ತೇನೆ. ಈ ಮನವಿಗಾಗಿ ಈ ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎಂದು ಮನವಿ ಮಾಡಿದ್ದೇನೆ.

27. ಮುಂದಿನ ದಿನಗಳಲ್ಲಿ ಸಂಸತ್ತಿನ ಒಳಗೆ ಹಾಗೂ ಹೊರಗೆ ರಾಜ್ಯದ ಸಂಸದರು ಇನ್ನಷ್ಟು ಪರಿಣಾಮಕಾರಿಯಾಗಿ ದನಿ ಎತ್ತಿ ರಾಜ್ಯದ ಹಿತ ಕಾಪಾಡುವರು ಎಂಬ ಆಶಾ ಭಾವನೆಯೊಂದಿಗೆ ಈ ಎಲ್ಲ ವಿಷಯಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ಆ ವಿಶ್ವಾಸವೂ ನನಗಿದೆ.

Read More
Next Story