
ಪಕ್ಷ ಸದಸ್ಯರ ಗೈರು; ನಾಲ್ಕು ಮತಗಳಿಂದ ಕೈಸುಟ್ಟುಕೊಂಡ ಕಾಂಗ್ರೆಸ್; ವಿಧೇಯಕಕ್ಕೆ ಸೋಲು
ವಿಧೇಯಕದ ಪರವಾಗಿ 23 ಮತಗಳು ಚಲಾವಣೆಯಾದರೆ, ವಿಧೇಯಕ ವಿರುದ್ಧವಾಗಿ 26 ಮತಗಳು ಚಲಾವಣೆಯಾದವು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೆಲ್ಲರೂ ವಿಧೇಯಕದ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ ಸಹಕಾರ ಸೌಹಾರ್ದ(ತಿದ್ದುಪಡಿ ) ವಿಧೇಯಕಕ್ಕೆ ಸೋಲಾಯಿತು.
ಸಹಕಾರ ವಲಯದಲ್ಲಿ ದುರ್ವಿನಿಯೋಗ, ವಂಚನೆ ಪ್ರಕರಣ ತಡೆಯುವ, ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಕಾಪಾಡುವ ಸಲುವಾಗಿ ರಾಜ್ಯ ಸರ್ಕಾರ ಮಂಡಿಸಿದ್ದ ʼಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕʼ ವಿಧಾನ ಪರಿಷತ್‌ನಲ್ಲಿ ತಿರಸ್ಕೃತವಾಗಿದೆ.
ವಿಧಾನಸಭೆಯಲ್ಲಿ ಅಂಗೀಕಾರ ಪಡೆದಿದ್ದ ವಿಧೇಯಕವನ್ನು ಬುಧವಾರ ಪರಿಷತ್‌ನಲ್ಲಿ ಮಂಡಿಸಲಾಯಿತು. ಆದರೆ, ವಿಧೇಯಕಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಮತಕ್ಕೆ ಹಾಕುವಂತೆ ಪಟ್ಟು ಹಿಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕವನ್ನು ಮತಕ್ಕೆ ಹಾಕಿದರು. ಮತ ಚಲಾಯಿಸಲು ಸದಸ್ಯರಿಗೆ ಎರಡು ನಿಮಿಷಗಳ ಕಾಲಾವಕಾಶ ನೀಡಿದರು. ಈ ವೇಳೆ ವಿಧೇಯಕದ ಪರವಾಗಿ 23 ಮತಗಳು ಚಲಾವಣೆಯಾದರೆ, ವಿಧೇಯಕ ವಿರುದ್ಧವಾಗಿ 26 ಮತಗಳು ಚಲಾವಣೆಯಾದವು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೆಲ್ಲರೂ ವಿಧೇಯಕದ ವಿರುದ್ಧವಾಗಿ ಮತ ಚಲಾಯಿಸಿದ್ದರಿಂದ ಸಹಕಾರ ಸೌಹಾರ್ದ(ತಿದ್ದುಪಡಿ ) ವಿಧೇಯಕಕ್ಕೆ ಸೋಲಾಯಿತು. ಪರಿಷತ್‌ನಲ್ಲಿ ಇದರಿಂದ ರಾಜ್ಯ ಸರ್ಕಾರ ಭಾರೀ ಮುಜುಗರ ಎದುರಿಸಿತು.
ವಿಧಾನ ಪರಿಷತ್ ಸಂಖ್ಯಾಬಲ ಎಷ್ಟು?
ಪರಿಷತ್‌ನಲ್ಲಿ75 ಸಂಖ್ಯಾಬಲದ ಪೈಕಿ ಆಡಳಿತರೂಢ ಕಾಂಗ್ರೆಸ್ 33, ಪ್ರತಿಪಕ್ಷ ಬಿಜೆಪಿ 29, ಜೆಡಿಎಸ್ 7, ಪಕ್ಷೇತರರು 1 ಮತ್ತು ಸಭಾಪತಿ 1 ಸ್ಥಾನವಿತ್ತು. ಆದರೆ, ಇಂದು ಪರಿಷತ್ ಕಲಾಪಕ್ಕೆ ಹಾಜರಿದ್ದವರಲ್ಲಿ 23ಮಂದಿ ಕಾಂಗ್ರೆಸ್ ಸದಸ್ಯರಿದ್ದರೆ, 26 ಮಂದಿ ಬಿಜೆಪಿ-ಜೆಡಿಎಸ್ ಸದಸ್ಯರಿದ್ದರು.
ಪರಿಷತ್‌ನಲ್ಲಿ ಒಟ್ಟು ನಾಲ್ಕು ಸ್ಥಾನಗಳು ತೆರವಾಗಿವೆ. ಕಾಂಗ್ರೆಸ್ ಸರ್ಕಾರ ನಾಲ್ಕೂ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಕಾಂಗ್ರೆಸ್ ಬಲ 37ಕ್ಕೆ ಏರಲಿದೆ. ಆಗ ಯಾವುದೇ ಮಸೂದೆಗಳನ್ನು ಸುಲಭವಾಗಿ ಅಂಗೀಕರಿಸಬಹುದಾಗಿದೆ. ಆದರೆ, ಈಗ ವಿಪಕ್ಷಗಳ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಮಸೂದೆಗಳಿಗೆ ಅಂಗೀಕಾರ ಪಡೆಯುವುದು ಕಷ್ಟಸಾಧ್ಯವಾಗಿದೆ.
ಕೆಲ ದಿನಗಳ ಹಿಂದೆ ಪರಿಷತ್ ಸದಸ್ಯರ ನೇಮಕಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರವು ಆರತಿ ಕೃಷ್ಣ, ರಮೇಶ್ ಬಾಬು, ದಿನೇಶ್ ಅಮೀನ್‌ಮಟ್ಟು ಹಾಗೂ ಡಿ.ಜಿ. ಸಾಗರ್ ಅವರನ್ನು ಅಂತಿಮಗೊಳಿಸಿ, ರಾಜ್ಯಪಾಲರ ಅನುಮೋದನೆಗೂ ಕಳುಹಿಸಿದ್ದರು. ಅಂತಿಮವಾಗಿ ಸರ್ಕಾರವೇ ಪಟ್ಟಿಯನ್ನು ತಡೆಹಿಡಿದಿತ್ತು.
ಏನಿದು ವಿಧೇಯಕ?
ಸಹಕಾರ ವಲಯದಲ್ಲಿ ದುರ್ವಿನಿಯೋಗ, ವಂಚನೆ ಪ್ರಕರಣ ತಡೆಯುವ ಸಲುವಾಗಿ 2025 ನೇ ಕರ್ನಾಟಕ ಸಹಕಾರ ಸೌಹಾರ್ದ (ತಿದ್ದುಪಡಿ )ವಿಧೇಯಕ ಮಂಡಿಸಲಾಗಿತ್ತು. 2024 ನೇ ಸಾಲಿನ ವಿಧೇಯಕದಲ್ಲಿ ಕೆಲವಾರು ಬದಲಾವಣೆಗಳನ್ನು ತಂದು ಹೊಸ ವಿಧೇಯಕ ಮಂಡಿಸಲಾಗಿತ್ತು. ಬುಧವಾರ ವಿಧಾನಸಭೆಯಲ್ಲಿ ಹಳೆಯ ವಿಧೇಯಕವನ್ನು ಹಿಂಪಡೆಯುವ ಪ್ರಸ್ತಾಪ ಮಂಡಿಸಿ, ಅಂಗೀಕಾರ ಪಡೆಯಲಾಗಿತ್ತು.
ತಿದ್ದುಪಡಿ ವಿಧೇಯಕದಲ್ಲಿ ಒಟ್ಟು ಠೇವಣಿಯ ಕನಿಷ್ಠ ಶೇ.20 ರಷ್ಟು ಮೊತ್ತವನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯವಾಗಿ ಉಳಿಸುವುದು ಕಡ್ಡಾಯ ಮಾಡಲಾಗಿತ್ತು. ಸಹಕಾರಿಗಳಿಗೆ ತಕ್ಷಣದ ಬಳಕೆಗಾಗಿ ಅಗತ್ಯವಿಲ್ಲದ ನಿಧಿಗಳನ್ನು ಅದರ ವ್ಯವಹಾರಗಳ ಹೊರಗೆ ಹೂಡಿಕೆ ಮಾಡುವುದಕ್ಕೆ ನಿಯಂತ್ರಣ ಹೇರಲಾಗಿತ್ತು. ಸಹಕಾರಿ ಸಂಸ್ಥೆಗಳಲ್ಲಿ ಮೀಸಲಿರಿಸಿದ ಸ್ಥಾನಗಳಿಗೆ ಮತ ಚಲಾಯಿಸುವ ವಿಧಾನವನ್ನೂ ನಿಯಮಿತಗೊಳಿಸುವ ಪ್ರಸ್ತಾಪ ಮಾಡಲಾಗಿತ್ತು.
ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸ್ಥಾನಗಳ ಪುನರ್‌ಪರಿಶೀಲನೆ, ದುರ್ವಿನಿಯೋಗ ನಿಯಂತ್ರಿಸಲು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಪ್ರತಿ ವರ್ಷದ ಕೊನೆಯಲ್ಲಿ ತಮ್ಮ ಆಸ್ತಿ ಮತ್ತು ಹೊಣೆಗಾರಿಕೆ ಘೋಷಣೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು.
ವಂಚನೆಯಲ್ಲಿ ಭಾಗಿಯಾದರೆ ಕ್ರಿಮಿನಲ್ ಪ್ರಕರಣ
ಚುನಾವಣಾ ಪ್ರಕ್ರಿಯೆಯಲ್ಲಿ ಅನಗತ್ಯ ವೆಚ್ಚ ಮತ್ತು ಸಮಯ ವ್ಯಯ ತಪ್ಪಿಸುವ ಜೊತೆಗೆ ಲೆಕ್ಕಪರಿಶೋಧನೆಯ ಗುಣಮಟ್ಟ ಖಚಿತಪಡಿಸಲು ವಿಧೇಯಕದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸಹಕಾರ ಕ್ಷೇತ್ರದ ವ್ಯವಹಾರಗಳಲ್ಲಿ ವಂಚನೆ ಅಥವಾ ದುರ್ವಿನಿಯೋಗದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ವ್ಯವಸ್ಥೆಯನ್ನೂ ತಿದ್ದುಪಡಿಯಲ್ಲಿ ಸೇರಿಸಲಾಗಿತ್ತು.
2025 ನೇ ಸಾಲಿನ ತಿದ್ದುಪಡಿ ವಿಧೇಯಕದಿಂದ ಸಹಕಾರಿ ವಲಯದಲ್ಲಿ ಶಿಸ್ತು, ಜನರಲ್ಲಿ ವಿಶ್ವಾಸ ಬಲಪಡಿಸುವುದು ಹಾಗೂ ಪಾರದರ್ಶಕತೆ ಖಾತ್ರಿಪಡಿಸಲು ಸಹಾಯಕವಾಗಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದರು.