ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರದ ಜನರಿಂದ ತಿರಸ್ಕಾರದ ಭಯ: ಆರ್ ಅಶೋಕ್
x

ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರದ ಜನರಿಂದ ತಿರಸ್ಕಾರದ ಭಯ: ಆರ್ ಅಶೋಕ್


ʼʼಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಸ್ವಕ್ಷೇತ್ರದ ಜನರಿಂದ ತಿರಸ್ಕಾರದ ಭಯ ಕಾಡುತ್ತಿದೆ. ಹೀಗಾಗಿ ವರುಣಾದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಕುರ್ಚಿ ಉಳಿಸುವಂತೆ ಜನರ ಬಳಿ ಅಂಗಲಾಚುತ್ತಿದ್ದಾರೆʼʼ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ʻʻ2018ರಲ್ಲಿ ಸೋಲಿನ ಭಯದಿಂದ ತಮ್ಮ ಸ್ವಕ್ಷೇತ್ರ ವರುಣಾದಿಂದ ಬಾದಾಮಿಗೆ ಪಲಾಯನ ಮಾಡಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಈಗ ಮತ್ತೊಮ್ಮೆ ಸ್ವಕ್ಷೇತ್ರದ ಜನರಿಂದ ತಿರಸ್ಕಾರದ ಭಯ ಕಾಡುತ್ತಿದೆʼʼ ಎಂದು ಹೇಳಿದ್ದಾರೆ.

ʻʻಗ್ಯಾರಂಟಿಗಳು ಜನರಿಗೆ ತೃಪ್ತಿ ತಂದಿಲ್ಲ, ಬಿಟ್ಟಿ ಭಾಗ್ಯಗಳು ತಮ್ಮ ಕೈ ಹಿಡಿಯುವುದಿಲ್ಲ ಎಂದು ಗ್ಯಾರಂಟಿ ಆಗುತ್ತಿದ್ದಂತೆ ಸಿದ್ದರಾಮಯ್ಯನವರು ವರುಣಾದಲ್ಲಿ ಹೆಚ್ಚಿನ ಲೀಡ್ ಕೊಟ್ಟು ಕುರ್ಚಿ ಉಳಿಸುವಂತೆ ಜನರ ಬಳಿ ಅಂಗಲಾಚುತ್ತಿದ್ದಾರೆ. ತವರು ಕ್ಷೇತ್ರ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲಾದರೆ ಕುರ್ಚಿ ಬಿಟ್ಟು ಇಳಿಯಬೇಕಾತ್ತದೆ ಎಂದು ಸಿಕ್ಕಸಿಕ್ಕ ಸಣ್ಣ ಪುಟ್ಟ ವಿಪಕ್ಷಗಳ ಮುಖಂಡರನ್ನೆಲ್ಲ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಕನಿಷ್ಠ ಪಕ್ಷ ಠೇವಣಿ ಉಳಿಸಿಕೊಳ್ಳಬೇಕು, ಸೋಲಿನ ಅಂತರವಾದರೂ ಕಡಿಮೆ ಮಾಡಿಕೊಳ್ಳಬೇಕು ಅಂತ ಸಿದ್ದರಾಮಯ್ಯನವರು ಮೂರು ದಿನ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದಾರೆ” ಎಂದು ಟೀಕಿಸಿದ್ದಾರೆ.

ʻʻಸಿಎಂ ಸಿದ್ದರಾಮಯ್ಯನವರೇ, ನಿನ್ನೆ ವರುಣಾದಲ್ಲಿ ತಮ್ಮ ಬುರುಡೆ ಭಾಷಣ ಕೇಳಲು ಆಸಕ್ತಿ ಇಲ್ಲದೆ ಜಾಗ ಖಾಲಿ ಮಾಡಿದ ಜನರ ನಡೆ ನೋಡಿದ ಮೇಲೆ ಜನರ ಮನಸ್ಸಿನಲ್ಲಿ ಕೆಲವು ಪ್ರಶ್ನೆಗಳು ಮೂಡುತ್ತಿವೆ. ನಿಮ್ಮ ಗ್ಯಾರಂಟಿಗಳು ಜನರನ್ನು ತಲುಪಿದೆ ಎನ್ನುವ ವಿಶ್ವಾಸವಿಲ್ಲವೇ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ʻʻಮೈಸೂರಿನಲ್ಲಿ ಹೀನಾಯವಾಗಿ ಸೋಲಿಸಿ ನಿಮ್ಮನ್ನ ಕುರ್ಚಿಯಿಂದ ಇಳಿಸಬೇಕು ಎನ್ನುವ ಹುನ್ನಾರದಿಂದ ಸ್ವಪಕ್ಷದವರೇ ಒಳೇಟು ನೀಡುವ ಭಯ ಕಾಡುತ್ತಿದೆಯೇ? ವರುಣಾದಲ್ಲಿ 60,000 ಲೀಡ್ ಬರದಿದ್ದರೆ ಕುರ್ಚಿಯಿಂದ ಇಳಿಯಬೇಕು ಎಂದು ಹೈಕಮಾಂಡ್ ಈಗಾಗಲೇ ಫರ್ಮಾನು ಹೊರಡಿಸಿದೆಯೇ?ʼʼ ಎಂದು ಆರ್ ಅಶೋಕ್ ಲೇವಡಿ ಮಾಡಿದ್ದಾರೆ.

Read More
Next Story