
ಬಿಜೆಪಿ ಚಾರ್ಜ್ ಶೀಟ್: ಕಾನೂನು ಸಮರಕ್ಕೆ ಮುಂದಾದ ಸಿದ್ದರಾಮಯ್ಯ ಸರ್ಕಾರ
ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ 8 ಪುಟಗಳ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ಸರ್ಕಾರದ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಎಂದು ಟೀಕಿಸಿತ್ತು.
ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಎರಡು ವರ್ಷ ಸಾಧನೆಗಳ ಸಮಾವೇಶ ಮಾಡಿದ ಸಂದರ್ಭದಲ್ಲಿ "ರಾಜ್ಯ ಸರ್ಕಾರದ 2 ವರ್ಷಗಳ ವೈಫಲ್ಯತೆ ಬಗ್ಗೆ ಆರೋಪ ಪಟ್ಟಿ" ಎಂಬ ಶೀರ್ಷಿಕೆಯಡಿಯಲ್ಲಿ ಬಿಜೆಪಿ ಹೊರಡಿಸಿರುವ ಪ್ರಕಟಣೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ.
"ದೃಷ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು ಸಂಗತಿಗಳನ್ನು ಅಳವಡಿಸಿಕೊಂಡು ಕರ್ನಾಟಕ ಭಾರತೀಯ ಜನತಾ ಪಕ್ಷವು ಸುಳ್ಳು ಪ್ರಚಾರ ಮಾಡಿದೆ," ಎಂದು ಅರೋಪಿಸಿ ಸರ್ಕಾರ, ಬೆಂಗಳೂರಿನ 42ನೇ ಸಿಎಂಎಂ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ.
ಈ ಸಂಬಂಧ ಸರ್ಕಾರದ ಸಿಬ್ಬಂದಿ ಮತ್ತು ಅಡಳಿತ ಸುಧಾರಣಾ ಇಲಾಖೆ ದೂರು ದಾಖಲಿಸಲು ಮುಂದಾಗಿದೆ. ಸರ್ಕಾರಿ ಅಭಿಯೋಜಕರಾಗಿ ಬಿ.ಎಸ್. ಪಾಟೀಲ್ ಮತ್ತು ಶೈಲಜಾ ನಾಯಕ್ಇ ಅವರನ್ನು ಪ್ರಕರಣ ನಿರ್ವಹಿಸಲು ನೇಮಿಸಲೂ ಸರ್ಕಾರ ಆದೇಶಿಸಿದೆ. ಉಪ ಕಾರ್ಯದರ್ಶಿ ಕುಮಟಾ ಪ್ರಕಾಶ ಅವರನ್ನು ಈ ಪ್ರಕರಣದಲ್ಲಿ ಎಲ್ಲಾ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಭಿಯೋಜಕರಿಗೆ ಸಂಪೂರ್ಣ ದಾಖಲೆ, ಮಾಹಿತಿ ನೀಡಲು ಸೂಚಿಸಲಾಗಿದೆ.
ಈ ಮೂಲಕ ಸರ್ಕಾರ ಬಿಜೆಪಿ ಆರೋಪಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಂಘರ್ಷ ಹೊಸ ತಿರುವು ಪಡೆದುಕೊಂಡಂತಾಗಿದೆ.
ಆರೋಪ ಪಟ್ಟಿಯಲ್ಲಿ ಏನಿತ್ತು?
ಎರಡು ವರ್ಷಗಳನ್ನು ಪೂರೈಸಿದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಆರೋಪಪಟ್ಟಿ ಬಿಡುಗಡೆ ಮಾಡಿದ್ದು, ದಿವಾಳಿ ಮಾಡೆಲ್ ಆಫ್ ಕರ್ನಾಟಕ ಎಂದು ಟೀಕಿಸಿತ್ತು.
ಕರ್ನಾಟಕದ ಜನರ ಬದುಕಿಗೆ ಶಾಪವಾದ ವಸೂಲಿ ಸರ್ಕಾರ ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ 8 ಪುಟಗಳ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿ, ಕಾಂಗ್ರೆಸ್‌ನವರು ನಯಾ ಪೈಸೆ ಸಾಧನೆ ಮಾಡದೆ ಸಂಭ್ರಮದ ಸಮಾವೇಶ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಸೋಲಿಗೆ ಕಾರಣರಾದ ಸೇನಾ ಮುಖ್ಯಸ್ಥ ಮುನೀರ್‌ಗೆ ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ಕೊಟ್ಟಿರುವ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದಿವಾಳಿ ಮಾಡಲ್ ಆಫ್ ಕರ್ನಾಟಕ ಎಂಬ ಬಿರುದು ಕೊಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಅರ್. ಅಶೋಕ್ ಹೇಳಿದ್ದರು.
"ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ಸಾಧನೆಯನ್ನೂ ಮಾಡಿಲ್ಲ. ಎಲ್ಲವನ್ನೂ ಸಾಲ ಮಾಡಿಯೇ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೃಹ ಲಕ್ಷ್ಮಿ ಹಣವನ್ನು ತಿಂಗಳು ತಿಂಗಳು ಕೊಡುತ್ತೇವೆ ಎಂದು ಹೇಳಿಲ್ಲ, ದುಡ್ಡು ಬಂದಾಗ ಕೊಡುತ್ತೇವೆ ಎಂದಿದ್ದಾರೆ. ಜನ ಇವರ ವಂಚನೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಶೋಕ್ ಅರೋಪಿಸಿದ್ದರು.
ಬಿಜೆಪಿ ಅಧಿಕಾರದಲ್ಲಿದ್ದಾಗ, ಟೆಂಡರ್ ಮೂಲಕ ಯೋಜನೆಗಳಿಗೆ 1,600 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು, ಆದರೆ ಅದನ್ನು ರದ್ದುಗೊಳಿಸಲಾಯಿತು. ಕಾಂಗ್ರೆಸ್ ಸರ್ಕಾರ 54,000 ಕೋಟಿ ರೂ.ಗಳನ್ನು ಘೋಷಿಸಿದರೂ, ಹಣವನ್ನು ಬಿಡುಗಡೆ ಮಾಡಲಾಗಿಲ್ಲ. ರಸ್ತೆಗಳಿಗೆ 7,000 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದ್ದರೂ, ಸುರಂಗ ಯೋಜನೆಯ ಹಣವನ್ನು ಬೇರೆಡೆಗೆ ತಿರುಗಿಸಲಾಗಿದೆ. ರಾಜ್ಯ ಸರ್ಕಾರ 1.16 ಲಕ್ಷ ಕೋಟಿ ಸಾಲ ಮಾಡಿದೆ. ಪ್ರತಿ ನಾಗರಿಕನ ಮೇಲೆ 1 ಲಕ್ಷ ಸಾಲ ಇದೆ. 6306 ಕೋಟಿ ರೂ. ವಾರ್ಷಿಕ ಬಡ್ಡಿ ಕಟ್ಟಬೇಕು. ಅವೈಜ್ಞಾನಿಕ ಗ್ಯಾರಂಟಿ ಕಾರಣ ಸಾಲವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಸಾಲ ಮಾಡಿ ರಾಜ್ಯ ಮುನ್ನಡೆಸುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಟೀಕಿಸಲಾಗಿತ್ತು.
ರಾಜ್ಯ ಸರ್ಕಾರ ವೈಪಲ್ಯಗಳನ್ನು ಕೆದಕಿರುವ ಬಿಜೆಪಿ, ʼಆರೋಪ ಪಟ್ಟಿʼ ಜಾಹೀರಾತಿನಲ್ಲಿ ದುಬಾರಿ ಜೀವನ, ಅಭಿವೃದ್ಧಿ ಶೂನ್ಯ ಇದುವೇ ಕಾಂಗ್ರೆಸ್ ಸರ್ಕಾರ. ಬೆಲೆ ಏರಿಕೆಯ ಸಾಧನೆ, 50 ಕ್ಕೂ ಹೆಚ್ಚು ವಲಯುಗಳ ಬೆಲೆ ಏರಿಕೆ ಕರ್ನಾಟಕ ಲೂಟಿಯೇ ಕಾಂಗ್ರೆಸ್‌ನ ಡ್ಯೂಟಿ, ಹೆಜ್ಜೆ ಇಡದ ಎರಡು ವರ್ಷ, ಬೆಲೆ ಏರಿಕೆ, ಭ್ರಷ್ಟತೆಯ ಕರಾಳ ಸ್ಪರ್ಷ ಎಂದು ಬರೆದಿತ್ತು.