ಬಿಜೆಪಿ ಕಾಲದ ಹಗರಣ ಬಯಲು ಮಾಡಿದರೆ ರಾಜೀನಾಮೆ ನೀಡುತ್ತೀರಾ? ಮೋದಿಗೆ ಸಿದ್ದರಾಮಯ್ಯ ಸವಾಲು
ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಮಾಡಿದ್ದಾರೆಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ಅಬಕಾರಿ ಇಲಾಖೆಯಲ್ಲಿ 700 ಕೋಟಿ ವಸೂಲಿ ಮಾಡಿದ್ದಾರೆಂಬ ಪ್ರಧಾನಿ ನರೇಂದ್ರ ಮೋದಿ ಆರೋಪಕ್ಕೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಒಂದೇ ಒಂದು ರೂಪಾಯಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರ ಮೇಲೆ ಅನೇಕ ಆರೋಪಗಳಿವೆ. ಬಿಜೆಪಿ ಸರ್ಕಾರ ಇದ್ದಾಗ ಕೋವಿಡ್ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಡಿ.ಕುನ್ಹಾ ಆಯೋಗ ವರದಿ ಸಲ್ಲಿಸಿದೆ. 330 ರೂಪಾಯಿಗೆ ಸಿಗುವ ಪಿಪಿಇ ಕಿಟ್ ಅನ್ನು 2140 ರೂ.ಗಳಿಗೆ ಖರೀದಿ ಮಾಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಏನು ಹೇಳುತ್ತಾರೆ?, ಭ್ರಷ್ಟಾಚಾರ ಮಾಡಿರುವುದು ಅವರ ಸರ್ಕಾರವೇ ಹೊರತು ನಮ್ಮ ಸರ್ಕಾರವಲ್ಲ. ನಾವು ಭ್ರಷ್ಟಾಚಾರ ಮಾಡುವುದೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಹಗಲು ದರೋಡೆ ಮಾಡುತ್ತಿದೆ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದೆ ಎಂಬ ಪ್ರಧಾನಿ ಆರೋಪ ಕುರಿತ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಅಬಕಾರಿ ಇಲಾಖೆಯಲ್ಲಿ ವಸೂಲಿ ಮಾಡಿರುವುದನ್ನು ನಿರೂಪಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಮಾಡದಿದ್ದರೆ ಪ್ರಧಾನಿ ಅವರು ತಮ್ಮ ಸ್ಥಾನ ತ್ಯಜಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಸುಳ್ಳು ಹೇಳಲು ಇತಿಮಿತಿ ಇರಬೇಕು ಎಂದರು.
ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಜನಸ್ಪಂದನೆ ನೋಡಿದರೆ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಗೆಲ್ಲಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಬಂಡೀಪುರದಲ್ಲಿ ರಾತ್ರಿ ಸಂಚಾರ ಆರಂಭದ ಬಗ್ಗೆ ಪ್ರಸ್ತಾವನೆ ಇಲ್ಲ
ಬಂಡೀಪುರದಲ್ಲಿ ರಾತ್ರಿ ಸಂಚಾರ ಪುನರಾರಂಭಿಸುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸರ್ಕಾರದ ಮುಂದೆ ಈ ಕುರಿತ ಪ್ರಸ್ತಾವವೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಈ ಕುರಿತ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ತಿಳಿದಿರುವ ಮಟ್ಟಿಗೆ ಸರ್ಕಾರದ ಮುಂದೆ ಅಂತಹ ಪ್ರಸ್ತಾವನೆ ಇಲ್ಲ. ನೀವು ಅವರನ್ನೇ ಕೇಳಿ ಎಂದರು.
ಸಚಿವ ಸಂಪುಟಕ್ಕೆ ನಾಗೇಂದ್ರ: ಪರಿಶೀಲನೆ
ಮಾಜಿ ಸಚಿವ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಪುನಃ ಸೇರ್ಪಡೆ ಮಾಡಿಕೊಳ್ಳುವ ಕುರಿತು ಚುನಾವಣೆ ಮುಗಿದ ಬಳಿಕ ಪರಿಶೀಲಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಕರ್ನಾಟಕವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕರ್ನಾಟಕ ದೊಡ್ಡ ರಾಜ್ಯ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಪಡೆದಿರುವುದರಿಂದ ನನ್ನ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ಟೀಕಿಸುತ್ತಿದ್ದಾರೆ ಎಂದರು.
ಸುಳ್ಳು ಆರೋಪಗಳ ಮೇಲೆ ಇಡಿ ತನಿಖೆ
ಮುಡಾ ಪ್ರಕರಣಕ್ಕೆ ಸಂಬಂಧಿಸಿ ಇಡಿ ತನಿಖೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಇಡಿಯವರು ಕಾನೂನು ಪ್ರಕಾರ ಮಾಡುವ ತನಿಖೆ ನಡೆಸಲಿ, ಅದಕ್ಕೆ ಯಾವುದೇ ರೀತಿಯ ಪ್ರತಿರೋಧ ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೇ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕುರಿತು ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಮಾಜಿ ಪ್ರಧಾನಿ ದೇವೇಗೌಡರು ‘ಸಿದ್ದರಾಮಯ್ಯನ ಸೊಕ್ಕು ಮುರಿಯುತ್ತೇವೆ’ ಎಂದಿರುವುದು ಎಷ್ಟರ ಮಟ್ಟಿಗೆ ಸರಿ?, ಒಬ್ಬ ಮುಖ್ಯಮಂತ್ರಿಗೆ ಈ ರೀತಿ ಹೇಳುವುದು ಸರಿಯೇ ಎಂದು ಮರು ಪ್ರಶ್ನಿಸಿದರು.
ಜಮೀರ್ ಅಹ್ಮದ್ ಹಾಗೂ ಕುಮಾರಸ್ವಾಮಿಯವರು ಒಂದು ಕಾಲದಲ್ಲಿ ಆಪ್ತರಾಗಿದ್ದರು. ಆದರೆ ಪ್ರಸ್ತುತ ಅವರ ನಡುವಿನ ಸಂಬಂಧ ಹೇಗಿದೆ ಎಂಬ ಬಗ್ಗೆ ನನಗೆ ತಿಳಿದಿಲ್ಲ ಎಂದರು.
ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ
ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವ ಇಲ್ಲ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ಮುಸ್ಲಿಮರಿಗೂ ಮೀಸಲಾತಿ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿಲ್ಲ. ಬಿಜೆಪಿಯವರಿಗೆ ಕೋಮುವಾದ ಸೃಷ್ಟಿಸುವುದೇ ಕಾಯಕವಾಗಿದೆ. ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಬಿಜೆಪಿಯವರೆಂದೂ ಸಮಾಜದಲ್ಲಿ ಶಾಂತಿ, ಸೋದರತ್ವ ನೆಲೆಸಬೇಕೆಂದು ಬಯಸಿದವರೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.