
ಕರ್ನಾಟಕ ರಾಜಕೀಯದಲ್ಲಿ ಹೊಸ ಇತಿಹಾಸ: ಅರಸು ದಾಖಲೆ ಮುರಿದ ಸಿದ್ದರಾಮಯ್ಯ!
ಸಿಎಂ ಸಿದ್ದರಾಮಯ್ಯ ಅವರು ಜನವರಿ 6ಕ್ಕೆ ದೇವರಾಜ ಅರಸು ಅವರ 2,792 ದಿನಗಳ ಆಡಳಿತದ ದಾಖಲೆಯನ್ನು ಮುರಿದಿದ್ದಾರೆ. ಆ ಮೂಲಕ ಕರ್ನಾಟಕದ ಸುದೀರ್ಘ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕರ್ನಾಟಕದ ರಾಜಕೀಯ ಧ್ರುವತಾರೆ, ಹಿಂದುಳಿದ ವರ್ಗಗಳ ಹರಿಕಾರ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿದ್ದ 'ದೀರ್ಘಕಾಲದ ಮುಖ್ಯಮಂತ್ರಿ' ಎಂಬ ದಾಖಲೆಯನ್ನು ನಾಲ್ಕೂವರೆ ದಶಕಗಳ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಮುರಿದಿದ್ದಾರೆ. ಇಂದು ಅವರು ಅರಸು ಅವರ ದಾಖಲೆಯನ್ನು ಮೀರಿ ನಿಲ್ಲುವ ಮೂಲಕ 'ನಾಡಿನ ಅತಿ ಸುದೀರ್ಘ ಅವಧಿಯ ಸಿಎಂ' ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ದಾಖಲೆಯ ಅಂಕಿ-ಅಂಶಗಳು ಹೀಗಿವೆ
1. ದೇವರಾಜ ಅರಸು ಅವರ ಸಾಧನೆ
• ಒಟ್ಟು ಅವಧಿ: 2,792 ದಿನಗಳು (ಅಂದರೆ ಸುಮಾರು 7 ವರ್ಷ 7 ತಿಂಗಳು 20 ದಿನ).
• ಮೊದಲ ಅವಧಿ: ಮಾರ್ಚ್ 20, 1972 ರಿಂದ ಡಿಸೆಂಬರ್ 31, 1977 ರವರೆಗೆ (5 ವರ್ಷ 286 ದಿನ).
• ಎರಡನೇ ಅವಧಿ: ಫೆಬ್ರವರಿ 28, 1978 ರಿಂದ ಜನವರಿ 12, 1980 ರವರೆಗೆ (1 ವರ್ಷ 318 ದಿನ).
2. ಸಿದ್ದರಾಮಯ್ಯ ಅವರ ಪಯಣ
• ಮೊದಲ ಅವಧಿ: ಮೇ 13, 2013 ರಿಂದ ಮೇ 17, 2018 ರವರೆಗೆ (5 ವರ್ಷ 4 ದಿನ - ಒಟ್ಟು 1,829 ದಿನ).
• ಎರಡನೇ ಅವಧಿ: ಮೇ 20, 2023 ರಿಂದ ಇಂದಿನವರೆಗೆ (ಜನವರಿ 6, 2026 ಕ್ಕೆ 963 ದಿನಗಳು ಪೂರೈಕೆ).
• ಒಟ್ಟು ಸಾಧನೆ: ಇಂದು ಸಿದ್ದರಾಮಯ್ಯ ಅವರು ಅರಸು ಅವರ 2,792 ದಿನಗಳ ದಾಖಲೆಯನ್ನು ಮುರಿದಿದ್ದಾರೆ.
ಬಜೆಟ್ ಮಂಡನೆಯಲ್ಲೂ ಸಿದ್ದರಾಮಯ್ಯ 'ನಂಬರ್ 1'
ಕೇವಲ ಆಡಳಿತದ ಅವಧಿಯಲ್ಲಿ ಮಾತ್ರವಲ್ಲದೆ, ಆರ್ಥಿಕ ನಿರ್ವಹಣೆಯಲ್ಲೂ ಸಿದ್ದರಾಮಯ್ಯ ಅವರು ಅಪ್ರತಿಮ ದಾಖಲೆ ಬರೆದಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಅಂದರೆ 16 ಬಾರಿ ಬಜೆಟ್ ಮಂಡಿಸಿದ ಏಕೈಕ ನಾಯಕ ಎಂಬ ದಾಖಲೆ ಈಗಾಗಲೇ ಇವರ ಹೆಸರಿನಲ್ಲಿದೆ.
'ಸಾವಿರದ ಸರ್ಕಾರ' ಸಂಭ್ರಮಕ್ಕೆ ಸಿದ್ಧತೆ
ರಾಜಕೀಯ ರಂಗದಲ್ಲಿ ಹೊಸ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರ ಸಾಧನೆ ಸಂಭ್ರಮಿಸಲು ಇಂದು (ಜ.6) ಯಾವುದೇ ಅಧಿಕೃತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಆದರೆ, ಫೆಬ್ರವರಿ 16ಕ್ಕೆ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಸರ್ಕಾರವು 1,000 ದಿನಗಳನ್ನು ಯಶಸ್ವಿಯಾಗಿ ಪೂರೈಸಲಿದೆ. ಈ ಸಂದರ್ಭದಲ್ಲಿ 'ಸಾವಿರದ ಸರ್ಕಾರ' ಎಂಬ ಹೆಸರಿನಲ್ಲಿ ಬೃಹತ್ ಸಮಾವೇಶ ನಡೆಸಿ, ಜನಕಲ್ಯಾಣ ಯೋಜನೆಗಳ ಸಾಧನೆಯನ್ನು ಬಿಂಬಿಸುವ ಮೂಲಕ ಸಂಭ್ರಮಾಚರಣೆ ಮತ್ತು ಶಕ್ತಿ ಪ್ರದರ್ಶನ ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

