
ಸಿಎಂ ಸಿದ್ದರಾಮಯ್ಯ
ಬಳ್ಳಾರಿ ಪ್ರಕರಣ| ಬಿಜೆಪಿ ಎಷ್ಟು ಪ್ರಕರಣ ಸಿಬಿಐಗೆ ಕೊಟ್ಟಿದೆ ಎಂದು ಪ್ರಶ್ನಿಸಿದ ಸಿಎಂ
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಹೋದಾಗ ನಮಗೆ ಸಾರ್ವಜನಿಕ ಸಭೆ ನಡೆಸಲು ಬಳ್ಳಾರಿಯಲ್ಲಿ ಸ್ಥಳ ಕೊಟ್ಟಿರಲಿಲ್ಲ. ಕೊನೆಗೆ ಕುರುಬರ ದೇವಸ್ಥಾನದ ಬಳಿ ಸಭೆ ನಡೆಸಿದ್ದೆವು. ಇದು ರೆಡ್ಡಿ ಅವಧಿಯ ರಿಪಬ್ಲಿಕ್ ಆಫ್ ಬಳ್ಳಾರಿಗೆ ಒಂದು ಸಾಕ್ಷಿ ಎಂದು ಸಿಎಂ ಟೀಕಿಸಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐ ತನಿಖೆಗೆ ಒಪ್ಪಿಸಿರಲಿಲ್ಲ. ನಮ್ಮನ್ನು ಪ್ರಶ್ನೆ ಮಾಡಲು ಅವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರದಲ್ಲಿ ಇದ್ದಾಗ ಯಾವುದಾದರೂ ಒಂದು ಪ್ರಕರಣವನ್ನಾದರೂ ಕೊಟ್ಟಿದ್ದರೆ ನಮ್ಮನ್ನು ಕೇಳಬಹುದು. ನಾವು ಅಧಿಕಾರದಲ್ಲಿ ಇದ್ದಾಗ ಸುಮಾರು ಏಳೆಂಟು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು ಪಟ್ಟಿ ಮುಂದಿಟ್ಟರು.
ಬಳ್ಳಾರಿ ಪ್ರಕರಣದ ಬಗ್ಗೆ ಬಿಜೆಪಿ ಜನಾಂದೋಲನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದಲ್ಲಿರುವಾಗ ಯಾವ ಆಂದೋಲನ, ಪ್ರತಿಭಟನೆ ಮಾಡುತ್ತಾರೆ ಎನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅದಕ್ಕೆ ನಾವೂ ಕೂಡ ತಕ್ಕ ಉತ್ತರ ಕೊಡುತ್ತೇವೆ ಎಂದರು.
ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ
ಶ್ರೀರಾಮುಲು, ಜನಾರ್ಧನ ರೆಡ್ಡಿ ಅವರು ಕಾಂಗ್ರೆಸ್ ನಾಯಕರನ್ನು ಏಕವಚನದಲ್ಲಿ ವಾಗ್ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಸಂಸ್ಕೃತಿ ಇಲ್ಲ ಎನ್ನುವುದೂ ಸ್ಪಷ್ಟವಾಗಿದೆ. ಜನಾರ್ದನ ರೆಡ್ಡಿಗೆ ಬಳ್ಳಾರಿ ಪ್ರವೇಶಿಸಲು ಏಕೆ ಹೇಳಿದ್ದರು?, ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೇಳಿದವರು ಯಾರು?, ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು ವರದಿಯಲ್ಲೇ ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಹೇಳಿಲ್ಲವೇ ಎಂದು ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದರು.
ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದಾಗ ನಮಗೆ ಸಾರ್ವಜನಿಕ ಸಭೆ ನಡೆಸಲು ಎಲ್ಲೂ ಸ್ಥಳ ನೀಡಲಿಲ್ಲ. ಕೊನೆಗೆ ಕುರುಬರ ದೇವಸ್ಥಾನದ ಬಳಿ ಸಭೆ ನಡೆಸಿದೆವು. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ, ಸರ್ವಾಧಿಕಾರದಲ್ಲಿ ನಂಬಿಕೆ ಇದೆ ಎನ್ನಲು ಇದೊಂದು ಉದಾಹರಣೆ ಸಾಕು ಎಂದರು.
ಸಂಸದೀಯ ವ್ಯವಸ್ಥೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ಗೂಂಡಾಗಿರಿ ಮಾಡುತ್ತಿದ್ದವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.
ಸಂವಿಧಾನದ ಮೇಲೆ ನಂಬಿಕೆ ಇಟ್ಟ ಪಕ್ಷ ನಮ್ಮದು
ಕಾಂಗ್ರೆಸ್ ಪಕ್ಷವು ರಿಪಬ್ಲಿಕ್ ಆಫ್ ಕರ್ನಾಟಕ ಮಾಡಿಕೊಂಡಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಅದರ ಆಶಯಗಳಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಜನಾಂದೋಲನದ ಹಿಂದೆ ರಾಜಕೀಯ ಉದ್ದೇಶ ಬಿಟ್ಟರೆ ಬೇರೇನಿದೆ ? ಎಂದು ಪ್ರಶ್ನಿಸಿದರು.
ವಿಬಿಜಿ ರಾಮ್ ಜಿ ರದ್ದತಿಗೆ ಒತ್ತಾಯಿಸಲು ಅಧಿವೇಶನ
ಅಧಿವೇಶನ ಆಯೋಜಿಸಿರುವುದು ರಾಜಕೀಯ ದುರ್ಬಳಕೆಗೆ ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಹೊಸ ವರ್ಷದಲ್ಲಿ ಜಂಟಿ ಅಧಿವೇಶನ ಕಡ್ಡಾಯವಾಗಿ ಕರೆಯಬೇಕೆಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿದೆ. ಅದಕ್ಕಾಗಿ ಕರೆದಿದ್ದೇವೆ. ಉದ್ಯೋಗ ಖಾತ್ರಿ, ಶಿಕ್ಷಣ, ಮಾಹಿತಿ ಹಕ್ಕು ಆಹಾರ ಭದ್ರತೆ ಕಾಯ್ದೆ ತಂದದ್ದು ಯುಪಿಎ ಸರ್ಕಾರ. ಅದನ್ನು ಹಾಳು ಮಾಡಲು ಬಿಜೆಪಿ ಹೊರಟಿದೆ. ಇದನ್ನು ಖಂಡಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಹೊಸ ಯೋಜನೆಯನ್ನು ರದ್ದುಪಡಿಸಿ ಹಳೆಯ ಯೋಜನೆಯನ್ನೇ ಮುಂದುವರಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದರು.
ಕಾನೂನಿನ ಕ್ರಮಕ್ಕೆ ನಾವು ಅಡ್ಡಿ ಬರಲ್ಲ
ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ದಾಳಿಯಾಗಿರುವ ಬಗ್ಗೆ ಹಾಗೂ ಅಬಕಾರಿ ಸಚಿವರ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಮಾತನಾಡಿ, ಕಾನೂನಿನ ಕ್ರಮಕ್ಕೆ ನಾವು ಅಡ್ಡಿಬರುವುದಿಲ್ಲ. ಶೇ 40 ರಷ್ಟು ಕಮಿಷನ್ ಪಡೆಯುತ್ತಾರೆ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಆರೋಪ ಮಾಡಿದ್ದರಲ್ಲ ಎಂದರು.

