ಪ್ರಬುದ್ಧ್ಯಾ ನಿಗೂಢ ಸಾವು ಪ್ರಕರಣಕ್ಕೆ ಸ್ಪೋಟಕ ತಿರುವು!
ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧ್ಯಾ (20) ಕೊಲೆ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.
ಪದ್ಮನಾಭನಗರದ ಬೃಂದಾವನ ಲೇಔಟ್‌ನಲ್ಲಿರುವ ತನ್ನ ಮನೆಯಲ್ಲಿ ಪ್ರಬುದ್ಧ್ಯಾ ಹತ್ತು ದಿನಗಳ ಹಿಂದೆ, ಮೇ 15 ರಂದು ಮೃತಪಟ್ಟಿದ್ದರು. ಕತ್ತು ಸೀಳಿದ ಸ್ಥಿತಿಯಲ್ಲಿ ಮನೆಯ ಬಾತ್‌ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದ ಮಗಳ ಸಾವಿನ ಕುರಿತು ತಾಯಿ ಸೌಮ್ಯ ಪೊಲೀಸರಿಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದರು. ಯುವತಿಯ ಶವ ಪತ್ತೆಯಾದ ಜಾಗದಲ್ಲಿ "ಅಮ್ಮ ಸಾರಿ..." ಎಂದು ಬರೆದಿದ್ದ ಕಾಗದವೊಂದು ಸಿಕ್ಕಿದ್ದರಿಂದ ಪೊಲೀಸರು ಆರಂಭದಲ್ಲಿ ಆತ್ಮಹತ್ಯೆ ಪ್ರಕರಣವಿರಬಹುದು ಎಂದು ಶಂಕಿಸಿದ್ದರು. ಆದರೆ, ಯುವತಿ ತಾಯಿ ಇದು ಕೊಲೆ ಎಂದು ಬಲವಾಗಿ ಪ್ರತಿಪಾದಿಸಿ ತನಿಖೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ಕೈಗೊಂಡ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಕೊಲೆಗಾರನನ್ನು ಬಂಧಿಸಿದ್ದಾರೆ.
ಎರಡು ಸಾವಿರಕ್ಕಾಗಿ ನಡೆಯಿತು ಕೊಲೆ!
ಕೇವಲ ಎರಡು ಸಾವಿರ ರೂಪಾಯಿಗಾಗಿ ಈ ಯುವತಿಯ ಭೀಕರ ಕೊಲೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಈ ಭೀಕರ ಕೊಲೆಯನ್ನು ನಡೆಸಿ ಪರಾರಿಯಾಗಿದ್ದ. ಇದೀಗ ಆತನನ್ನ ಸುಬ್ರಮಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಅವರು ಮಾಹಿತಿ ನೀಡಿದ್ದಾರೆ.
ಪ್ರಬುದ್ಧ್ಯಾಳ ತಮ್ಮ ಹಾಗೂ ಹತ್ಯೆ ಮಾಡಿದ ಆರೋಪಿ ಪರಸ್ಪರ ಸ್ನೇಹಿತರಾಗಿದ್ದರು. ಆರೋಪಿ ತನ್ನ ಸ್ನೇಹಿತನ ಕನ್ನಡಕವನ್ನು ಹಾಳು ಮಾಡಿದ್ದ. ಅದನ್ನು ರಿಪೇರಿ ಮಾಡಿಸಿಕೊಡು ಎಂದು ಸ್ನೇಹಿತ ಪಟ್ಟು ಹಿಡಿದಿದ್ದ. ಆದರೆ ರಿಪೇರಿಗೆ ಕಾಸಿಲ್ಲದೇ ಅಪ್ರಾಪ್ತ ಆರೋಪಿ ಸುಮ್ಮನಾಗಿದ್ದನು.
ಕೊಲೆಯಾದ ದಿನ ಪ್ರಬುದ್ಧ್ಯಾ ಮನೆಗೆ ಬಂದಿದ್ದ ಆರೋಪಿ, ಪರ್ಸ್‌ನಲ್ಲಿದ್ದ ಎರಡು ಸಾವಿರ ರೂಪಾಯಿ ಕದ್ದಿದ್ದನು. ಆರೋಪಿ ಕದಿಯುವುದನ್ನು ಕಂಡ ಪ್ರಬುದ್ಧ್ಯಾ ಆತನನ್ನು ಪ್ರಶ್ನೆ ಮಾಡಿದ್ದಳು. ಇದರಿಂದ ಗಾಬರಿಗೊಂಡ ಆರೋಪಿ ಕ್ಷಮಿಸಿಬಿಡು ಎಂದು ಆಕೆಯ ಕಾಲು ಹಿಡಿದುಕೊಂಡಿದ್ದನು. ಈ ವೇಳೆ ಗಲಿಬಿಲಿಯಲ್ಲಿ ಆರೋಪಿ ಕಾಲು ಹಿಡಿದಾಗ ಪ್ರಬುದ್ಧ ಆಯ ತಪ್ಪಿ ಬಿದ್ದಿದ್ದಳು. ಈ ವೇಳೆ ಆಕೆಯ ತಲೆಗೆ ಪೆಟ್ಟು ಬಿದ್ದಾಗ, ಪ್ರಜ್ಞೆ ತಪ್ಪಿದ್ದಳು. ಇದರಿಂದ ಆತಂಕಗೊಂಡ ಆರೋಪಿ, ಆಕೆ ಸತ್ತೇ ಹೋದಳು ಎಂದು ಭಾವಿಸಿ, ಅದೊಂದು ಆತ್ಮಹತ್ಯೆ ಎಂಬಂತೆ ಬಿಂಬಿಸಲು ಕೈ ಹಾಗೂ ಕುತ್ತಿಗೆಯನ್ನು ಕೊಯ್ದು, ʼಸ್ಸಾರಿ ಅಮ್ಮಾ...ʼ ಎಂದು ಕಾಗದದಲ್ಲಿ ಬರೆದಿಟ್ಟು ಅಲ್ಲಿಂದ ಪರಾರಿ ಆಗಿದ್ದನು. ಪ್ರಜ್ಞೆ ತಪ್ಪಿದ್ದ ಪ್ರಬುದ್ಧ್ಯಾ, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು!
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್, ʻʻಸುಬ್ರಹ್ಮಣ್ಯ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 15 ರಂದು 20 ವರ್ಷದ ಯುವತಿ ಕೊಲೆಯಾಗಿತ್ತು. ಕೊಲೆಯಾದ ಯುವತಿ ಪರ್ಸ್ ನಿಂದ ಅಪ್ರಾಪ್ತ ಬಾಲಕ 2 ಸಾವಿರ ಹಣ ಕದಿದ್ದ, ಕೊಲೆಯಾದ ಅಪ್ರಾಪ್ತ ಬಾಲಕ ಯುವತಿಯ ತಮ್ಮನ ಸ್ನೇಹಿತನಾಗಿದ್ದ. ಸ್ನೇಹಿತನ ಜೊತೆ ಆಟವಾಡುವಾಗ ಕನ್ನಡಕವನ್ನು ಮುರಿದ್ದಿದ್ದ. ಸ್ನೇಹಿತ ಕಡಕವನ್ನ ರಿಪೇರಿ ಮಾಡಿಸಲು ಹಣ ಕೇಳಿದ್ದ. ಅದಕ್ಕಾಗಿ ಬಾಲಕ ಹಣವನ್ನು ಯುವತಿಯ ಪರ್ಸ್ ನಿಂದ ಕದಿದ್ದ ಎಂಬ ಮಾಹಿತಿ ಲಭ್ಯವಾಗಿದೆʼʼ ಎಂದು ತಿಳಿಸಿದ್ದಾರೆ.
ʻʻಹಣವನ್ನು ಕದಿಯುವಾಗ ಯುವತಿ ನೋಡಿದ್ದಳು. ಎರಡು ದಿನ ಬಿಟ್ಟು ಯುವತಿ, ಅಪ್ರಾಪ್ತ ಬಳಿ ಆ ವಿಷಯ ಹೇಳಿ ಹಣ ಕೇಳುತ್ತಾಳೆ. ಅದಕ್ಕೆ ತನ್ನ ಪೋಷಕರ ಬಳಿ ಹೇಳದಂತೆ ಯುವತಿಗೆ ಮನವಿ ಮಾಡಿದ್ದ. ಪೋಷಕರಿಗೆ ವಿಷಯ ಹೇಳುತ್ತಾಳೆ ಅಂತ ಆಕೆಯ ಮನೆಯ ಚಾಕುವಿನಿಂದ ಕೊಲೆ ಮಾಡಿದ್ದಾನೆ. ಈ ಹಿಂದೆ ಯುವತಿ ಎರಡು ಮೂರು ಸಲ ಚಾಕುವಿನಿಂದ ಆತ್ಮಹತ್ಯೆ ಗೆ ಯತ್ನಿಸಿದ್ದಳು. ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಯುವತಿ ತಮ್ಮನೇ ಅಪ್ರಾಪ್ತ ಬಾಲಕನ ಬಳಿ ಹೇಳಿ ಕೊಂಡಿದ್ದನಂತೆ. ಅದು ಗೊತ್ತಿದ್ದು, ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ. ಅಪ್ರಾಪ್ತನನ್ನು ಬಂಧಿಸಿರುವ ಘಟನೆ ಸಂಬಂದ ಸುಬ್ರಹ್ಮಣ್ಯಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆʼʼ ಎಂದು ಡಿಸಿಪಿ ತಿಳಿಸಿದ್ದಾರೆ.