
ರೈಟ್ ಸಹೋದರರು ಹುಡುಕುವ ಮೊದಲೇ ಭಾರತದಲ್ಲಿ ವಿಮಾನವಿತ್ತು: ಶಿವರಾಜ್ ಸಿಂಗ್ ಚೌಹಾಣ್!
1903ರಲ್ಲಿ ರೈಟ್ ಸಹೋದರರು ಮೊದಲ ಯಶಸ್ವಿ ಮೋಟಾರ್ ಚಾಲಿತ ವಿಮಾನವನ್ನು ಹಾರಿಸಿದ್ದು, ಜಗತ್ತಿನ ವಿಮಾನಯಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ದಾಖಲಾಗಿದೆ.
ಕೇಂದ್ರ ಕೃಷಿ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ನೀಡಿದ ಹೇಳಿಕೆಯೊಂದು ವಿಮರ್ಶೆಗೆ ಕಾರಣವಾಗಿದೆ. ರೈಟ್ ಸಹೋದರರು ವಿಮಾನವನ್ನು ಕಂಡುಹಿಡಿಯುವ ಎಷ್ಟೋ ವರ್ಷಗಳ ಹಿಂದೆಯೇ ಭಾರತದಲ್ಲಿ 'ಪುಷ್ಪಕ ವಿಮಾನ' ಅಸ್ತಿತ್ವದಲ್ಲಿತ್ತು ಎಂದು ಹೇಳುವ ಮೂಲಕ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ.
ಭೋಪಾಲ್‌ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಎಜುಕೇಶನ್ ಆ್ಯಂಡ್ ರಿಸರ್ಚ್ (IISER) ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಾಚೀನ ಭಾರತವು ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದಿತ್ತು ಎಂಬುದಕ್ಕೆ ಮಹಾಭಾರತವೇ ಸಾಕ್ಷಿ ಎಂದರು. "ಸಾವಿರಾರು ವರ್ಷಗಳ ಹಿಂದೆಯೇ ನಮ್ಮಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳಿದ್ದವು. ಇವೆಲ್ಲವನ್ನೂ ನಾವು ಮಹಾಭಾರತದಲ್ಲಿ ಓದಿದ್ದೇವೆ. ನಮ್ಮ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನವು ಆಗಲೇ ಉತ್ತುಂಗದಲ್ಲಿತ್ತು" ಎಂದು ಚೌಹಾಣ್ ಪ್ರತಿಪಾದಿಸಿದ್ದಾರೆ.
ಚೌಹಾಣ್ ಅವರ ಈ ಹೇಳಿಕೆಯು ಐತಿಹಾಸಿಕ ಸತ್ಯಗಳಿಗೆ ವಿರುದ್ಧವಾಗಿದೆ. 1903ರಲ್ಲಿ ರೈಟ್ ಸಹೋದರರು ಮೊದಲ ಯಶಸ್ವಿ ಮೋಟಾರ್ ಚಾಲಿತ ವಿಮಾನವನ್ನು ಹಾರಿಸಿದ್ದು, ಜಗತ್ತಿನ ವಿಮಾನಯಾನದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದು ದಾಖಲಾಗಿದೆ.
ಇದೇ ರೀತಿಯ ವಿವಾದಾತ್ಮಕ ಹೇಳಿಕೆಗಳು ಇತ್ತೀಚೆಗೆ ಬಿಜೆಪಿ ನಾಯಕರಿಂದ ಕೇಳಿಬಂದಿದ್ದವು. ಕೆಲ ದಿನಗಳ ಹಿಂದೆ, ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು, "ಹನುಮಂತನೇ ಮೊಟ್ಟಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ್ದ" ಎಂದು ಹೇಳಿದ್ದರು. ಆದರೆ, 1961ರಲ್ಲಿ ಸೋವಿಯತ್ ಗಗನಯಾತ್ರಿ ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಮಾನವ ಎಂಬುದು ವೈಜ್ಞಾನಿಕ ಸತ್ಯ.
ಮತ್ತೊಂದು ಪ್ರಕರಣದಲ್ಲಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಶ್ರೀಕೃಷ್ಣನಿಗೆ ಬಳಸುವ 'ಮಕಾನ್ ಚೋರ್' (ಬೆಣ್ಣೆ ಕಳ್ಳ) ಎಂಬ ಪದವು ಅನುಚಿತ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಶತ್ರು ರಾಜ ಕಂಸನಿಗೆ ಬೆಣ್ಣೆ ಸಿಗಬಾರದು ಎಂಬ ಉದ್ದೇಶದಿಂದ ಕೃಷ್ಣ ಬೆಣ್ಣೆಯನ್ನು ಕದಿಯುತ್ತಿದ್ದ ಎಂದು ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಈ ಹೇಳಿಕೆಗೆ ವಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದು ಪುರಾಣ ಕತೆಗಳನ್ನು ತಿರುಚುವ ಪ್ರಯತ್ನ ಎಂದು ಟೀಕಿಸಿತ್ತು.