
ಬಿಜೆಪಿಯಿಂದ ಶಿವರಾಮ್ ಹೆಬ್ಬಾರ್, ಎಸ್‌ಟಿ ಸೋಮಶೇಖರ್ ಉಚ್ಛಾಟನೆ
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಮಾರ್ಚ್ 25ರಂದು ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಪಕ್ಷದ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿತ್ತು.
ಕರ್ನಾಟಕದ ರಾಜಕೀಯದಲ್ಲಿ ನಡೆದಿರುವ ಬೆಳವಣಿಗೆಯೊಂದರಲ್ಲಿ ಯಲ್ಲಾಪುರ ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್ ಮತ್ತು ಮಾಜಿ ಸಚಿವ ಯಶವಂತಪುರ ಶಾಸಕ ಎಸ್‌ಟಿ ಸೋಮಶೇಖರ್ ಅವರನ್ನು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಆರು ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಿದೆ. ಪಕ್ಷದ ಶಿಸ್ತು ಉಲ್ಲಂಘನೆಯ ಆರೋಪದ ಮೇಲೆ ಈ ಕ್ರಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದ್ದು, ಇಬ್ಬರೂ ನಾಯಕರು ಪ್ರಸ್ತುತ ಹೊಂದಿರುವ ಪಕ್ಷದ ಎಲ್ಲಾ ಹುದ್ದೆಗಳಿಂದಲೂ ಕೈಬಿಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು ಮಾರ್ಚ್ 25ರಂದು ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಪಕ್ಷದ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಈ ನೋಟಿಸ್‌ಗಳಿಗೆ ಅವರು ಸಲ್ಲಿಸಿದ ಉತ್ತರಗಳನ್ನು ಸಮಿತಿ ಪರಿಗಣಿಸಿದೆ. ಇಬ್ಬರೂ ನಾಯಕರು ಪದೆ ಪದೇ ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪ ಗಮನಿಸಿದ ಸಮಿತಿ, ಕಠಿಣ ಕ್ರಮ ಕೈಗೊಂಡಿದೆ.
ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಮೇ 27ರಂದು ಪತ್ರದ ಮೂಲಕ ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಅವರ ಉಚ್ಛಾಟನೆ ಆದೇಶವನ್ನು ಜಾರಿಗೊಳಿಸಿದ್ದಾರೆ. "ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಇಬ್ಬರನ್ನೂ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದ್ದು, ಈ ಆದೇಶವು ತಕ್ಷಣದಿಂದ ಜಾರಿಗೆ ಬರುತ್ತದೆ," ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಶಿವರಾಮ್ ಹೆಬ್ಬಾರ್ ಅವರಿಗೆ ಕಳುಹಿಸಲಾದ ಪತ್ರದಲ್ಲಿ ಅವರ ಬೆಂಗಳೂರಿನ ಶಾಸಕರ ಭವನದ ವಿಳಾಸ ಮತ್ತು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಅರಬೈಲ್‌ನಲ್ಲಿರುವ ಮನೆ ವಿಳಾಸವನ್ನು ಉಲ್ಲೇಖಿಸಲಾಗಿದೆ. ಎಸ್‌ಟಿ ಸೋಮಶೇಖರ್ ಅವರಿಗೂ ಇದೇ ರೀತಿಯ ಪತ್ರವನ್ನು ಕಳುಹಿಸಲಾಗಿದೆ.
ಪಕ್ಷಾಂತರದಿಂದ ಉಚ್ಛಾಟನೆಯವರೆಗೆ
ಶಿವರಾಮ್ ಹೆಬ್ಬಾರ್ ಮತ್ತು ಎಸ್‌ಟಿ ಸೋಮಶೇಖರ್ ಇಬ್ಬರೂ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯ ಎದ್ದು, ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಲ್ಲಿ ಕಾರ್ಮಿಕ ಸಚಿವರಾಗಿದ್ದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದ ಹಾಲಿ ಶಾಸಕ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ ನಡೆದ ಉಪಚುನಾವಣೆ ಮತ್ತು 2023ರ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು.
ಎಸ್‌ಟಿ ಸೋಮಶೇಖರ್ ಅವರು ಬೆಂಗಳೂರಿನ ಯಶವಂತಪುರ ಕ್ಷೇತ್ರದ ಮಾಜಿ ಶಾಸಕರಾಗಿದ್ದು, 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಆದರೆ 2023ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಪಕ್ಷದ ವಿರುದ್ಧ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದ ಮೇಲೆ ಈಗ ಅವರನ್ನು ಉಚ್ಛಾಟಿಸಲಾಗಿದೆ.