
ಬಾನು ಮಷ್ತಾಕ್‌ಗೆ ಅವರಿಗೆ ಶುಭಾಷಯದ ಮಹಾಪೂರ
ಪ್ರತಿಷ್ಠಿತ 'ಬೂಕರ್' ಪ್ರಶಸ್ತಿ ಗೆದ್ದ ಬಾನು ಮುಷ್ತಾಕ್; ಅಭಿನಂದಿಸಿದ ಶಿವಣ್ಣ, ಸುಧಾಮೂರ್ತಿ
ಬಾನು ಮುಷ್ತಾಕ್ ಒಬ್ಬ ಮಹಾನ್ ಬರಹಗಾರ್ತಿ ಮತ್ತು ಇದು ಒಂದು ಉತ್ತಮ ಆರಂಭ. ಅವರಂತಹ ಅನೇಕ ಜನರು ವಿವಿಧ ಭಾಷೆಗಳಲ್ಲಿ ಬೂಕರ್ ಪ್ರಶಸ್ತಿಯನ್ನು ಪಡೆಯಲಿ ಎಂದು ಸುಧಾಮೂರ್ತಿ ಪ್ರಶಂಶಿಸಿದ್ದಾರೆ.
ಕನ್ನಡದ ಪ್ರಸಿದ್ಧ ಲೇಖಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ 'ಬೂಕರ್' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ, ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ಕುಮಾರ್ ಕೂಡಾ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶಿವರಾಜ್ ಕುಮಾರ್ ಪ್ರಶಂಸೆ
''ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕನ್ನಡ ಸಾಹಿತ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿ, ವಿಶ್ವದ ಗಮನ ಸೆಳೆದ ನಿಮ್ಮ ಸಾಧನೆ, ಕನ್ನಡ ಸಾಹಿತ್ಯಕ್ಕೆ ಹಾಗೂ ಸಾಂಸ್ಕೃತಿಕ ಪರಂಪರೆಗೆ ಮಹತ್ತರವಾದ ಕೊಡುಗೆ. ಈ ಗೌರವ ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತಷ್ಟು ಬಲ ನೀಡಲಿ ಎಂದು ಆಶಿಸುತ್ತೇನೆ'' ಎಂದು ಶಿವರಾಜ್ ಕುಮಾರ್ ಬರೆದುಕೊಂಡಿದ್ದಾರೆ.
ಸುಧಾ ಮೂರ್ತಿ ಪ್ರಶಂಸೆ
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಕೂಡಾ ಬಾನು ಮುಷ್ತಾಕ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಾನು ಮುಷ್ತಾಕ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಬಂದಿದ್ದು, ಇದು ಪ್ರತಿಯೊಬ್ಬ ಕನ್ನಡಿಗ ಮಹಿಳೆಯರಿಗೆ ಡಬಲ್ ಗೆಲುವು ಎಂದಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸುಧಾ ಮೂರ್ತಿ ಅವರು, ''ನನಗೆ ತುಂಬಾ ಸಂತೋಷವಾಗುತ್ತಿದೆ. ಒಬ್ಬ ಭಾರತೀಯಳಾಗಿ ಸಂತೋಷ ಪಡುತ್ತಿದ್ದೇನೆ. ಕನ್ನಡಿಗಳಾಗಿ ತುಂಬಾ ಸಂತೋಷವಾಗುತ್ತಿದೆ. ಲೇಖಕಿಯಾಗಿ ಮತ್ತು ಮಹಿಳೆಯಾಗಿ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ. ಹೆಮ್ಮೆಯ ವಿಷಯ. ಅವರು ಒಬ್ಬ ಮಹಾನ್ ಬರಹಗಾರ್ತಿ ಮತ್ತು ಇದು ಒಂದು ಉತ್ತಮ ಆರಂಭ. ಅವರಂತಹ ಅನೇಕ ಜನರು ವಿವಿಧ ಭಾಷೆಗಳಲ್ಲಿ ಬೂಕರ್ ಪ್ರಶಸ್ತಿಯನ್ನು ಪಡೆಯಲಿ" ಎಂದು ತಿಳಿಸಿದರು.