CM Seat Fight | ಎಂ.ಬಿ. ಪಾಟೀಲಗಿಂತ ಹಿರಿಯರು ಇದ್ದಾರೆ: ಶಿವಾನಂದ ಪಾಟೀಲ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚಿಸುತ್ತಿರುವ ವಿಷಯವೇ ಅಪ್ರಸ್ತುತವಾಗಿದೆ. ಅಂತಹ ಸಮಯ ಬಂದರೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗಿಂತ ಹಿರಿಯರು ಕಾಂಗ್ರೆಸ್‌ನಲ್ಲಿ ಇದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ
ಕಳೆದು ಒಂದು ವಾರದಿಂದ ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುವ ಪೈಪೋಟಿ ಈಗ ನಾಯಕರ ನಡುವಿನ ಪರಸ್ಪರ ಗುದಮುರಗಿಯ ಸ್ವರೂಪ ಪಡೆದುಕೊಂಡಿದೆ.
ಆರ್ ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಅವರ ಹೆಸರುಗಳ ಬಳಿಕ ಇದೀಗ, ಸಚಿವ ಶಿವಾನಂದ ಪಾಟೀಲರು ಮತ್ತೊಂದು ಹೇಳಿಕೆ ನೀಡುವ ಮೂಲಕ ಸಿಎಂ ಗಾದಿಯ ಪೈಪೋಟಿಯ ಸುದ್ದಿಯನ್ನು ಜೀವಂತವಾಗಿ ಇಡುವ ಪ್ರಯತ್ನ ಮಾಡಿದ್ದಾರೆ.
"ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚಿಸುತ್ತಿರುವ ವಿಷಯವೇ ಅಪ್ರಸ್ತುತವಾಗಿದೆ. ಅಂತಹ ಸಮಯ ಬಂದರೆ ಬೃಹತ್ ಕೈಗಾರಿಕಾ ಸಚಿವ ಡಾ ಎಂ.ಬಿ. ಪಾಟೀಲ ಅವರಿಗಿಂತ ಹಿರಿಯರು ಕಾಂಗ್ರೆಸ್‌ನಲ್ಲಿ ಇದ್ದಾರೆ" ಎಂದು ಹೇಳುವ ಮೂಲಕ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಸಚಿವ ಸಹೋದ್ಯೋಗಿ ಎಂ ಬಿ ಪಾಟೀಲರಿಗೆ ಟಕ್ಕರ್ ಕೊಟ್ಟಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಸರಣಿ ದೆಹಲಿ ಭೇಟಿಗಳ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ರಾಜ್ಯದಲ್ಲಿ ನಡೆಯುತ್ತಿರುವ ಪ್ರಸ್ತುತ ಬೆಳವಣಿಗೆಗಳು ಮತ್ತು ಪಕ್ಷದ ವಿಚಾರಗಳ ಕುರಿತು ಅವರು ದೆಹಲಿ ಭೇಟಿ ವೇಳೆ ಚರ್ಚಿಸಿರಬಹುದು ಅಷ್ಟೇ" ಎಂದರು.
ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಿದರೆ ಎಂ.ಬಿ. ಪಾಟೀಲ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆಗೆ, "ಅವರಿಗಿಂತ ಹಿರಿಯರು ಸಾಕಷ್ಟು ಮಂದಿ ಇದ್ದಾರೆ, ಪಕ್ಷದಲ್ಲಿ.." ಎಂದು ಉತ್ತರಿಸಿದರು. ಆ ಮೂಲಕ ಡಾ ಎಂ ಬಿ ಪಾಟೀಲರಿಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ.