ಮತ್ತೊಂದು ಸ್ಲೀಪರ್‌ ಬಸ್‌ ಬೆಂಕಿಗಾಹುತಿ; ಪ್ರಯಾಣಿಕರು ಸೇಫ್
x
ಶಿವಮೊಗ್ಗದಲ್ಲಿ ಬಸ್‌ ಅಪಘಾತ

ಮತ್ತೊಂದು ಸ್ಲೀಪರ್‌ ಬಸ್‌ ಬೆಂಕಿಗಾಹುತಿ; ಪ್ರಯಾಣಿಕರು ಸೇಫ್

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಸೀ ಬರ್ಡ್ ಬಸ್ ದುರಂತದ ಕರಾಳ ನೆನಪು ಮಾಸುವ ಮುನ್ನವೇ ಶಿವಮೊಗ್ಗದ ಹೊಸನಗರದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ.


ಇತ್ತೀಚೆಗೆ ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಬಸ್‌ ಅಪಘಾತದ ದುರಂತ ಕರಾಳ ನೆನಪು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹದ್ದೇ ಒಂದು ಘಟನೆ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಮಂಗಳವಾರ ತಡರಾತ್ರಿ ಭೀಕರ ಬಸ್ ದುರಂತವೊಂದು ಸಂಭವಿಸಿದ್ದು, ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.

ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಈ ಬಸ್ಸಿನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಮತ್ತು ಬಸ್ ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದಿದ್ದು ಹೇಗೆ?

ಈ ಅವಘಡವು ಹೊಸನಗರ ತಾಲೂಕಿನ ಅರಸಾಳು ಮತ್ತು ಸುಡೂರು ಗ್ರಾಮಗಳ ನಡುವೆ ನಡೆದಿದೆ. ಇದು ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ. ಶ್ರೀ ಅನ್ನಪೂರ್ಣೇಶ್ವರಿ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಈ ಬಸ್ ಹೊಸನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಚಲಿಸುತ್ತಿರುವಾಗಲೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಬರಿಗೊಂಡ ಚಾಲಕ ಬಸ್ಸನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.

ಪ್ರಯಾಣಿಕರ ಸ್ಥಿತಿ

ಈವರೆಗೆ ಯಾವುದೇ ಸಾವು ನೋವಿನ ಬಗ್ಗೆ ದಾಖಲೆಯಾಗಿಲ್ಲ. ಈ ಬಸ್ಸಿನಲ್ಲಿ ಚಾಲಕ ಸೇರಿ ಒಟ್ಟು 40 ಪ್ರಯಾಣಿಕರಿದ್ದರು. ಬೆಂಕಿ ಹೊತ್ತಿಕೊಂಡ ತಕ್ಷಣ ಪ್ರಯಾಣಿಕರು ಬಸ್ಸಿನಿಂದ ಹೊರಬರಲು ಪ್ರಯತ್ನಿಸಿದ್ದಾರೆ. ಈ ಗೊಂದಲ ಹಾಗೂ ಅಪಘಾತದ ಭೀಕರತೆಯಿಂದಾಗಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ

ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಮತ್ತು ರಿಪ್ಪನ್‌ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರೂ, ಅಷ್ಟರಲ್ಲಾಗಲೇ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಚಿತ್ರದುರ್ಗ ಬಸ್‌ ಅಪಘಾತ

ಈ ಅಪಘಾತವು ಇತ್ತೀಚೆಗೆ (ಡಿಸೆಂಬರ್ 25, 2025) ಚಿತ್ರದುರ್ಗದ ಹಿರಿಯೂರು ಬಳಿ ನಡೆದ 'ಸೀ ಬರ್ಡ್' ಬಸ್ ಅಪಘಾತವನ್ನು ಹೋಲುತ್ತಿದೆ. ಅಲ್ಲಿಯೂ ಸಹ ಕಂಟೈನರ್ ಲಾರಿ ಮತ್ತು ಬಸ್ ನಡುವೆ ಡಿಕ್ಕಿ ಸಂಭವಿಸಿ ಡೀಸೆಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿಕೊಂಡಿತ್ತು, ಆ ಘಟನೆಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದರು. ನಂದ್ಯಾಲದ ಘಟನೆಯಲ್ಲಿಯೂ ಸಹ ಸ್ಥಳೀಯರು ಮತ್ತು ಬಸ್ ಕ್ಲೀನರ್ ಸಮಯಪ್ರಜ್ಞೆ ಮೆರೆದು ಕಿಟಕಿ ಗಾಜುಗಳನ್ನು ಒಡೆದಿದ್ದರಿಂದ 36 ಪ್ರಯಾಣಿಕರು ಪಾರಾಗಿದ್ದಾರೆ.

Read More
Next Story