ಶಿರೂರು ಗುಡ್ಡ ಕುಸಿತ | ಸುಳಿವು ನೀಡಿತು ತೇಲಿಬಂದ ಅಕೇಶಿಯಾ ತುಂಡು!
x
ಅಕೇಶಿಯಾ ಮರದ ತುಂಡು

ಶಿರೂರು ಗುಡ್ಡ ಕುಸಿತ | ಸುಳಿವು ನೀಡಿತು ತೇಲಿಬಂದ ಅಕೇಶಿಯಾ ತುಂಡು!

ಗುಡ್ಡ ಕುಸಿತ ಘಟನೆಯಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ಶಂಕಿಸಲಾಗಿರುವ ಅರ್ಜುನ್ ಚಾಲನೆ ಮಾಡುತ್ತಿದ್ದ ಟ್ರಕ್​ನಲ್ಲಿ ತುಂಬಿದ್ದ ಅಕೇಶಿಯಾ ಮರದ ತುಂಡೊಂದು ಗಂಗಾವಳಿ ನದಿಯಲ್ಲಿ ತೇಲಿಬಂದಿದೆ. ಆ ಮೂಲಕ ಲಾರಿ ನದಿಯಲ್ಲಿಯೇ ಮುಳುಗಿರುವುದು ಖಚಿತವಾಗಿದೆ.


ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಇಂದು ಹನ್ನೊಂದನೆ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ನಾಪತ್ತೆಯಾದ ಟ್ರಕ್‌ ಗಂಗಾವಳಿ ನದಿಯಲ್ಲಿದೆ ಎಂಬ ಮಹತ್ವದ ಸುಳಿವು ಸಿಕ್ಕಿದೆ.

ಗಂಗಾವಳಿ ನದಿಯಲ್ಲಿ ಬೂಮ್ ಫೋಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಿದ್ದ ವೇಳೆ ಫೋಕ್ಲೇನ್ ಬಕೆಟ್​ಗೆ ಕಬ್ಬಿಣ ಬಡಿದಿತ್ತು. ಈ ಹಿನ್ನಲೆಯಲ್ಲಿ ವಾಹನ ನದಿಯಲ್ಲೇ ಇದೆ ಎನ್ನಲಾಗಿತ್ತು. ಈ ಲಾರಿಯನ್ನು ಮೇಲೆತ್ತಲು ಕಾರ್ಯಾಚರಣೆ ನಡೆಯುತ್ತಿದೆ.

ಅಲ್ಲದೆ, ಟ್ರಕ್‌ ಚಾಲಕ ಅರ್ಜುನ್‌ನ ಟ್ರಕ್‌ನಲ್ಲಿದ್ದ ಅಕೇಶಿಯಾ ಮರದ ತುಂಡೊಂದು ನದಿಯಲ್ಲಿ ಪತ್ತೆಯಾಗಿದೆ. ಈ ಮರದ ತುಂಡು ಕೂಡ ಲಾರಿ ನದಿಯಲ್ಲಿಯೇ ಇರುವುದನ್ನು ಖಚಿತಪಡಿಸಿದೆ. ಗಂಗಾವಳಿ ನದಿಯಲ್ಲಿ ತೇಲಿ ಬಂದು 12 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಅಕೇಶಿಯಾ ತುಂಡು ದೊರೆತಿದೆ. ತೇಲಿಬಂದ ಮರದ ತುಂಡನ್ನು ನದಿ ತೀರ ಪ್ರದೇಶದ ಜನ ತೆಗೆದುಕೊಂಡು ಮನೆಗೆ ಕೊಂಡೊಯ್ದಿದ್ದರು. ತೇಲಿಬಂದ ತುಂಡಲ್ಲಿ ಅರಣ್ಯ ಇಲಾಖೆಯ ಸೀಲ್ ಮಾರ್ಕ್​ ಇರುವುದನ್ನು ಸ್ಥಳಕ್ಕೆ ಭೇಟಿ ನೀಡಿದ ಕಾಣೆಯಾದ ಟ್ರಕ್ ಮಾಲೀಕರು ದೃಢಪಡಿಸಿದ್ದಾರೆ.

ಸದ್ಯ ಲಾರಿ ಚಾಲಕ ಅರ್ಜುನ್‌ ಸಮೇತ ಕಾಣೆಯಾಗಿರುವ ಟ್ರಕ್‌ಗಾಗಿ ಹುಡುಕಾಟ ನಡೆಯುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ ಕೇರಳ ಮೂಲದ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದಲ್ಲಿ ನಿರಂತರವಾಗಿ ಡ್ರೋನ್ ಮೂಲಕ ಕಾರ್ಯಾಚರಣೆ ಮಾಡಲಾಗಿತ್ತು. ಇದೀಗ ಡ್ರೋನ್ ಕಾರ್ಯಾಚರಣೆ ಮುಕ್ತಾಯವಾಗಿದ್ದು, ನಿನ್ನೆ ನೌಕಾ ದಳ, ಸೇನೆ ನೀಡಿದ ಮಾಹಿತಿಯಂತೆ ನದಿಯಲ್ಲಿ ಲಾರಿ ರೀತಿಯ ವಸ್ತು ಇದೆ ಎಂದು ಡ್ರೋನ್ ಖಚಿತಪಡಿಸಿದೆ.

ಇನ್ನು ಗಂಗಾವಳಿ ನದಿಯ ತಟದಿಂದ ಸುಮಾರು 60 ಮೀಟರ್ ದೂರ ಹಾಗೂ 9 ಮೀಟರ್ ಆಳದಲ್ಲಿ ಟ್ರಕ್ ಸಿಲುಕಿರುವ ಶಂಕೆ ಇದೆ. ಅದರ ಕ್ಯಾಬಿನ್ ನಲ್ಲಿ ಅರ್ಜುನ್ ಇದ್ದಾನೋ ಇಲ್ಲವೋ ಎಂಬುದು ಇನ್ನೂ ಖಚಿತವಾಗಿಲ್ಲ. ಗುರುವಾರ ನೀರಿನ ರಭಸ ಹೆಚ್ಚಿತ್ತು. ಶುಕ್ರವಾರವೂ ಕಾರ್ಯಾಚರಣೆ ಮುಂದುವರಿದಿದೆ.

ತಮಿಳುನಾಡು ಚಾಲಕ ಶರವಣ ಶವ ಪತ್ತೆ

ಗೋಕರ್ಣ ಕಡಲ ಸಮೀಪ ಇತ್ತೀಚೆಗೆ ದೊರೆತಿದ್ದ ಸೊಂಟದ ಕೆಳಭಾಗ ಮಾತ್ರವಿದ್ದ ಮೃತದೇಹ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಶರವಣ ಅವರದ್ದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಗುಡ್ಡಕುಸಿತದ ವೇಳೆ ಸಮುದ್ರಕ್ಕೆ ತೇಲಿಹೋಗಿದ್ದ ಟ್ಯಾಂಕರ್‌ನಲ್ಲಿದ್ದ ಚಾಲಕನ ಮೃತದೇಹ ಅಂದೇ ಸಮುದ್ರದಲ್ಲಿ ಪತ್ತೆಯಾಗಿತ್ತು. ಆದರೆ ಮತ್ತೊಬ್ಬ ಚಾಲಕ ಶರವಣ ಮೃತದೇಹ ಪತ್ತೆಯಾಗಿರಲಿಲ್ಲ. ಆದರೆ ಘಟನೆ ನಡೆದ ಒಂದೆರಡು ದಿನಗಳ ಬಳಿಕ ಸೊಂಟದ ಕೆಳಭಾಗ ಇರುವ ಮೃತದೇಹವೊಂದು ಪತ್ತೆಯಾಗಿತ್ತು. ಶವವನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಿದ್ದು ಇದೀಗ ಅದು ಶರವಣ ಅವರದ್ದೇ ಎಂದು ದೃಢಪಟ್ಟಿದೆ.

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿದದಿಂದ ಸುಮಾರು ಹತ್ತಕ್ಕೂ ಹೆಚ್ಚು ಜನ ಮೃತಪಟ್ಟಿದ್ದು, ಒಟ್ಟು ಎಂಟು ಜನರ ಮೃತದೇಹಗಳು ಪತ್ತೆಯಾಗಿವೆ. ಕೇರಳ ಮೂಲದ ಟ್ರಕ್‌ ಚಾಲಕ ಅರ್ಜುನ್‌ ಸೇರಿದಂತೆ ಇನ್ನೂ ಮೂವರ ಮೃತದೇಹಕ್ಕಾಗಿ ಕಳೆದ ಹತ್ತು ದಿನಗಳಿಂದ ತೀವ್ರ ಶೋಧ ಮುಂದುವರಿದಿದೆ.

Read More
Next Story