ಶಿರೂರು ಗುಡ್ಡ ಕುಸಿತ | ಸಮುದ್ರದಲ್ಲಿ ಮೃತದೇಹ ಪತ್ತೆ, ಲಾರಿ ಚಾಲಕ ಶವ ಶಂಕೆ
x
ಶಿರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ

ಶಿರೂರು ಗುಡ್ಡ ಕುಸಿತ | ಸಮುದ್ರದಲ್ಲಿ ಮೃತದೇಹ ಪತ್ತೆ, ಲಾರಿ ಚಾಲಕ ಶವ ಶಂಕೆ

ಮೃತದೇಹವು ಗುಡ್ಡ ಕುಸಿತದಲ್ಲಿ ಮೃತಪಟ್ಟದವರದ್ದೇ ಅಥವಾ ಅಲ್ಲವೇ ಎಂಬುದನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಸದ್ಯ ಕರಾವಳಿ ಪೊಲೀಸರು ಮೃತದೇಹವನ್ನು ದಡಕ್ಕೆ ತಂದು, ಡಿಎನ್​ಎ ಪರೀಕ್ಷೆಗೆ ಕಳುಹಿಸಿದ್ದಾರೆ.


Click the Play button to hear this message in audio format

ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಸೇರಿದಂತೆ ಒಟ್ಟು ಮೂರು ಜನರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದೀಗ ಗುಡ್ಡ ಕುಸಿತದಿಂದ 25 ಕಿಮೀ ದೂರದ ಹೊನ್ನಾವರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಈ ಶವ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋದ ಲಾರಿ ಚಾಲಕ ಅರ್ಜುನ್​ (30) ಅವರದ್ದು ಎಂದು ಶಂಕಿಸಲಾಗಿದೆ. ಮೃತದೇಹ ಯಾರದ್ದು ಅಂತ ಇನ್ನೂ ದೃಢವಾಗಿಲ್ಲ.

ಮೃತದೇಹವು ಗುಡ್ಡ ಕುಸಿತದಲ್ಲಿ ಮೃತಪಟ್ಟದವರದ್ದೇ ಅಥವಾ ಅಲ್ಲವೇ ಎಂಬುದನ್ನು ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಸದ್ಯ ಕರಾವಳಿ ಪೊಲೀಸರು ಮೃತದೇಹವನ್ನು ದಡಕ್ಕೆ ತಂದು, ಡಿಎನ್​ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಡಿಎನ್​ಎ ಪರೀಕ್ಷೆಗಾಗಿ ಅರ್ಜನ್​ ಸಹೋದರ ಅಭಿಜಿತ್​​ನ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.

ಜುಲೈ 16 ರಂದು ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಒಟ್ಟು 11 ಜನ ಮೃತಪಟ್ಟಿದ್ದು,ಎಂಟು ಮಂದಿ ಮೃತದೇಹ ಪತ್ತೆಯಾಗಿದೆ. ಗುಡ್ಡ ಭೂಕುಸಿತದಲ್ಲಿ ಕೇರಳದ ಕೊಝಿಕ್ಕೋಡ್ ಮೂಲದ ಲಾರಿ ಚಾಲಕ ಅರ್ಜುನ್ ನಾಪತ್ತೆಯಾಗಿದ್ದಾರೆ. ಅರ್ಜುನ್​ ಲಾರಿ ಸಮೇತ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಸತತ 13 ದಿನಗಳ ಕಾಲ ಹುಡುಕಾಟ ನಡೆಸಿದರೂ ಅರ್ಜುನ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

ಭೂ ಕುಸಿತದಿಂದ ನದಿಯಲ್ಲಿ ಶೇಖರಣೆಯಾದ ಮಣ್ಣಿನಡಿ ಹೂತು ಹೋಗಿದ್ದ ಲಾರಿಯೊಳಗೆ ಅರ್ಜುನ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ವಿವಿಧ ಸಾಧನಗಳನ್ನು ಬಳಸಿ ಶೋಧ ನಡೆಸಿದಾಗ ನದಿಪಾತ್ರದಲ್ಲಿ ಯಾವುದೇ ದೇಹ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ಹೆಚ್ಚಿನ ನೀರಿನ ಪ್ರವಾಹ ಮತ್ತು ನದಿಯ ಆಳವು ರಕ್ಷಣಾ ತಂಡಗಳಿಗೆ ಪ್ರಮುಖ ಸವಾಲಾಗಿದೆ. ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​​ಗೆ ತಿಳಿಸಿದೆ.

ಸರ್ಕಾರದ ಪರ ವಕೀಲ ಅಡ್ವೋಕೇಟ್​ ಜನರಲ್​ ಶಶಿಕಿರಣ್ ​ಅವರು ಸೋಮವಾರ ನ್ಯಾಯಮೂರ್ತಿ ಎನ್​. ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್​ ಅವರಿದ್ದ ವಿಭಾಗೀಯ ಪೀಠಕ್ಕೆ ಈ ಮಾಹಿತಿ ತಿಳಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿ ಎಲ್ಲ ರೀತಿಯ ಅಗತ್ಯವಿರುವ ಕ್ರಮಗಳನ್ನು ಕೊಂಡಿದ್ದಾರೆ. ಮೂವರು ಕಣ್ಮರೆಯಾಗಿದ್ದು 19 ದಿನಗಳು ಕಳೆದಿವೆ. ಜೊತೆಗೆ ಅತೀ ಹೆಚ್ಚು ಮಳೆಯ ಕಾರಣದಿಂದ ಹವಾಮಾನ ಇಲಾಖೆ ರೆಡ್​ ಅಲರ್ಟ್​ ನೀಡಿದೆ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಳಿಕ ಮುಂದುವರಿಸಲಾಗುವುದು ಎಂದು ಪೀಠಕ್ಕೆ ಭರವಸೆ ನೀಡಿದರು.

Read More
Next Story