Shiradi Ghat: ಶಿರಾಡಿ ಘಾಟ್​​ ಬಂದ್​ಗೆ ಜಿಲ್ಲಾಡಳಿತ ವಿರೋಧ : ಕಾಮಗಾರಿ ವೇಗಕ್ಕೆ ಅಡಚಣೆ; ಜನರಿಗೆ ತಪ್ಪದ ಪರದಾಟ
x

Shiradi Ghat: ಶಿರಾಡಿ ಘಾಟ್​​ ಬಂದ್​ಗೆ ಜಿಲ್ಲಾಡಳಿತ ವಿರೋಧ : ಕಾಮಗಾರಿ ವೇಗಕ್ಕೆ ಅಡಚಣೆ; ಜನರಿಗೆ ತಪ್ಪದ ಪರದಾಟ

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ನಡೆಸಲು ರಸ್ತೆ ಬಂದ್ ಮಾಡುವ ಯೋಜನೆಯನ್ನು ನಾನಾ ಸಂಘಟನೆಗಳು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.


ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಶಿರಾಡಿ ಘಾಟಿಯಲ್ಲಿ (Shiradi Ghat) ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಜೂನ್ 30ರೊಳಗೆ ಪೂರ್ಣಗೊಳಿಸಬೇಕಿರುವ ಕಾರಣ ಒಂದು ತಿಂಗಳು ವಾಹನ ಸಂಚಾರ (Traffic alert) ಸ್ಥಗಿತಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿದ ಮನವಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದ್ದು, ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ಕಾಮಗಾರಿಗೆ ನಡೆಸುವಂತೆ ಕೋರಿದೆ ‌

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಾಮಗಾರಿ ನಡೆಸಲು ರಸ್ತೆ ಬಂದ್ ಮಾಡುವ ಯೋಜನೆಯನ್ನು ನಾನಾ ಸಂಘಟನೆಗಳು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಆಗುವ ನಷ್ಟವನ್ನು ಪರಿಗಣಿಸಿ ಅನ್ಯ ಮಾರ್ಗವನ್ನು ಹುಡುಕುವಂತೆ ಕೋರಿದ್ದಾರೆ.

ಮಾರ್ಚ್ 15ರಿಂದ ಏಪ್ರಿಲ್‌ ಅಂತ್ಯದವರೆಗೆ ಶಿರಾಡಿಯಲ್ಲಿ ವಾಹನ ಸಂಚಾರ ನಿರ್ಬಂಧಿಸಲು ರಸ್ತೆ ಪ್ರಾಧಿಕಾರ ಯೋಜನೆ ರೂಪಿಸಿತ್ತು. ಇದೀಗ ಏಕಮುಖ ಸಂಚಾರಕ್ಕೆ ಅವಕಾಶ ನೀಡಲು ಉದ್ದೇಶಿಸಿದೆ.

ಘಾಟಿ ವ್ಯಾಪ್ತಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಿಸುತ್ತಿರುವುದರಿಂದ ಒಂದು ಪಥಕ್ಕೆ ಕಾಂಕ್ರಿಟ್‌ ಹಾಕಿದಾಗ ಅದರ ಕ್ಯೂರಿಂಗ್‌ಗೆ 25 ದಿನಗಳು ಬೇಕಾಗುತ್ತದೆ. ಹೀಗಾಗಿ ಈ ವೇಳೆ ವಾಹನ ಸಂಚಾರ ನಿಷೇಧ ಮಾಡಬೇಕಾಗುತ್ತದೆ ಎಂದು ಗುತ್ತಿಗೆದಾರರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಸ್ಥಳೀಯರ ಒತ್ತಾಯಕ್ಕೆ ಸಂಸದ ಶ್ರೇಯಸ್‌ ಎಂ.ಪಟೇಲ್‌ಗೆ ಮಣಿಯುವಂತಾಗಿದೆ.

ರಸ್ತೆ ಕುಸಿಯುವ ಜಾಗದಲ್ಲಿ ಅಪಾಯ

ಗುಂಡ್ಯದಿಂದ ಸಕಲೇಶಪುರಕ್ಕೆ 40 ಕಿ.ಮೀ.ಇದ್ದು, ಸಕಲೇಶಪುರ ತಾಲೂಕಿನ ಮಾರನಹಳ್ಳಿವರೆಗೂ ರಸ್ತೆ ಕಾಮಗಾರಿ ಮುಗಿದಿದೆ. ಮಾರನಹಳ್ಳಿ, ದೊಡ್ಡ ತಪ್ಪಲು, ದೋಣಿಗಲ್‌ ಗ್ರಾಮದವರೆಗೂ ಅಲ್ಲಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಚತುಷ್ಪಥ ಕಾಂಕ್ರಿಟ್‌ ರಸ್ತೆ ನಿರ್ಮಾಣ ಸಂಬಂಧ ಈವರೆಗೆ 4.8 ಕಿ.ಮೀ. ರಸ್ತೆ ಕಾಮಗಾರಿ ಮುಗಿದಿದ್ದು, ದೊಡ್ಡ ತಪ್ಪಲು ಗ್ರಾಮದ ಬಳಿ ಭೂ ಕುಸಿತವಾಗುವ ಸಂಭಾವ್ಯ ಸ್ಥಳದಲ್ಲಿ ರಸ್ತೆ ಜತೆಗೆ ತಡೆಗೋಡೆ ನಿರ್ಮಿಸಲಾಗುವುದು ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

ವಾಣಿಜ್ಯ ನಷ್ಟ

ಸಕಲೇಶಪುರ-ಶಿರಾಡಿ ಮಾರ್ಗದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಭಾಗದಲ್ಲಿ ರಸ್ತೆ ಬಂದ್‌ ಮಾಡಿದರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಾಣಿಜ್ಯ, ವಹಿವಾಟು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಬಂದ್‌ ಆದಂತಾಗುತ್ತದೆ. ಕಾಮಗಾರಿಗಾಗಿ ಹೆದ್ದಾರಿ ಬಂದ್‌ ಬದಲು ದೋಣಿಗಾಲ್‌ನಿಂದ ಕಪ್ಪಳ್ಳಿವರೆಗೆ ಏಕಮುಖ ಸಂಚಾರ ವ್ಯವಸ್ಥೆಗೆ ಜಿಲ್ಲಾಡಳಿತ ನಿರ್ಧರಿಸಿದೆ. ದೋಣಿಗಾಲ್‌, ಮಂಜರಾಬಾದ್‌ ಕೋಟೆ ಮುಂಭಾಗ ತುಂಬಾ ಕಡಿದಾದ ಇಳಿಜಾರು ಇರುವುದರಿಂದ ಆ ಸ್ಥಳದಲ್ಲಿಮಳೆಗಾಲ ಪ್ರಾರಂಭ ಆಗುವುದರೊಳಗೆ ಕಾಮಗಾರಿ ಶೀಘ್ರ ಮುಗಿಸುವಂತೆ ಹೆದ್ದಾರಿ ಎಂಜಿನಿಯರ್‌ಗಳಿಗೆ ಜಿಲ್ಲಾಡಳಿತ ಆದೇಶಿಸಿದೆ ಎನ್ನಲಾಗಿದೆ.

ಸರಕು ಸಾಗಣೆಗೆ ಸಮಸ್ಯೆ

ಪ್ರಯಾಣಿಕರ ಅನುಕೂಲಕ್ಕಾಗಿ ಏಕಮುಖ ಸಂಚಾರಕ್ಕೆ ಮಾತ್ರ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಮಾರ್ಗದಲ್ಲಿ ಹಿಂದಿನ ವರ್ಷ ಬಂದ್‌ ಮಾಡಿದ್ದರಿಂದ ಪ್ರಯಾಣಿಕ ವಾಹನ ಹಾಗೂ ಸರಕು ಸಾಗಣೆಗೆ ಭಾರಿ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಈ ವರ್ಷ ವಾಹನಗಳ ಸಂಚಾರ ಬಂದ್‌ ಮಾಡುವುದಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿಏಕಮುಖ ಸಂಚಾರ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಏಕಮುಖ ಸಂಚಾರದ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದಿದ್ದಾರೆ ಸಕಲೇಶಪುರ ಉಪವಿಭಾಗಾಧಿಕಾರಿ ಶ್ರುತಿ.

ಜನರಿಗೆ ಪರದಾಟ

ದಶಕಗಳಿಂದ ಈ ಹೆದ್ದಾರಿ ಮೂಲಕ ಸಾಗುವುದು ಜನರಿಗೆ ಪರದಾಟವೇ ಸರಿ. ಮಳೆಗಾಲದಲ್ಲಿ ಭೂಕುಸಿತ, ಬೇಸಿಗೆಯಲ್ಲಿ ರಸ್ತೆ ಗುಂಡಿ... ಹೀಗೆ ಒಂದಲ್ಲ ಒಂದು ಸಮಸ್ಯೆಯಿಂದ ನೆಮ್ಮದಿಯ ವಾಹನ ಸವಾರಿ ಸಾರ್ವಜನಿಕರಿಗೆ ಗಗನಕುಸುಮ. ಈ ಬಾರಿಯೂ ಹೆದ್ದಾರಿ ಕೆಲ ಕಾಲ ಸ್ಥಗಿತವಾದರೆ ಮತ್ತೆ ವಾಹಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ತಪ್ಪದು.

Read More
Next Story