ಶಿರಾಡ್ ಘಾಟಿ ಗುಡ್ಡ ಕುಸಿತ | NHAI ಅಧಿಕಾರಿಗೆ ಸಿಎಂ ತರಾಟೆ; ಗಡ್ಕರಿಗೆ ಪತ್ರ ಬರೆಯಲು ತೀರ್ಮಾನ
x

ಶಿರಾಡ್ ಘಾಟಿ ಗುಡ್ಡ ಕುಸಿತ | NHAI ಅಧಿಕಾರಿಗೆ ಸಿಎಂ ತರಾಟೆ; ಗಡ್ಕರಿಗೆ ಪತ್ರ ಬರೆಯಲು ತೀರ್ಮಾನ


ಶಿರಾಡಿ ಘಾಟಿ ಗುಡ್ಡ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತು ಕೇಂದ್ರ ಸಚಿವ ಗಡ್ಕರಿ ಅವರಿಗೆ ಪತ್ರ ಬರೆದು ವಿವರಿಸಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ.

ಶಿರಾಡ್ ಘಾಟಿ ಗುಡ್ಡ ಕುಸಿತದ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡದೊಂದಿಗೆ ರಸ್ತೆ ಮಾರ್ಗವಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು, ಗುಡ್ಡ ಕುಸಿತದ ಭೀಕರತೆ ಕಂಡು ಶಾಕ್‌ ಆಗಿದ್ದಾರೆ. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಅವರಿಗೆ ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ರಸ್ತೆ ನಿರ್ಮಾಣಕ್ಕಾಗಿ ಗುಡ್ಡಗಳನ್ನು 90 ಡಿಗ್ರಿಯಲ್ಲಿ ನೇರವಾಗಿ ಕೊರೆದಿರುವುದಕ್ಕೆ ಅಸಮಾಧಾನಗೊಂಡು ಗುಡ್ಡ ಕುಸಿತಕ್ಕೆ ಇದೂ ಕೂಡ ಪ್ರಮುಖ ಕಾರಣ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸ್ತೆ ಕಾಮಗಾರಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಿಎಂ ಗೆ ವಿವರಿಸುತ್ತಾ, ʻʻಒಟ್ಟು 45 km ನಲ್ಲಿ 35 km ಹೈವೇ ಕಾಮಗಾರಿ ಮುಗಿದಿದೆ. 10 km ಬಾಕಿ ಇದೆ. ಆದರೆ ಇಲ್ಲಿಯವರೆಗೂ ಎಲ್ಲೂ ತಡೆಗೋಡೆಗಳನ್ಜು ನಿರ್ಮಿಸಿಲ್ಲ, ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿ ಅದರ ಆಧಾರದಲ್ಲಿ ಸುರಕ್ಷತಾ ಮುಂಜಾಗ್ರತಾ ಕ್ರಮಗಳನ್ನು ಕೂಡ ಕೈಗೊಂಡಿಲ್ಲʼʼ ಎಂದು ವಿವರಿಸಿದರು.

ಮೊಣಕಾಲುದ್ದುದ ಕೆಸರಲ್ಲೇ ಗುಡ್ಡ ಕುಸಿತದ ಜಾಗದುದ್ದಕ್ಕೂ ನಡೆದು ಪರಿಶೀಲಿಸಿದ ಮುಖ್ಯಮಂತ್ರಿಗಳು, ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದ SDRF ತಂಡದೊಂದಿಗೆ ಕೆಲ ಹೊತ್ತು ಚರ್ಚಿಸಿದರು. ಬಳಿಕ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ‌ ಅಧಿಕಾರಿ ವಿಲಾಸ್ ಅವರಿಗೆ ಸಿದ್ದರಾಮಯ್ಯ ಅವರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ

  • ಹಣ ಉಳಿಸುವ ಉದ್ದೇಶದಿಂದ ಕಡಿಮೆ ಭೂಮಿ ಸ್ವಾಧೀನಗೊಳಿಸಿಕೊಳ್ಳುವುದು, ಬಳಿಕ ಖರ್ಚು ಉಳಿಸಲು 90 ಡಿಗ್ರಿಯಲ್ಲಿ ಗುಡ್ಡಗಳನ್ನು ಕೊರೆದಿದ್ದೀರಿ. ಇದು ಅವೈಜ್ಞಾನಿಕ ಕಾಮಗಾರಿ ಅಲ್ಲವೇ?
  • ಗುಡ್ಡಗಳನ್ನು 30 ರಿಂದ 45 ಡಿಗ್ರಿಯಲ್ಲಿ ಕೊರೆದು ತಡೆಗೋಡೆ ನಿರ್ಮಿಸಿದ್ದರೆ ಮಣ್ಣು ಕುಸಿತವನ್ನು ತಡೆಯಬಹುದಿತ್ತಲ್ಲವೇ?
  • ಕಾಮಗಾರಿ ಆರಂಭಿಸುವ ಮೊದಲು ಮಣ್ಣಿನ ಗುಣಮಟ್ಟ ಪರೀಕ್ಷೆ ನಡೆಸಿದ್ದೀರಾ? ಅದಕ್ಕೆ ತಕ್ಕಂತೆ ಮುಂಜಾಗ್ರತಾ ಕ್ರಮ ಏಕೆ ವಹಿಸಿಲ್ಲ? ಎಂದು ಪ್ರಶ್ನಿಸಿದರು.

ವಿಲಾಸ್ ಅವರಿಂದ ಸೂಕ್ತ ಉತ್ತರ ಬರದಿದ್ದಾಗ ಒಟ್ಟಾರೆ ಸ್ಥಿತಿ ಗತಿ ಕುರಿತು ಕೇಂದ್ರ ಸಚಿವರಾದ ಗಡ್ಕರಿ ಅವರಿಗೆ ಪತ್ರ ಬರೆಯುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು. ಈ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಸೇರಿ ಹಿರಿಯ ಅಧಿಕಾರಿಗಳ ತಂಡವೂ ಸಿಎಂ ಜೊತೆಗಿತ್ತು.

Read More
Next Story